ಚಿಕ್ಕಮಗಳೂರು : 

ಚಾರ್ಮಾಡಿ ಘಾಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕೋಪಯೋಗಿ ಅಧಿಕಾರಿಗಳು : 

ಮೂಡಿಗೆರೆ : ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಂಡವು ಇಂದು ಚಾರ್ಮಾಡಿ ಘಾಟ್ ಗೆ ಭೇಟಿ ನೀಡಿ ಅತ್ಯಾವಶ್ಯಕವಿರುವ ಕಾಮಗಾರಿಗಳ ಕುರಿತು ಹಾಗೂ ಘಾಟ್ ನ ಪ್ರಸ್ತುತ ಸ್ಥಿತಿಯ ಕುರಿತು ಪರಿಶೀಲನೆ ನಡೆಸಿತು. ಪರಿಶೀಲನೆ ನಡೆಸಿ ಈ ಕುರಿತು ನಿರ್ದೇಶನ ನೀಡಿದ ಅಧಿಕಾರಿಗಳು ಪ್ರಸ್ತುತ ರಸ್ತೆ ಕೆಲಸವನ್ನು ತಾತ್ಕಾಲಿಕವಾಗಿ ಮುಗಿದಿದ್ದು, ರಸ್ತೆಯ ಎರಡೂ ಕಡೆಗಳಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಅಂತೆಯೇ ಮಳೆಗಾಲದ ಸಂದರ್ಭದಲ್ಲಿ ಈ ಮಾರ್ಗದ ಮುಖಾಂತರ ಪ್ರವೇಶಿಸುವ ವಾಹನ ಸವಾರರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನಿಗಾವಹಿಸಬೇಕೆಂದು ಹಾಗೂ ಅಗತ್ಯವಿರುವ ಕೆಲಸಗಳನ್ನು ಮಾಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಶ್ರೀ ಕೃಷ್ಣ ರೆಡ್ಡಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಸನ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಮತಿ ಅರ್ಚನಾ, ಬೇಲೂರು NHAEE ಇಂಜಿನಿಯರ್ ಮುನಿರಾಜ್, ಹಾಗೂ ಸಹಾಯಕ ಇಂಜಿನಿಯರ್ ಸಂತೋಷ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು. 

ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಮರಗಳ ಕಟಾವು ವಿರೋಧಿಸಿ ಆಕ್ಷೇಪಣಾ ಅರ್ಜಿ ಅಭಿಯಾನ : 

ಶೃಂಗೇರಿ : NH 169 ರಸ್ತೆ ವಿಸ್ತರಣೆಗಾಗಿ ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 218 ಮರಗಳನ್ನು ಕಡಿಯುವುದನ್ನು ವಿರೋಧಿಸಿ ಆಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 169 ಗೆ ಸಂಬಂಧಿಸಿದಂತೆ ಶೃಂಗೇರಿ ಪಟ್ಟಣ ವ್ಯಾಪ್ತಿಯಲ್ಲಿ 5 ಕಿಮೀ ವ್ಯಾಪ್ತಿಯಲ್ಲಿ ಬಲಿತ ಪಾರಂಪರಿಕ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ದಿನಾಂಕ 30 ಜೂನ್ ರಂದು ಶೃಂಗೇರಿ ಅರಣ್ಯ ಇಲಾಖೆ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದ್ದು ಬೃಹತ್ ಪಾರಂಪರಿಕ ಮರಗಳನ್ನು ತೆರವುಗೊಳಿಸುವ ಯೋಜನೆಗೆ ಸಂಬಂಧಿಸಿದಂತೆ, ತಮ್ಮ ತಕರಾರು ಇರುವುದಾಗಿ ಪರಿಸರಾಸಕ್ತರು ಮರ ಕಡಿಯುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. 218 ಮರಗಳನ್ನು ಕಡಿಯುವ ಪೂರ್ವದಲ್ಲಿ ಆಯೋಜಿಸುವ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯುವ ಪ್ರಕ್ರಿಯೆಗೆ ಸಾಕಷ್ಟು ಸಮಯವನ್ನು ಅಂದರೆ ಒಂದು ತಿಂಗಳು ಕೇವಲ 13 ದಿನಗಳ ಗಡುವನ್ನು ನೀಡಿರುವುದು ಆಕ್ಷೇಪಾರ್ಹ ಸಂಗತಿಯಾಗಿದೆ ಎಂದು ತಿಳಿಸಿದೆ.

ಅಕ್ರಮ ಗೋಮಾಂಸ ಮಾರಾಟಗಾರರ ಪರೇಡ್ ನಡೆಸಿದ ಚಿಕ್ಕಮಗಳೂರು ಪೊಲೀಸರು : 

ಚಿಕ್ಕಮಗಳೂರು : ಎಲ್ಲೆಡೆ ಪೊಲೀಸರು ರೌಡಿ ಶೀಟರ್ ಗಳ ಪರೇಡ್ ನಡೆಸುವುದು ಸಾಮಾನ್ಯ ಆದರೆ ಚಿಕ್ಕಮಗಳೂರಿನ ಪೊಲೀಸರು ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುವವರ ಪರೇಡ್ ನ್ನು ಇಂದು ಮಾಡಿದ್ದಾರೆ. ಈ ಹಿಂದಿನಿಂದಲೂ ಚಿಕ್ಕಮಗಳೂರು ನಗರಸಭೆಯು ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಗೋಮಾಂಸವನ್ನು ಹಾಗೂ ಇದರಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದರು. ಇದರಲ್ಲಿ ಕೆಲವರ ಶೆಡ್ ಗಳು ಹಾಗೂ ಅಕ್ರಮ ಗೋಮಾಂಸ ತಯಾರಿಕಾ ಸ್ಥಳಗಳ ಮೇಲೂ ಜೆಸಿಬಿ ಪ್ರಯೋಗ ನಡೆದಿತ್ತು. ಈ ಕುರಿತಾಗಿ ಅಕ್ರಮ ಗೋಮಾಂಸ ಮಾರಾಟಗಾರರಿಗೆ ಎಚ್ಚರಿಕೆ ನೀಡುವ ಸಲುವಾಗಿ ಇಂದು ಪೊಲೀಸರು 30 ಜನ ಗೋಮಾಂಸ ಮಾರಾಟಗಾರರ ಪರೇಡ್ ನ್ನು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಅಕ್ರಮ ಕೃತವನ್ನು ಮುಂದುವರೆಸಿದ್ದೇ ಆದಲ್ಲಿ ಕಠಿಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಶಾಸಕರಿಂದ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ : 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಗುಬ್ಬುಗೋಡು ಪರಿಶಿಷ್ಟ ಕಾಲೊನಿ ಜನರಿಗೆ ಅವಶ್ಯಕವಾಗಿದ್ದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ. ಡಿ. ರಾಜೇಗೌಡ ಅವರು ಉದ್ಘಾಟಿಸಿದರು. 20 ಲಕ್ಷ ರೂಪಾಯಿ ಅನುದಾನದಲ್ಲಿ ಈ ಕಾಮಗಾರಿಯು ನಡೆದಿದ್ದು ಈ ರಸ್ತೆಯ ಉದ್ಘಾಟನೆಯನ್ನು ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ನೆರವೇರಿಸಿದರು. 

ಬೃಹದಾಕಾರದ ಮರ ಬಿದ್ದು ಕಾರು ಜಖಂ : 

ಮೂಡಿಗೆರೆ : ನಿಲ್ಲಿಸಿದ್ದ ಕಾರ್ ನ ಮೇಲೆ ಬೃಹದಾಕಾರದ ಮರವೊಂದು ಬಿದ್ದ ಪರಿಣಾಮ ಕಾರ್ ಜಖಂಗೊಂಡಿರುವ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರಬಿದ್ದು ಕಾರು ಜಖಂಗೊಂಡಿದೆ. ಕಾರು ನಿಲ್ಲಿಸಿ ದಂಪತಿಗಳು ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಈ ಅವಘಡ ನಡೆದಿದ್ದು ಯಾವುದೇ ರೀತಿಯ ಪ್ರಣಾಪಾಯಗಳು ಸಂಭವಿಸಿಲ್ಲ.


ಜುಲೈ 1 ರಿಂದ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಚಿಕ್ಕಮಗಳೂರು : ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಜುಲೈ ಒಂದನೇ ತಾರೀಖಿನಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಅಪರ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿರುವ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಕಸ ಸಾಗಿಸುವ ವಾಹನ ಚಾಲಕರು, ಡೇಟಾ ಆಪರೇಟರ್, ಯುಜಿಡಿ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆಯ ಬದಲು ಪೌರಕಾರ್ಮಿಕರಂತೆ ನೇರ ನೇಮಕಾತಿಯ ಮಾದರಿಯಲ್ಲಿ ಜಾರಿಗೆ ತರಬೇಕೆಂದು ಮನವಿಸಲ್ಲಿಸಿದರು. ಇಲ್ಲವಾದಲ್ಲಿ ತಮ್ಮ ದಿನನಿತ್ಯದ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿವೇಕ್, ಮುರುಗೇಶ್, ಜೆ. ವೆಂಕಟೇಶ್, ಗಣೇಶ್, ನಾಗರಾಜ್, ಎಂ.ಅಜಯ್, ಶ್ಯಾಮು,ಬಾಬು, ಮಂಜ, ಸ್ಟೀವನ್ ಕುಮಾರ್ ಸೇರಿದಂತೆ ಇತರರು ಇದ್ದರು.


ಶಿವಮೊಗ್ಗ : 

ಪ್ರೇಯಸಿ ಮದುವೆಯಾಗಿರುವ ವಿಷಯ ತಿಳಿದು ಆಕೆಯ ಊರಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ : 

ಶಿವಮೊಗ್ಗ : ಪ್ರೀತಿಗೆ ಬಿದ್ದ ಯುವಕನೋರ್ವ ಮನೆಯವರ ಮಾತನ್ನು ಕೇಳದೇ ತನ್ನ ಪ್ರೇಯಸಿಗಾಗಿ ಹೆತ್ತವರ ಸಂಬಂಧವನ್ನೇ ಕಳೆದುಕೊಂಡು ಕೊನೆಗೆ ಆಕೆಯೂ ಅವನಿಗೆ ದೊರೆಯದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಅಸಿಸ್ಟೆಂಟ್ ಕ್ವಾಲಿಟಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ದಿಲೀಪ್ ಮೂಲತಃ ಹಾಸನ ಜಿಲ್ಲೆ ಅರಸೀಕೆರೆಯವನು. ಅದೇ ಗಾರ್ಮೆಂಟ್ಸ್‌ನಲ್ಲಿ ಸ್ಯಾಂಪಲ್ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಆತನಿಗೆ ಪ್ರೀತಿ ಉಂಟಾಗಿದ್ದು ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಮೃತ ದಿಲೀಪ್ ನ ಮನೆಯವರಿಗೂ ವಿಷಯ ತಿಳಿದಿತ್ತು, ಅವರು ಈ ಸಂಬಂಧವನ್ನು ಒಪ್ಪಿರಲಿಲ್ಲ ಅದ ಕಾರಣ ಹೆತ್ತ ಪೋಷಕರನ್ನು ಸಹ ದಿಲೀಪ್ ನಿರಾಕರಿಸಿ ಮನೆಯಿಂದ ಹೊರಬಂದಿದ್ದ. ತನ್ನ ಹಾಗೂ ಪ್ರೇಯಸಿಯ ಮುಂದಿನ ಜೀವನಕ್ಕಾಗಿ ಯುವಕ ಹಗಲು ರಾತ್ರಿಎನ್ನದೇ ಕಷ್ಟಪಟ್ಟು ದುಡಿದು ಮುಂದಿನ ಜೀವನಕ್ಕಾಗಿ ಶ್ರಮಿಸುತ್ತಿದ್ದ. ಚೆನ್ನಾಗಿಯೇ ಇದ್ದ ಇಬ್ಬರ ಮದ್ಯೆ ಅದೇನಾಯಿತೋ ಎಂಬಂತೆ ಅಂತರ ಕಾಯ್ದುಕೊಳ್ಳಲಾರಂಭವಾಗಿದೆ ಎನ್ನಲಾಗಿದೆ. ತನ್ನ ತಾಯಿಗೆ ಹುಷಾರಿಲ್ಲದ ನೆಪ ಹೇಳಿ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ಬಂದಿದ್ದ ಯುವತಿ, ಪ್ರಿಯಕರನಿಂದ ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಳು ಎನ್ನಲಾಗಿದೆ. ಊರಿಗೆ ಬಂದ ಬಳಿಕ ಯುವತಿಗೆ ಅದೇ ಊರಿನ ಬೇರೊಬ್ಬನೊಂದಿಗೆ ಮೇ 20ರಂದು ಮದುವೆಯಾಗಿದೆ. ಈ ವಿಷಯ ತಿಳಿದ ದಿಲೀಪ್, ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಇದೇ 24ರಂದು ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿದಿದೆ. ಇದರಿಂದ ಮನನೊಂದ ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಯುವತಿ ವಾಸವಿರುವ ಸೊರಬತಾಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನೋರ್ವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ದಾರಿಹೋಕರು ತಕ್ಷಣವೇ ಏನಾಯಿತು ಎಂದು ಗಮನಿಸಿದ್ದಾರೆ. ಪಕ್ಕದಲ್ಲೇ ಬಿದ್ದಿದ್ದ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್‍ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಆತ ಬದುಕುಳಿಯಲೇ ಇಲ್ಲ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಮನೆಯಲ್ಲಿ ಪತಿ ಇಲ್ಲದ ವೇಳೆ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ : 

ಮನೆಯಲ್ಲಿ ಮಹಿಳೆಯೋರ್ವರ ಪತಿ ಇಲ್ಲದ ವೇಳೆಯಲ್ಲಿ ಪತಿಯ ಪರಿಚಯಸ್ಥನೆ ಮಹಿಳೆಯನ್ನು ಅತ್ಯಾಚಾರ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಅತ್ಯಾಚಾರಕ್ಕೆ ಯತ್ನಿಸಿದವನನ್ನು ದಿಗಟೆಕೊಪ್ಪದ ರಮೇಶ್ ಎಂದು ಗುರುತಿಸಲಾಗಿದೆ. ಮಹಿಳೆಯ ಪತ್ನಿ ಕೆಲಸದ ನಿಮಿತ್ತ ಬೆರಡೆಗೆ ತೆರಳಿದಾಗ ಮಧ್ಯರಾತ್ರಿ ಮನೆಗೆ ನುಗ್ಗಿದ ಈ ಕಾಮುಕ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಮಹಿಳೆ ಕಿರುಚಾಟ ಆರಂಭಿಸಿದ ಕಾರಣ ಕೂಡಲೆ ಪಕ್ಕದವರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಫೋಟೋ ತೆಗೆದುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದ ಆರೋಪಿ ಪೊಲೀಸರಿಗೆ ದೂರು ನೀಡಿದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ. ಈ ಬಳಿಕವೂ ಮಹಿಳೆಗೆ ಬ್ಲಾಕ್ಮೇಲ್ ಮಾಡುತ್ತಿದ್ದ ಹಿನ್ನೆಲೆ ದೂರು ದಾಖಲಿಸಿದ್ದಾರೆ. ದೂರಿನನ್ವಯ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. 


ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಎಸ್ಕೇಪ್ ಆದ ಕಿಡಿಗೇಡಿ : 

ಶಿವಮೊಗ್ಗ : ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರ್ ಒಂದಕ್ಕೆ ಕಿಡಿಗೇಡಿಯೊಬ್ಬ ಬೆಂಕಿಹಚ್ಚಿ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗ ನಗರದ ಜೆ.ಎಸ್.ಕೆ ಎಮ್ ರಸ್ತೆಯಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯು ಸ್ಥಳದಿಂದ ಎಸ್ಕೇಪ್ ಆಗಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಮನುಷ್ಯರ ವೈಯಕ್ತಿಕ ವಿಚಾರಗಳಿಗೆ, ಅವರವರ ದ್ವೇಷಕ್ಕೆ ಈ ರೀತಿಯ ಕೃತ್ಯಗಳನ್ನು ಎಸಗುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಕೋರಿದ್ದಾರೆ. 

ಕೊಡಗು :

ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ : 

ಕೊಡಗು ಜಿಲ್ಲೆಯಲ್ಲಿ ಇಂದು ಮತ್ತೆ ಜನರಿಗೆ ಭೂಕಂಪನದ ಅನುಭವವಾಗಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದು, ಇಂದು ಬೆಳಗ್ಗೆ 7.45 ಸುಮಾರಿಗೆ ಮತ್ತೆ ಭೂಕಂಪವಾದ ಅನುಭವವಾಗಿದ್ದು ಜಜನರಲ್ಲಿ ಆತಂಕ ಸೃಷ್ಟಿಸಿದೆ. ಮಡಿಕೇರಿ ತಾಲೂಕಿನ ಕರಿಕೆ, ಸಂಪಾಜೆ ಕರ್ಣಂಗೇರಿ ಹಾಗೂ ಪೆರಾಜೆ ಭಾಗಮಂಡಲ ಹಲವೆಡೆ ಭೂ ಕಂಪಿಸಿರುವುದಾಗಿ ಜನ ತಮಗಾದ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಕೊಡಗು ಸೇರಿದಂತೆ ಜಿಲ್ಲೆಗೆ ಹೊಂದಿಕೊಂಡಂತಿರುವ ಹಾಸನ, ದಕ್ಷಿಣಕನ್ನಡ ಭಾಗಗಳಲ್ಲಿ ಇದೇ ಜೂನ್ 25ರಂದು ಭೂಮಿ ಕಂಪಿಸಿದ ಅನುಭವವಾಗಿತ್ತು. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಗಡಿಭಾಗವಾದ ದ.ಕ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ ಭಾಗದಲ್ಲಿ (ಜೂ.25) ಶನಿವಾರ ಬೆಳಗ್ಗೆ 9.10 ಸುಮಾರು 3 ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿತ್ತು. ಕಂಪನದಿಂದ ಭೂಮಿಯೊಳಗಿನಿಂದ ವಿಚಿತ್ರ ಶಬ್ಧ ಕೇಳಿಬಂದಿತ್ತು. 2018ರಲ್ಲಿ ಕೊಡಗಿನಲ್ಲಿ ಇಂತಹದ್ದೇ ಅನುಭವವಾಗಿತ್ತು. ಭೂಕುಸಿತವಾದ ಪ್ರದೇಶದಲ್ಲಿ ಭೂಮಿಯೊಳಗೆ ನೀರು ಹರಿವ ಸದ್ದು ಕೇಳಿಸಿತ್ತು. ಜತೆಗೆ ಭಾರಿ ಸದ್ದು ಕೇಳಿ ಬಂದಿತ್ತು.


14 ಕಿಲೋ ಮಾದಕ ವಸ್ತುಗಳ ನಾಶ : 

ಕೊಡಗು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದಿದ್ದ 14 ಕೆಜಿ ಮಾದಕ ವಸ್ತುಗಳನ್ನು ನಾಶಪಡಿಸಿದ್ದಾರೆ. ಹಾಸನದ ಪ್ರಜ್ವಲ್ ಬಿಎಂಡಬ್ಲ್ಯು ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿರುವ ಕುಲುಮೆಯಲ್ಲಿ ಡ್ರಗ್ ಡಿಸ್ಪೋಸಲ್ ಸಮಿತಿ ಮೂಲಕ ಅಧಿಕಾರಿಗಳ ನೆರವಿನೊಂದಿಗೆ ನಾಶಮಾಡಲಾಗಿದೆ.