ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಮನೆಗೆ ಎನ್.ಎಸ್.ಯು.ಐ ಕಾರ್ಯಕರ್ತರು ನುಗ್ಗಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನುರಿನಲ್ಲೂ ಯುವಮೋರ್ಚಾ ವತಿಯಿಂದ ಪ್ರತಿಭಟನೆ ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಮುಖಂಡರು ಪ್ರತಿಭಟನೆ ಹೆಸರಲ್ಲಿ ಶಿಕ್ಷಣ ಸಚಿವರ ಮನೆಗೆ ನುಗ್ಗಿರುವ ಕಿಡಿಗೇಡಿಗಳು ಯಾವುದೋ ದುಷ್ಟರ ಪ್ರಚೋದನೆಗೊಳಗಾಗಿ ಈ ಕೃತ್ಯವನ್ನು ನಡೆಸಿದ್ದಾರೆ. ಕಾನೂನನ್ನು ಗೌರವಿಸದೆ ಈ ರೀತಿಯ ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. 

ಮೋದಿ ಸರ್ಕಾರ ರಚನೆಯಾದ ನಂತರದಲ್ಲಿ ಕಾಂಗ್ರೆಸ್ಸಿಗರಿಗೆ ವಿರೋಧಿಸಲು ವಿಚಾರಗಳೇ ಸಿಗುತ್ತಿಲ್ಲ, ಈ ನಿಟ್ಟಿನಲ್ಲಿ ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಭವಿಷ್ಯದ ಪೀಳಿಗೆಗೆ ತಿಳಿಸಲೆಂದು ಪಠ್ಯದಲ್ಲಿ ಭಾರತದ ಪರಂಪರೆ, ವೈಭವೀಕರಣವನ್ನು ಮಾಡಲಾಗಿದೆ, ಇದನ್ನು ವಿರೋಧಿಸುತ್ತಿರುವವರ ಮನಸ್ಥಿತಿಯ ಕುರಿತು ಆಲೋಚಿಸಬೇಕಿದೆ. - ಶಶಿಧರ್ ಆಲ್ದೂರು, ಜಿಲ್ಲಾ ಕಾರ್ಯದರ್ಶಿ, ಬಿಜೆಪಿ ಯುವಮೋರ್ಚಾ ಚಿಕ್ಕಮಗಳೂರು 

ಅಂತೆಯೇ ಈ ಸಂದರ್ಭದಲ್ಲಿ ಬೈಕ್ ಅವಘಡದಲ್ಲಿ ಮೃತಪಟ್ಟ ಬಜರಂಗದಳದ ಕಾರ್ಯಕರ್ತರಾದ ಮನೋಜ್ ಹಾಗೂ ಉತ್ತಮ್ ಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.