ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಹಸುವಿಗೆ ಲಾರಿ ಗುದ್ದಿಸಿ ಅಸುನೀಗುವಂತೆ ಮಾಡಿ ಬಳಿಕದಲ್ಲಿ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ ಲಾರಿ ಚಾಲಕ ಹಾಗೂ ನಿರ್ವಾಹಕರನ್ನು ಗ್ರಾಮಸ್ಥರೇ ಹಿಂಬಾಲಿಸಿ ಲಾರಿಯನ್ನು ಅಡ್ಡಗಟ್ಟಿ ಈ ಕೃತ್ಯವನ್ನು ಎಸಗಿದವರರಿಂದಲೇ ಹಸುವಿನ ಅಂತ್ಯ ಸಂಸ್ಕಾರ ಮಾಡಿಸಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಲಾರಿ ಓಡಿಸುತ್ತಿದ್ದ ಚಾಲಕನೋರ್ವ ಹಸುವಿಗೆ ಗುದ್ದಿದ ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿತ್ತು ಆದರೆ ಇದನ್ನು ಪರಿಗಣಿಸದೇ ಚಾಲಕ ನಿರ್ಲಕ್ಷ್ಯವಹಿಸಿ ಸ್ಥಳದಿಂದ ಹಿಟ್ ಅಂಡ್ ರನ್ ಆಗಿದ್ದಾನೆ. ಈ ಘಟನೆಯನ್ನು ಕಂಡ ಕಾವಡಿಯ ಗ್ರಾಮಸ್ಥರು ತಮ್ಮ ವಾಹನವನ್ನು ತೆಗೆದುಕೊಂಡು ಲಾರಿಯ ಬೆನ್ನಟ್ಟಿ ಲಾರಿಯನ್ನು ತಡೆದಿದ್ದಾರೆ. 

ಕೂಡಲೇ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಆತನನ್ನು ಹಾಗೂ ಲಾರಿಯಲ್ಲಿದ್ದ ನಿರ್ವಾಹಕರನ್ನು ಘಟನಾ ಸ್ಥಳಕ್ಕೆ ಕರೆಸಿ, ಹಸುವಿನ ಮಾಲೀಕನ ಜಾಗದಲ್ಲಿ ಗುಂಡಿತೋಡಿಸಿ ಅಂತ್ಯ ಸಂಸ್ಕಾರವನ್ನು ಮಾಡಿಸಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮಸ್ಥರು ಅಪಘಾತ ಉಂಟುಮಾಡಿ ಹಸುವಿನ ಜೀವ ತೆಗೆದವರು ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ಆ ಪ್ರಾಣಿಗೆ ಏನಾಯಿತು ಎಂದು ಲಾರಿಯಿಂದ ಇಳಿದು ನೋಡಬಹುದಿತ್ತು, ಆದರೆ ಈ ಕೆಲಸವನ್ನು ಮಾಡದೇ ಲಾರಿಯವರು ಅಮಾನವೀಯ ವರ್ತನೆ ತೋರಿದ್ದಾರೆ. ಗ್ರಾಮಸ್ಥರೆಲ್ಲ ಒಗ್ಗೂಡಿ ಆತನಿಂದಲೆ ಅಂತ್ಯ ಸಂಸ್ಕಾರ ಮಾಡಿಸಿದ್ದೇವೆ ಎಂದರು.