ಮೂಡಿಗೆರೆ : ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಂಡವು ಇಂದು ಚಾರ್ಮಾಡಿ ಘಾಟ್ ಗೆ ಭೇಟಿ ನೀಡಿ ಅತ್ಯಾವಶ್ಯಕವಿರುವ ಕಾಮಗಾರಿಗಳ ಕುರಿತು ಹಾಗೂ ಘಾಟ್ ನ ಪ್ರಸ್ತುತ ಸ್ಥಿತಿಯ ಕುರಿತು ಪರಿಶೀಲನೆ ನಡೆಸಿತು.
 

ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡವು ಕಳೆದೆರಡು ವರ್ಷಗಳ ಹಿಂದೆ ಘಾಟ್ ನಲ್ಲಿ ಉಂಟಾದ ಭೂಕುಸಿತ ಹಾಗೂ ಮಳೆಗಾಳಿಗೆ ರಸ್ತೆ ಹಾಗೂ ತಡೆಗೋಡೆಗಳು ಹಾನಿಯಾಗಿರುವುದನ್ನು ಪರಿಶೀಲನೆ ನಡೆಸಿದರು. 


ಈ ಕುರಿತು ನಿರ್ದೇಶನ ನೀಡಿದ ಅಧಿಕಾರಿಗಳು ಪ್ರಸ್ತುತ ರಸ್ತೆ ಕೆಲಸವನ್ನು ತಾತ್ಕಾಲಿಕವಾಗಿ ಮುಗಿದಿದ್ದು, ರಸ್ತೆಯ ಎರಡೂ ಕಡೆಗಳಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಅಂತೆಯೇ ಮಳೆಗಾಲದ ಸಂದರ್ಭದಲ್ಲಿ ಈ ಮಾರ್ಗದ ಮುಖಾಂತರ ಪ್ರವೇಶಿಸುವ ವಾಹನ ಸವಾರರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನಿಗಾವಹಿಸಬೇಕೆಂದು ಹಾಗೂ ಅಗತ್ಯವಿರುವ ಕೆಲಸಗಳನ್ನು ಮಾಡುವಂತೆ ತಿಳಿಸಿದರು. 

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಶ್ರೀ ಕೃಷ್ಣ ರೆಡ್ಡಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಸನ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಮತಿ ಅರ್ಚನಾ, ಬೇಲೂರು NHAEE ಇಂಜಿನಿಯರ್ ಮುನಿರಾಜ್, ಹಾಗೂ ಸಹಾಯಕ ಇಂಜಿನಿಯರ್ ಸಂತೋಷ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು. 

ತನು ಕೊಟ್ಟಿಗೆಹಾರ, ವರದಿಗಾರರು 

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆದ ಕಿಡಿಗೇಡಿ : 

ಶಿವಮೊಗ್ಗ : ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರ್ ಒಂದಕ್ಕೆ ಕಿಡಿಗೇಡಿಯೊಬ್ಬ ಬೆಂಕಿಹಚ್ಚಿ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.


ಶಿವಮೊಗ್ಗ ನಗರದ ಜೆ.ಎಸ್.ಕೆ ಎಮ್ ರಸ್ತೆಯಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಆರೋಪಿಯು ಸ್ಥಳದಿಂದ ಎಸ್ಕೇಪ್ ಆಗಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಮನುಷ್ಯರ ವೈಯಕ್ತಿಕ ವಿಚಾರಗಳಿಗೆ, ಅವರವರ ದ್ವೇಷಕ್ಕೆ ಈ ರೀತಿಯ ಕೃತ್ಯಗಳನ್ನು ಎಸಗುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಕೋರಿದ್ದಾರೆ.