ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ನಾಯಕರಾದ ನೂತನ್ ಕುಮಾರ್ ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡಿದ್ದಾರೆಂದು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಆರೋಪಿಸಿದ್ದರು, ಈ ಆರೋಪದ ಸಂಬಂಧ ನೂತನ್ ಕುಮಾರ್ ಸ್ಪಷ್ಟನೆ ನೀಡಿದ್ದು ಪಂಚಾಯತಿ ಸದಸ್ಯ ಪ್ರಶಾಂತ್ ರ ಆರೋಪಕ್ಕೆ ಹುರುಳಿಲ್ಲ, ನನ್ನ ವೈಯಕ್ತಿಕ ಕೆಲಸಕ್ಕೆ ಮರಳು ತೆಗೆದುಕೊಂಡು ಹೋಗಿಲ್ಲ, ಗ್ರಾಮಸ್ಥರ ಬೇಡಿಕೆಯ ಮೇಲೆ ಅವರ ಸಮ್ಮುಖದಲ್ಲಿ ಹಳ್ಳಿ ರಸ್ತೆಗಳಿಗೆ ಹಾಕಲು ಗೊಣೆ ತೆಗೆಯ‌ಲಾಗಿದೆ ಯಾರು ಬೇಕಾದರೂ ಬಂದು ನೋಡಬಹುದು ಎಂದಿದ್ದಾರೆ.

ಮಳೆಗಾಲ ಆರಂಭಕ್ಕೆ ಇನ್ನೇನು ಬೆರಳಣಿಕೆಯ ದಿನಗಳಿವೆ, ಶೃಂಗೇರಿಯ ಮರ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಸ್ಮುಡಿ, ಹುಲ್ಸೆ ಭಾಗದ ರಸ್ತೆಗಳಲ್ಲಿ ಮಳೆಗಾಲ ಆರಂಭವಾದರೆ ಒಂದು ಕಿಲೋಮೀಟರ್ ಗಿಂತಲೂ ಅಧಿಕ ದೂರದಷ್ಟು ಪ್ರದೇಶಕ್ಕೆ ವಾಹನ ಸಂಚಾರ ನಡೆಸುವುದು ಕಷ್ಟವಾಗುತ್ತದೆ, ಈ ನಿಟ್ಟಿನಲ್ಲಿ ಗ್ರಾಮಸ್ಥರ ಹಾಗೂ ಸ್ಥಳೀಯರ ಕೋರಿಕೆಯ ಮೇರೆಗೆ ಗೊಣೆಕಲ್ಲು ಹಾಕಲಾಗಿದೆ ಇದನ್ನು ಮರಳು ಎಂದು ಬಿಂಬಿಸಿ ನಮ್ಮ ಮೇಲೆ ಆರೋಪ ಮಾಡಲಾಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನೂತನ್ ಕುಮಾರ್ ಹೇಳಿದ್ದಾರೆ.

ಕಳೆದ 28 ವರ್ಷಗಳ ಹಿಂದೆ ಇದ್ದ ರೀತಿಯಲ್ಲೇ ಈ ಮಾರ್ಗದ ರಸ್ತೆ ಇಂದಿಗೂ ಕಚ್ಚಾವಸ್ಥೆಯಲ್ಲೆ ಇದೆ, ಮಳೆ ಆರಂಭವಾದರೆ ಈ ಮಾರ್ಗದಲ್ಲಿ ನಡೆದುಕೊಂಡೆ ಹೋಗಬೇಕಾದ ಪರಿಸ್ಥಿತಿಯಿದೆ. ಗ್ರಾಮ ಪಂಚಾಯತ್ ನವರು ಇತ್ತ ತಲೆಯೂ ಹಾಕಿಲ್ಲ, ನಮ್ಮ ಕೋರಿಕೆಯ ಮೇರೆಗೆ ಗೊಣೆ ಹಾಕಲಾಗುತ್ತಿತ್ತು ಅನಾವಶ್ಯಕವಾಗಿ ಮರಳಿನ ಆರೋಪ ಮಾಡಲಾಗಿದೆ. - ಕೆಸ್ಮುಡಿ ಜ್ಞಾನೇಶ್, ಸ್ಥಳೀಯರು

ಜನರಿಗೆ ಒಳಿತಾಗಬೇಕಿರುವ ಕೆಲಸವನ್ನು ಪಂಚಾಯತ್ ಮಾಡಬೇಕು ಆದರೆ ಸ್ಥಳೀಯರ ಕೋರಿಕೆಯ ಮೇರೆಗೆ ನಾವು ಗೊಣೆಹಾಕಿ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಸರಿಪಡಿಸಿದ್ದೇವೆ ಇದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗಿದೆ ಉಳಿದ ರಸ್ತೆಗಳಿಗೆ ಮರ್ಕಲ್ ಗ್ರಾಮ ಪಂಚಾಯತ್ ನವರೇ ಗೊಣೆಹಾಕಿ ಸರಿಪಡಿಸಲಿ ಎಂದರು.