ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಬದಲಾಯಿಸುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 08 ಜೂನ್ 2022 ರಂದು ಮೂಡಿಗೆರೆಯ ಕಾಫಿ ಬೆಳೆಗಾರರಾದ ಉದಯ್ ಕುಮಾರ್ ಎಂಬುವವರು ಮೂಡಿಗೆರೆ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಯಾರೋ ಅಪರಿಚಿತ ವ್ಯಕ್ತಿ ನನಗೆ ಹಣವನ್ನು ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ನನ್ನ ಕರ್ನಾಟಕ ಬ್ಯಾಂಕ್ ನ ಎಟಿಎಂ ಕಾರ್ಡ್ ನ್ನು ಬದಲಾಯಿಸಿಕೊಂಡು ಹೋಗಿ ಚಿಕ್ಕಮಗಳೂರು ಎಟಿಎಂನಲ್ಲಿ 25 ಸಾವಿರ ರೂ ಹಣವನ್ನು ಡ್ರಾ ಮಾಡಿದ್ಲಲ್ಲದೇ ಚಿಕ್ಕಮಗಳೂರಿನ ಅರಹಮ್ ಜ್ಯುವೆಲರಿ ಶಾಪ್ ನಲ್ಲಿ 75 ಸಾವಿರ ರೂ ಹಣವನ್ನು ಸ್ಟೈಪ್ ಮಾಡಿ ಚಿನ್ನವನ್ನು ಕರೀದಿ ಮಾಡಿ ನನಗೆ ಮೋಸ ಮಾಡಿರುತ್ತಾನೆ ಎಂದು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ : ಶೃಂಗೇರಿ : ಹಸುವಿಗೆ ಲಾರಿಯಿಂದ ಗುದ್ದಿ ಎಸ್ಕೇಪ್ ಆಗಲು ಯತ್ನಿಸಿದವರಿಂದಲೇ ಅಂತ್ಯ ಸಂಸ್ಕಾರ ಮಾಡಿಸಿದ ಗ್ರಾಮಸ್ಥರು
ಈ ದೂರು ಆಧರಿಸಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಪ್ರಕರಣವನ್ನು ಮಾನ್ಯ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಪ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್ ಅವರ ನೇತೃತ್ವದಲ್ಲಿ ಮೂಡಿಗೆರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದರ್ಶ ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಲೋಹಿತ್, ವಸಂತ್, ಮನುಕುಮಾರ್, ಇವರ ತಂಡವು ಮಡಿಕೇರಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್ ಪೇಟೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಹಾಗೂ ಬೆಂಗಳೂರಿನಲ್ಲಿ ಎಟಿಎಂ ಗ್ರಾಹಕರಿಗೆ ಇದೇ ರೀತಿಯಲ್ಲಿ ಮೋಸ ಮಾಡಿ ಎಟಿಎಂ ಕಾರ್ಡ್ ಮೋಸದಿಂದ ಬದಲಾಯಿಸಿ ಎಟಿಎಂ ಮಿಷನ್ ಗಳಲ್ಲಿ ಹಣ ಪಡೆಯುವುದರ ಜೊತೆಗೆ ಜ್ಯುವೆಲರಿ ಗಳಲ್ಲಿ ಎಟಿಎಂ ಸ್ವೈಪ್ ಮಾಡಿ ಚಿನ್ನವನ್ನು ಖರೀದಿಸಿರುತ್ತಾನೆ.
ಈತ ಓರ್ವ ಅಂತರಾಜ್ಯ ಕಳ್ಳನಾಗಿದ್ದು ಈತನ ಮೇಲೆ ಈ ಹಿಂದೆ ತಮಿಳುನಾಡು ರಾಜ್ಯದಲ್ಲಿ ಒಟ್ಟು 11 ಕೇಸುಗಳು ವಿಚಾರಣೆ ಹಂತದಲ್ಲಿ ಇರುತ್ತವೆ. ಆರೋಪಿ ಹೆಸರು ತಂಬಿರಜು. ಈತನಿಂದ ಸುಮಾರು 70 ವಿವಿಧ ಬ್ಯಾಂಕಿನ ಎಟಿಎಂ ಕಾರ್ಡ್ಗಳು, 60 ಗ್ರಾಂ ಚಿನ್ನ ಹಾಗೂ 35 ಸಾವಿರ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಕರ್ನಾಟಕದಲ್ಲಿ 7 ಪ್ರಕರಣಗಳು ದಾಖಾಲಾಗಿದ್ದು ತನಿಖೆ ಮುಂದುವರೆದಿದೆ.
ಎಟಿಎಂ ಬಳಸುವ ಗ್ರಾಹಕರು ತಮ್ಮ ಪಿನ್ ಸಂಖ್ಯೆಯನ್ನು ಅಥವಾ ಎಟಿಎಂ ಕಾರ್ಡ್ ಅನ್ನು ಅಪರಿಚಿತರಿಗೆ ನೀಡದೆ ಜಾಗರೂಕತೆವಹಿಸಬೇಕು.


0 Comments