ಪತ್ರಿಕೋದ್ಯಮದಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿನ ವಿದ್ಯಾರ್ಥಿನಿ ಕು. ಅಮುದ ರವರು ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಮೊದಲ ರಾಂಕ್ ಪಡೆದು ಸ್ವರ್ಣ ಪದಕ ವಿಜೇತರಾಗಿರುತ್ತಾರೆ. ಇದೇ ದಿನಾಂಕ 16 ಜೂನ್ 2022 ರಂದು ನಡೆಯಲಿರುವ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆಯಾಗಲಿದೆ. ಎಸ್ಟೇಟ್ ತೋಟ ಕಾರ್ಮಿಕರ ಮಗಳಾದ ಅಮುದ ಅವರ ಈ ಸಾಧನೆ ಬಗ್ಗೆ ಊರಿನ ಎಲ್ಲರೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ
ಸ್ವಾತಂತ್ರ್ಯ ದಿನಾಚರಣೆಯಂದು ನಿವೇಶನ ಪತ್ರ ವಿತರಣೆ :
ಕೊಪ್ಪ :ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಡಾವಣೆಗಳಲ್ಲಿರುವ ಬಡವರ್ಗದ ಜನರನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಸ್ವಾತಂತ್ರೋತ್ಸವದ ದಿನದಂದು ನಿವೇಶನ ಪತ್ರವನ್ನು ವಿತರಣೆ ಮಾಡುವುದಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬುದಾಗಿ ಮಾಹಿತಿ ದೊರೆತಿದೆ.
ಮತ್ತೆ ಎದುರಾದ ಕೊರೋನ ಭೀತಿ :
ರಾಜ್ಯದಲ್ಲಿ ಕೊರೊನಾ 4ನೇ ಅಲೆ ಆತಂಕ ಶುರುವಾಗಿದ್ದು, ಬೆಂಗಳೂರು ನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1,939 ಪ್ರಕರಣಗಳು ದೃಢಪಟ್ಟಿದ್ದರೆ ಮೈಸೂರು (ಶೇ. 0.94) ಉಡುಪಿ (ಶೇ.0.81), ದ. ಕನ್ನಡ (ಶೇ. 0.78), ಚಿಕ್ಕಮಗಳೂರು (ಶೇ0.73), ಶಿವಮೊಗ್ಗ (ಶೇ.0.68) ರಷ್ಟು ಸೋಂಕು ಪ್ರಮಾಣ ಏರಿಕೆಯಾಗಿದೆ.
ಕೊಡಗು :
ಪತಿಯ ಕಾಟ ತಾಳಲಾರದೆ ಹತ್ಯೆಗೈದ ಪತ್ನಿ
ಕುಡುಕ ಪತಿಯ ಕಾಟ ತಾಳಲಾರದೆ ಪತ್ನಿಯೇ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ತಣ್ಣಿಮಾನಿ ಗ್ರಾಮದಲ್ಲಿ ನಡೆದಿದೆ. ಕೃತ್ಯ ನಡೆಸಲು ಕೊಲೆಯಾದ ವ್ಯಕ್ತಿಯ ತಂದೆ ಕೂಡ ಸಾಥ್ ನೀಡಿದ್ದು, ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಡ್ಯಾನಿ (30) ಕೊಲೆಯಾದ ವ್ಯಕ್ತಿಯಾಗಿದ್ದು. ಡ್ಯಾನಿ ಪತ್ನಿ ಅನು ಪ್ರಿಯಾ (26) ಕೊಲೆ ಮಾಡಿದ ಮಹಿಳೆ. ಕುಡುಕ ಪತಿಯ ಕಾಟ ತಾಳಲಾರದೆ ಡ್ಯಾನಿಯನ್ನು ಅನುಪ್ರಿಯಾ ಕೊಲೆ ಮಾಡಿದ್ದು, ಈ ಕೃತ್ಯಕ್ಕೆ ಡ್ಯಾನಿಯ ತಂದೆ ಸುಗುಣ(60) ಕೂಡ ಕೈಜೋಡಿಸಿದ್ದಾರೆ.
ವೃದ್ದರನ್ನು ಕೂಡಿ ಹಾಕಿ ಮನೆ ದರೋಡೆ :
ವೃದ್ಧ ದಂಪತಿಯನ್ನು ಕೂಡಿಹಾಕಿ ಮನೆಯನ್ನು ದರೋಡೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆಯ ಬಾಡಗ ಗ್ರಾಮದಲ್ಲಿ ನಡೆದಿದೆ. ತಂಗಪ್ಪ ಜಾನಕಿ ಎಂಬ ದಂಪತಿಯನ್ನು ಕೊಠಡಿಯಲ್ಲಿ ಕೂಡಿಹಾಕಿದ ದರೋಡೆಕೋರರು, 2 ಲಕ್ಷ ನಗದು, 10 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಶಿವಮೊಗ್ಗ :
ಪ್ರಮೋದ್ ಮುತಾಲಿಕ್ ವಿರುದ್ಧ ದೂರು :
ಸಮಾಜದ ಶಾಂತಿಯನ್ನು ಕದಡುವತ್ತ ಶ್ರೀ ರಾಮ ಸೇನೆಯ ಸಂಸ್ಥಾಪಕ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ದೂರು ದಾಖಲು ಮಾಡಿದ್ದಾರೆ. ಅಜಾನ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಈ ವಿಚಾರದಲ್ಲಿ ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಧ್ಯ ಪ್ರವೇಶಿಸಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕೋರ್ಟಿನ ಆದೇಶವನ್ನು ಪರಿಪಾಲನೆ ನಡೆಸುತ್ತಿದ್ದರೂ ಕೂಡ ಆಜಾನ್ ಮೈಕ್ ನ ವಿಚಾರದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಪ್ರಮೋದ್ ಮುತಾಲಿಕ್ ವಿರುದ್ಧ ರಾಜ್ಯ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ.ಖಾದರ್ ಆರೋಪಿಸಿದರು.
ಪ್ರಮೋದ್ ಮುತಾಲಿಕ್ ವಿರುದ್ದ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಭದ್ರಾವತಿಯ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವತಿಗೆ ಅಗತ್ಯವಿದ್ದ ತುರ್ತು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ :
ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು, ಈಕೆಗೆ ತುರ್ತಾಗಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದ ಕಾರಣ ಆಕೆಯನ್ನು ಜೀರೋ ಟ್ರಾಫಿಕ್ ಹಾಗೂ ಮೂರು ಆಂಬುಲೆನ್ಸ್ ಗಳನ್ನು ಬಳಸಿಕೊಂಡು ವಿಶೇಷವಾಗಿ ಕರೆದೊಯ್ಯಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 18 ವರ್ಷ ಪ್ರಾಯದ ಯುವತಿ ಪಿತ್ತಜನಕಾಂಗದ ಸಮಸ್ಯೆಯನ್ನು ಹೊಂದಿ ಈ ಸಂಬಂಧ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಕೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಬೇಕಿದ್ದ ಅಗತ್ಯವಿತ್ತು ಈ ಹಿನ್ನೆಲೆ ಮೂರು ಆಂಬುಲೆನ್ಸ್ ಗಳನ್ನು ಬಳಕೆ ಮಾಡಿ ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಆಕೆಯನ್ನು ಬೆಂಗಳೂರಿಗೆ ಕಳುಹಿಸುವ ಏರ್ಪಾಡು ಮಾಡಲಾಗಿತ್ತು.


0 Comments