ಚಿಕ್ಕಮಗಳೂರು
ರಸ್ತೆ ಅಪಘಾತಕ್ಕೆ ನವ ವಿವಾಹಿತ ಬಲಿ :
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಆನಂದ್ ಹಾಗೂ ರಂಜಿತಾ ತೆರಳಿದ್ದರು.ಮದುವೆಯನ್ನು ಮುಗಿಸಿಕೊಂಡು ಬರುವಾಗ ರಾಷ್ಟ್ರೀಯ ಹೆದ್ದಾರಿ 206 ರ ಶಿವಪುರ ಗೇಟ್ ಬಳಿ ತರೀಕೆರೆ ಕಡೆಯಿಂದ ಬಂದಂತಹ ಕಾರು ದಂಪತಿಗಳಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಭೀಕರವಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಎತ್ತರಕ್ಕೆ ಹಾರಿ ಕೆಳಬಿದ್ದಿದೆ ಎನ್ನಲಾಗಿದೆ. ಬೈಕ್ ಚಾಲಕ ಆನಂದ್ ಅವರ ತಲೆ ಮತ್ತು ಕೈಕಾಲುಗಳಿಗೆ ಗಂಭೀರವಾಗಿ ಗಾಯವಾದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರೊಂದಿಗಿದ್ದ ಪತ್ನಿ ರಂಜಿತಾ ಕೂಡ ಗಾಯಗೊಂಡಿದ್ದು ಅವರಿಗೆ ತಕ್ಷಣವೇ ಬೀರೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ :
ಮೇಲ್ಪಾಲ್ ಹೈಸ್ಕೂಲಿನಲ್ಲಿ ಇಂದು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಗುಬ್ಬುರಿನ ಸ್ನೇಹಿತ ವರ್ಗ ಒಗ್ಗೂಡಿ ಸುಮಾರು 12 ಸಾವಿರ ರೂಪಾಯಿಗಳ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಹಿರಿಯರಾದ ಎ.ಜಿ ಶ್ರೀನಿವಾಸಗೌಡ, ಸತೀಶ್ ಕೆ.ಎಸ್, ಉಪೇಂದ್ರ ಎ.ಎಂ ಸುನಿಲ್ ಎನ್.ಸಿ, ಜೈಪಾಲ್ ಕೆ.ಸಿ, ರಂಜನ್ ಎನ್.ಸಿ ರಾಘವೇಂದ್ರ ಎ.ಎಸ್, ರಾಜೇಂದ್ರ ಎ.ಎನ್, ಶ್ರೀಪಾಲ್ ಕೆ.ಸಿ, ಶ್ರೀಧರ್ ಕೆ ಎಸ್,ಸಾತ್ವಿಕ್ ಕೆ.ಆರ್, ಸುಮುಖ ಕೆ.ಆರ್, ಪೂರ್ಣಿಮಾ ಸತೀಶ್ ಇವರೆಲ್ಲರ ಸಹಕಾರದೊಂದಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೈಸ್ಕೂಲ್ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಶಿವಮೊಗ್ಗ :
ಪೋಕ್ಸೋ ಅಪರಾಧಿಗೆ ಶಿಕ್ಷೆ ವಿಧಿಸಿದ ಕೋರ್ಟ್
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಲಿಂಗರಾಜ್ ಅಲಿಯಾಸ್ ನವೀನ್ ಎಂಬ 18 ವರ್ಷದ ಯುವಕ 2019 ರಲ್ಲಿ ಆರು ವರ್ಷದ ಪುಟ್ಟ ಬಾಲಕಿಯೋರ್ವಳಿಗೆ ಮನೆಗೆ ಕರೆದುಕೊಂಡು ಹೋಗಿ ಚಾಕಲೇಟ್ ನೀಡುವುದಾಗಿ ಕರೆದುಕೊಂಡು ಹೋಗಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದ. ಘಟನಾ ಸಂಬಂಧ ಶಿವಮೊಗ್ಗದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಎಸ್ ಮೋಹನ್ ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 50,000 ರೂಪಾಯಿ ಮೊತ್ತದ ದಂಡವಿಧಿಸಿದ್ದಾರೆ. ಒಂದುವೇಳೆ ಆರೋಪಿಯ ಬಳಿ ದಂಡ ಕಟ್ಟಲು ಆಗದೇ ಹೋದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳುಗಳಕಾಲ ಸಾದಾ ಕಾರಾಗೃಹ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ವಾದ ಮಂಡನೆ ಮಾಡಿದರು.
ಆಶ್ರಯ ಸಮಿತಿ ವತಿಯಿಂದ 260 ಹಕ್ಕುಪತ್ರ ವಿತರಣೆ :
ಶಿವಮೊಗ್ಗದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇಂದು ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮ ನಡೆಯಿತು. ಶಿವಮೊಗ್ಗ ನಗರದ ವಿದ್ಯಾನಗರದ ಕಲ್ಲರ್ಟಿ, ಜಟ್ ಪಟ್ ನಗರದ 260 ಜನರಿಗೆ ಹಕ್ಕು ಪತ್ರಗಳನ್ನು ಶಿವಮೊಗ್ಗದ ಶಾಸಕರಾದ ಕೆ.ಎಸ್ ಈಶ್ವರಪ್ಪ ಅವರು ವಿತರಿಸಿದರು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಜನರಿಗೆ ಸರ್ಕಾರವು ಮನೆ ಕಟ್ಟಿಕೊಂಡು ಜೀವನ ನಡೆಸಲು ಪೂರಕವಾದ ಹಣದ ಸಹಾಯವನ್ನು ನೀಡುತ್ತದೆ. ಆಶ್ರಯ ಯೋಜನೆಯಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 3.50 ಲಕ್ಷ ಹಣವನ್ನು ಉಚಿತವಾಗಿ ನೀಡುತ್ತದೆ. ಒಂದು ಲಕ್ಷ ರೂಪಾಯಿವರೆಗಿನ ಹಣವನ್ನು ಬ್ಯಾಂಕ್ ಸಾಲದ ರೂಪದಲ್ಲಿ ನೀಡುತ್ತದೆ, ಯೋಜನೆಯನ್ನು ಅರ್ಹರು ಬಳಸಿಕೊಳ್ಳಬೇಕೆಂದರು. ಹಕ್ಕುಪತ್ರಗಳ ವಿತರಣಾ ಸಂದರ್ಭದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾದ ಶಶಿಧರ್ ಸೇರಿದಂತೆ ಮೊದಲಾದ ಪದಾಧಿಕಾರಿಗಳು ಶಾಸಕರೊಂದಿಗಿದ್ದರು.
ತೀರ್ಥಹಳ್ಳಿ : ನೀರು ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಎಗರಿಸಲು ಯತ್ನಿಸಿದ ಖದೀಮರು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ಧಾಪುರದಲ್ಲಿ ಈ ಕೃತ್ಯ ನಡೆದಿದ್ದು, ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿದ ಕಾರಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಬಳಿಗೆ ತೆರಳಿ ನೀರು ಕೇಳಿದ್ದಾರೆ. ಈ ಸಮಯದಲ್ಲಿ ನೀರು ತರಲೆಂದು ಮಹಿಳೆ ತೆರಳಿದಾಗ ಓರ್ವ ಕಾರ್ ಒಳಗೆ ಕುಳಿತು ಹೊರಡಲು ತಯಾರಾಗಿದ್ದಾನೆ, ಮಹಿಳೆ ನೀರು ತಂದ ಕೂಡಲೇ ಆಕೆಯ ಕುತ್ತಿಗೆಗೆ ಕೈ ಹಾಕಿ ಸರ ಎಗರಿಸಲು ಕಳ್ಳ ಯತ್ನಿಸಿದ್ದಾನೆ. ಕೂಡಲೇ ಮಹಿಳೆಯು ಕಿರುಚಾಡಿದಾಗ ಅಕ್ಕ ಪಕ್ಕದಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ, ಈ ಸಂದರ್ಭದಲ್ಲಿ ಆತನು ಓಡಿ ಹೋಗಿದ್ದು ಕಾರಿನಲ್ಲಿದ್ದ ಇನ್ನೋರ್ವ ಎಲ್ಲೂ ಹೋಗಲಾರದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳು ಬಯಲುಸೀಮೆ ಮೂಲದವರಾಗಿದ್ದು, ಈ ಭಾಗದಲ್ಲಿ ಜೆಸಿಬಿ ಕೆಲಸವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಘಟನೆಯ ಕುರಿತಾಗಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿರುವ ಈ ಸಂದರ್ಭದಲ್ಲಿ ಇನ್ನೊಂದು ಕಳ್ಳತನದ ಯತ್ನವು ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಈ ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಕಾರ್ ಕೋಣಂದೂರು ಮೂಲದ ವ್ಯಕ್ತಿಯೋರ್ವರದ್ದು ಎನ್ನಲಾಗಿದ್ದು ಯಾವ ಕಾರಣಕ್ಕಾಗಿ ಕಾರ್ ತಂದಿದ್ದರು ಎಂದು ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರ್ ; ಸ್ಥಳದಲ್ಲೇ ಓರ್ವ ವ್ಯಕ್ತಿಯ ದುರ್ಮರಣ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ ಬಿ.ಕ್ಯಾಂಪ್ ಸಮೀಪದ ಶಿವಮೊಗ್ಗ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು ಕಾರು ಚಾಲನೆ ನಡೆಸುತ್ತಿದ್ದ 60 ವರ್ಷ ಪ್ರಾಯದ ಇಂಜಿನಿಯರ್ ಅಶೋಕ್ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಕಾರನ್ನು ಮರಕ್ಕೆ ಗುದ್ದಿ ಮೃತಹೊಂದಿದ್ದಾರೆ. ಕೆಪಿಟಿಸಿಎಲ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಅವರು ಈ ತಿಂಗಳಿನ ಕೊನೆಯಲ್ಲಿ ನಿವೃತ್ತಿ ಹೊಂದುತ್ತಿದ್ದರು ಎನ್ನಲಾಗಿದ್ದು ಈ ಅವಘಡದಲ್ಲಿ ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಅಶೋಕ್ ಅವರೊಂದಿಗೆ ಪ್ರಯಾಣ ನಡೆಸುತ್ತಿದ್ದ ಕುಟುಂಬ ಸದಸ್ಯರಾದ ಕಮಲಮ್ಮ, ಕಾಲೇಜು ಉಪನ್ಯಾಸಕರಾದ ವಿಜಯ್ ಕುಮಾರ್, ಹಾಗೂ ಗಂಗಾಧರ್ ಅವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೊಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗು :
ಗುಂಪುಗುಂಪಾಗಿ ಪ್ರತ್ಯಕ್ಷವಾದ ಕಾಡಾನೆಗಳು
ವಿರಾಜಪೇಟೆ ತಾಲೂಕಿನ ತಿತಿಮತಿ ಅಬ್ಬೂರುಕಟ್ಟೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಕಾಡಾನೆಗಳು ಓಡಾಡುತ್ತಿರುವುದು ಸಾರ್ವಜನಿಕರಿಗೆ ಕಂಡಿದೆ. ಆನೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದರೆ, ಅನೇಕರು ಆನೆಗಳ ಓಡಾಟವನ್ನು ಕಂಡು ಭಯಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಫಿ ತೋಟಕ್ಕೆ ಬಂದ ಆನೆಗಳನ್ನು ಕಾಡಿಗಟ್ಟಿದರೂ ಅವುಗಳು ಮತ್ತೆ ಆಹಾರ ಅರಸಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಬೆಳೆದ ಬೆಳೆಗಳನ್ನು ಆನೆಗಳು ಹಾಳು ಮಾಡುತ್ತಿವೆ ಎಂದು ಸಾರ್ವಜನಿಕರು ತಮ್ಮಗೋಳನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ನಿರಂತರವಾಗಿ ಆನೆಗಳು ಈ ಭಾಗದ ಕೃಷಿಕರಿಗೆ ಸಮಸ್ಯೆ ನೀಡುತ್ತಲೇಬಂದಿವೆ. ಅತಿವೃಷ್ಟಿ, ಅನಾವೃಷ್ಟಿ, ವಿವಿಧ ಬಗೆಯ ರೋಗಗಳಿಂದ ಜನರು ತಮ್ಮ ತೋಟಗಳಲ್ಲಿ ಬೆಳೆಯನ್ನು ರಕ್ಷಿಸಿಕೊಂಡು ಬರುತ್ತಿದ್ದರೆ ಇತ್ತ ಆನೆದಾಳಿಯು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ನಾಶಮಾಡುತ್ತಿದೆ, ಆನೆ ದಾಳಿಯಿಂದ ಉಂಟಾಗದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ಹಾಸನ :
ಅಕ್ರಮ ಮದ್ಯ ಮಾರಾಟ ; ಆರೋಪಿಗಳ ಬಂಧನ
ಹಾಸನದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯ ಪಿಎಸೈ ಪುನೀತ್ ಅವರು ಠಾಣೆಯ ಸಿಬ್ಬಂದಿಗಳೊಂದಿಗೆ ಈ ದಾಳಿಯನ್ನು ನಡೆಸಿದ್ದು ಕೆ.ಆರ್ ಪುರಂ ನಿವಾಸಿ ಹರ್ಷಿತ್ ಎಂಬಾತನನ್ನು ಪೊಲೀಸರು ಬಂಧಿಸಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.



0 Comments