ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಸುರಿದ ಮಳೆಗೆ ರೈತ ಬೆಳೆದ ಬೆಳೆ ನಾಶವಾಗಿರುವ ದುರ್ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಹಳ್ಳಿಕೆರೆ ಗ್ರಾಮದ ರೈತ ಬೆಳದಿದ್ದ ಟೊಮೇಟೊ ಬೆಳೆಯು ಸುರಿದ ಭಾರೀ ಮಳೆಗೆ ಹಾನಿಗೀಡಾಗಿ ಸಂಪೂರ್ಣ ನಷ್ಟ ಸಂಭವಿಸಿದೆ.
ನಾನು ಬೆಳೆದ ಸಂಪೂರ್ಣ ಬೆಳೆನಾಶವಾಗಿದೆ, ರೈತ ದೇಶದ ಬೆನ್ನೆಲುಬು ಎಂದರೆ ಸಾಲದು ಆತನ ಕಷ್ಟದ ಸಮಯದಲ್ಲಿ ಆತನ ಕಷ್ಟಕ್ಕೆ ಅಧಿಕಾರಿಗಳು ನೆರವಾಗಬೇಕು. ಕನಿಷ್ಠ ಸೌಜನ್ಯಕ್ಕಾದರೂ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿಲ್ಲ, ನನ್ನ ಮನಸ್ಸಿಗೆ ಈ ಘಟನೆಯಿಂದ ಅತೀವ ನೋವಾಗಿದೆ. ಭಾರೀ ದೊಡ್ಡ ಮೊತ್ತದ ನಷ್ಟ ಈ ದುರ್ಘಟನೆಯಿಂದ ಸಂಭವಿಸಿದೆ, ಅಗತ್ಯವಾಗಿ ನನಗೆ ಅಧಿಕಾರಿಗಳು ಸಹಾಯಹಸ್ತ ನೀಡಬೇಕಿದೆ - N.G ಕೃಷ್ಣಮೂರ್ತಿ, ಬೆಳೆ ಕಳೆದುಕೊಂಡ ರೈತ
ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯು, ಸಂಭವಿಸಿದ ಮಳೆಗೆ ನಾಶಗೊಂಡಿದೆ. ಪ್ರತಿಬಾರಿಯೂ ಒಂದೇ ರೋಗಗಳಿಂದ, ಇಲ್ಲವಾದರೆ ಕಾಡು ಪ್ರಾಣಿಗಳ ದಾಳಿಯಿಂದ ಅಥವಾ ಅತಿವೃಷ್ಟಿ ಅನಾವೃಷ್ಟಿಯಿಂದ ಸಂಪೂರ್ಣವಾಗಿ ಬೆಳೆನಾಶ ಹೊಂದುತ್ತಿದೆ. ರೈತನಿಗೆ ದೊಡ್ಡಮಟ್ಟದ ಅನಾನುಕೂಲವಾಗುತ್ತಿದೆ ಎಂದು ತಮಗೆ ಉಂಟಾಗಿರುವ ಸಮಸ್ಯೆಯನ್ನು ರೈತ ತೋಡಿಕೊಂಡಿದ್ದಾರೆ.
ಈ ಕುರಿತು ಸರ್ಕಾರ ಆದಷ್ಟು ಶೀಘ್ರವಾಗಿ ಗಮನಹರಿಸಿ, ನಷ್ಟಕ್ಕೀಡಾಗಿರುವ ರೈತನ ಸಹಾಯಕ್ಕೆ ಧಾವಿಸಬೇಕೆಂದು ನಷ್ಟ ಹೊಂದಿರುವ ರೈತ, ಸ್ಥಳೀಯರು ಹಾಗೂ ಇತರ ರೈತರು ಸರ್ಕಾರವನ್ನು ಕೋರಿದ್ದಾರೆ.





0 Comments