ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಡಂಪಿಂಗ್ ಯಾರ್ಡ್ ನ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ : ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣವನ್ನು ದೋಚಿದ ಕಳ್ಳರು ; ಪ್ರಕರಣ ದಾಖಲು
ಚಿಕ್ಕಮಗಳೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ, ಅನೇಕರು ಈಗಾಗಲೇ ಆಸ್ಪತ್ರೆ ಸೇರಿದ್ದರು ಕೂಡ ನಗರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ , ನಗರದ ಜನವಸತಿ ಪ್ರದೇಶದಲ್ಲಿ ತ್ಯಾಜ್ಯದ ವಿಂಗಡಣೆ ಮಾಡುವ ಡಂಪಿಂಗ್ ಯಾರ್ಡ್ ಮಾಡುತ್ತಿದ್ದಾರೆ ಇದು ಜನರ ಬದುಕಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಜನರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಚಿಕ್ಕಮಗಳೂರು ನಗರದಾದ್ಯಂತ ಪೌರಕಾರ್ಮಿಕರು ಸಂಗ್ರಹಿಸಿದ ತ್ಯಾಜ್ಯವನ್ನು ನಗರದ ಪ್ರಮುಖ ಭಾಗವಾದ ಸಂತೆ ಮಾರುಕಟ್ಟೆ ಆವರಣಕ್ಕೆ ತಂದು ಬೇರೆ ವಾಹನಗಳಿಗೆ ಡಂಪ್ ಮಾಡುವುದು, ತ್ಯಾಜ್ಯ ವಿಂಗಡಣೆ ಮಾಡಲು ಮುಂದಾಗಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸ್ಥಳೀಯ ನಿವಾಸಿಗಳು ದಲಿತ ಸಂಘರ್ಷ ಸಮಿತಿ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಜಾಗದಲ್ಲಿ ಪ್ರತೀ ಬುಧವಾರ ಸಂತೆ ನಡೆಯುತ್ತದೆ, ಮೀನು ಮಾರುಕಟ್ಟೆಯೂ ಈ ಪ್ರದೇಶದಲ್ಲಿದ್ದು, ಈ ಆವರಣದಲ್ಲೇ ತ್ಯಾಜ್ಯ ಸುರಿದು ಡಂಪ್ ಮಾಡುವುದರಿಂದ ತ್ಯಾಜ್ಯದ ನೀರು ಎಲ್ಲೆಂದರಲ್ಲಿ ಹರಿಯುವುದರಿಂದ ಮತ್ತು ಗಬ್ಬು ವಾಸನೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೂಡಲೇ ತ್ಯಾಜ್ಯ ಇಲ್ಲಿ ಡಂಪ್ ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು. ಅಲ್ಲದೇ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಬರಬೇಕೆಂದು ಸ್ಥಳೀಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ನಂತರದಲ್ಲಿ ಸ್ಥಳಕ್ಕಾಮಿಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಪೌರಾಯುಕ್ತ ಬಸವರಾಜು ಅವರಿಗೆ ಸ್ಥಳೀಯರು ಸಂತೇಮೈದಾನದ ಆವರಣದಲ್ಲಿ ತ್ಯಾಜ್ಯ ಡಂಪ್ ಮಾಡುವುದಕ್ಕೆ ವಿರೊಧ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಒಪ್ಪದ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಸಂತೇಮೈದಾನದ ಜಾಗ ನಗರಸಭೆಗೆ ಸೇರಿದ್ದಾಗಿದ್ದು, ನಗರದಲ್ಲಿ ಸಂಗ್ರಹಿಸಿದ ತ್ಯಾಜ್ಯ ವಿಂಗಡಣೆ ಮಾಡಲು, ಡಂಪ್ ಮಾಡಲು ಬೇರೆ ಜಾಗ ಇಲ್ಲದ ಕಾರಣಕ್ಕೆ ಸಂತೇಮೈದಾನದಲ್ಲಿರುವ ಖಾಲಿ ಜಾಗದಲ್ಲಿ ವಿಂಗಡಣೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯರು ಹಾಗೂ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರೊಂದಿಗೆ ಕೆಲಕಾಲ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರನ್ನು ನಿಯಂತ್ರಿಸಲು ಮುಂದಾದಾಗ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರು ಆದರೆ ಅವರ ಮಾತಿಗೆ ಒಪ್ಪದ ಸ್ಥಳೀಯರು ಮತ್ತೆ ವಾಗ್ವಾದಕ್ಕಿಳಿದರು.
ನಂತರದಲ್ಲಿ ಈ ಕುರಿತು ಮಾತನಾಡಿದ ಪೌರಾಯುಕ್ತ ಬಸವರಾಜ್ ಕಸ ವಿಗಂಡಣೆಗೆ ಬೇರೆ ಜಾಗ ಗುರುತಿಸಲಾಗುವುದು, ಇದಕ್ಕಾಗಿ ನಾಲ್ಕು ದಿನಗಳ ಕಾಲಾವಕಾಶ ನೀಡಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಸ್ಥಳೀಯರು ನಾಲ್ಕು ದಿನಗಳ ಒಳಗೆ ಕಸವಿಂಗಡಣೆ, ಡಂಪಿಂಗ್ ಯಾರ್ಡ್‍ಗೆ ಬೇರೆ ಜಾಗ ಗುರುತಿಸಬೇಕು. ಒಂದುವೇಳೆ ನಾಲ್ಕು ದಿನಗಳೊಳಗೆ ಸಮಸ್ಯೆಯನ್ನು ಬಗೆಹರಿಸದೆ ಹೋದಲ್ಲಿ ನಗರಸಭೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಮೌಸಿನ್, ಸಾದಿಕ್, ನಗರಸಭೆ ನಾಮನಿರ್ದೇಶಿತ ಸದಸ್ಯ ರವಿ, ಮುಬಾರಕ್ ಸೇರಿದಂತೆ ಸ್ಥಳೀಯರಿದ್ದರು.






0 Comments