ಗೋವುಗಳಿಗಾಗಿ ಗೋಶಾಲೆ ನಿರ್ಮಾಣ
ಚಿಕ್ಕಮಗಳೂರು : ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗೆ ಒತ್ತು ನೀಡುವ ಸಲುವಾಗಿ ಹಾಗೂ ಗೋವುಗಳ ಉಳಿವಿಗಾಗಿ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ ಜುಲೈ ತಿಂಗಳಿನಲ್ಲಿ ಐದು ಗೋಶಾಲೆಗಳನ್ನು ಲೋಕಾರ್ಪಣೆ ಮಾಡಲಿದೆ. ನಿರ್ಮಾಣ ಮಾಡಿರುವ ಈ ಗೋಶಾಲೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ, ಕೊಟ್ಟಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಗೋವುಗಳ ಆರೋಗ್ಯದ ಮೇಲೆ ನಿಗಾವಹಿಸಲು ಪಶುವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಗೋಶಾಲೆ ಪ್ರಾರಂಭ ಮತ್ತು ನಿರ್ವಹಣೆಗೆ 50 ಲಕ್ಷ ರೂ. ಗಳನ್ನು ಸರ್ಕಾರ ನಿಗದಿಪಡಿಸಿದೆ. ಪ್ರತಿಯೊಂದು ಗೋಶಾಲೆಗಳಲ್ಲಿ 100 ರಿಂದ 150 ಗೋವುಗಳ ಪೋಷಣೆಗೆ ಅಗತ್ಯವಿರುವಂತೆ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಲ್ಕು ವರ್ಷಗಳಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 672 :
ಚಿಕ್ಕಮಗಳೂರು : ಮಲೆನಾಡು ಭಾಗವು ಬಹುತೇಕ ಕಿರಿದಾದ ರಸ್ತೆಗಳನ್ನು ಹೊಂದಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ವಾಹನ ಸಂಚಾರ ನಡೆಸುವವರು ಎಚ್ಚರಿಕೆಯ ಅನೇಕ ಫಲಕಗಳನ್ನು ನೋಡಬಹುದು.2019 ರಿಂದ ಈ ವರೆಗೆ ಜಿಲ್ಲೆಯಲ್ಲಿ 3435 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 672 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅಪಘಾತವನ್ನು ತಡೆಯಲು ಇಲಾಖೆಯು ಈಗಾಗಲೇ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಸುರಕ್ಷತಾ ಸಮಿತಿಯನ್ನು ರಚನೆಮಾಡಿ, ಈ ಮೂಲಕ ಕಾರ್ಯ ನಿರ್ವಹಿಸುತ್ತಿದೆ.ಈ ಭಾಗದಲ್ಲಿ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಂಭವಿಸಿದ ಅಪಘಾತದಲ್ಲಿ ಒಟ್ಟು 672 ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತಗಳಿಗೆ ಅತೀ ವೇಗದ ಚಾಲನೆ ಒಂದು ಕಾರಣವಾದರೆ ಕಿರಿದಾದ ರಸ್ತೆಗಳು, ಮಳೆಗಾಲದ ಸಮಯದಲ್ಲಿ ಉಂಟಾಗುವ ರಸ್ತೆ ಅವ್ಯವಸ್ಥೆಯಿಂದ ಸಂಭವಿಸುವ ಅಪಘಾತ, ಅಜಾಗರೂಕತೆಯ ಚಾಲನೆ, ವಾಹನ ಚಾಲನೆ ನಡೆಸುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ಮೃತಪಟ್ಟಿರುವುದು, ಮದ್ಯಪಾನ ಸೇವನೆ ಮಾಡಿಕೊಂಡು ಚಾಲನೆ ಮಾಡಿದ ಹೆಚ್ಚಿನವರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ SDPI ಪ್ರತಿಭಟನೆ :
ಚಿಕ್ಕಮಗಳೂರು : ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ವಕ್ತಾರರಿಬ್ಬರನ್ನು ಬಂಧಿಸಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರರುಗಳಾದ ನೂಪುರ್ ಶರ್ಮ, ಮತ್ತು ನವೀನ್ ಜಿಂದಾಲ್ ರನ್ನು ಬಂಧಿಸುವಂತೆ ಆಗ್ರಹಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಚಿಕ್ಕಮಗಳೂರು ಜಿಲ್ಲಾ ಸಮಿತಿ ಪದಾಧಿಕಾರಿಗಳು ಚಿಕ್ಕಮಗಳೂರು ನಗರದ ಆಝಾದ್ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ SDPI ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಚಾರ್ಲಿ 777 ಚಿತ್ರದಲ್ಲಿ ಮಿನುಗುತ್ತಿರುವ ಶೃಂಗೇರಿ ಪ್ರತಿಭೆ :
ಚಾರ್ಲಿ 777 ಚಿತ್ರದ ನಾಯಕಿ ಸಂಗೀತಾ ಶೃಂಗೇರಿ, ದೇವಿಕಾ ಆಗಿ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಈ ಹಿಂದೆ ಹರಹರ ಮಹಾದೇವ ಧಾರಾವಾಹಿಯಲ್ಲಿ ಪಾರ್ವತಿಯಾಗಿ ನಟಿಸಿದ್ದ ಸಂಗೀತ ಎಲ್ಲರ ಮನೆ ಮಾತಾಗಿದ್ದರು. ರಿಲೀಸ್ ಆದ ಒಂದೇ ದಿನದಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಕನ್ನಡದ ಚಿತ್ರ ಚಾರ್ಲಿ 777 ನಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿರುವ ಸಂಗೀತಾ, ಈ ಚಿತ್ರಕ್ಕಾಗಿಯೆ ಎರಡು ವರ್ಷಗಳಿಂದ ಬೇರಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಭಾರತೀಯ ವಾಯುಸೇನೆಯ ಮಾಜಿ ಸೈನಿಕ ಶಿವಕುಮಾರ್ ಕೆ ಹಾಗೂ ಭವಾನಿ ದಂಪತಿಗಳ ಪುತ್ರಿಯಾದ ಸಂಗೀತಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಹರಹರ ಮಹಾದೇವ ಧಾರಾವಾಹಿಯಲ್ಲಿ ಸತಿ, ದಾಕ್ಷಾಯಿಣಿಯಾಗಿ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದರು. ಚಿತ್ರ ಹೆಚ್ಚಿನ ಯಶಸ್ಸನ್ನು ಕಾಣಲಿ ಎಂದು ಸಿನಿಪ್ರಿಯರು ಹಾರೈಸಿದ್ದಾರೆ.
ಕೊಡಗು :
ಆನೆ ದಾಳಿಗೆ ವ್ಯಕ್ತಿ ಬಲಿ :
ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ಕೋಣನಕಟ್ಟೆ- ಮರಪಾಲ ತಿತಿಮತಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ಬೈಕ್ ನಲ್ಲಿ ತೆರಳುತ್ತಿದ್ದ ಮೂವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದೆ. ಈ ದಾಳಿಗೆ ತುತ್ತಾದ ಮಾರಿಯಮ್ಮ ಕಾಲೋನಿಯ ಚಾಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಇಂದು ಬೆಳಗ್ಗೆ 07 ಗಂಟೆಗೆ ನಡೆದಿದೆ ಎನ್ನಲಾಗಿದ್ದು, ನಿನ್ನೆಯಷ್ಟೇ ಕಾಡಾನೆ ಶ್ರೀಮಂಗಲ ಸಮೀಪದ ಬೀರುಗದಲ್ಲಿ ಹಾಲಪ್ಪ ಎಂಬುವವರ ಮೇಲೆ ದಾಳಿ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವಂತೆ ಮಾಡಿತ್ತು.


0 Comments