ತಾಲೂಕು ಪಂಚಾಯತ್ ಮಾಜಿ ಸದಸ್ಯ ನಿಧನ
ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯರಾಗಿದ್ದ ಮಾಗಡಿ ಗ್ರಾಮದ ನಿರ್ವಾಣಸಿದ್ದಪ್ಪ (80) ಅವರು ನಿಧನರಾಗಿದ್ದಾರೆ. ಜನಪರವಾದ ಅನೇಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಗೌರವ ನಮನವನ್ನು ಸಲ್ಲಿಸಿದ್ದಾರೆ.
ಚರಂಡಿ ಮಣ್ಣೆಲ್ಲ ರಸ್ತೆಗೆ
ಬಾಳೆಹೊನ್ನೂರು : ಮಳೆಗಾಲ ಸಮೀಪಿಸುತ್ತಿರುವ ಕಾರಣ ದೇವದಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬರಗೋಡು ಗ್ರಾಮದಲ್ಲಿ ಚರಂಡಿ ಸ್ವಚ್ಛತೆಯನ್ನು ನಡೆಸಿ ಚರಂಡಿಯಿಂದ ತೆಗೆದ ಮಣ್ಣನ್ನು ರಸ್ತೆಗೆ ಹಾಕಲಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಿಗೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪಂಚಾಯತ್ ನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ರಸ್ತೆಯಿಂದ ಮಣ್ಣನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.
ಬೈಕ್ ಅಪಘಾತದಲ್ಲಿ ಇಬ್ಬರ ದುರ್ಮರಣ ನರಸಿಂಹರಾಜಪುರ : ನಿನ್ನೆ ರಾತ್ರಿಯ ವೇಳೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಬಜರಂಗದಳದ ಇಬ್ಬರು ಸಕ್ರಿಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಭದ್ರಾವತಿಯ ಜಂಕ್ಷನ್ ಸರ್ಕಲ್ ನಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಬೈಕ್ ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದ್ದು. ಬೈಕ್ ನಲ್ಲಿದ್ದ ಉತ್ತಮ್ ಹಾಗೂ ಮನೋಜ್ ಇಬ್ಬರೂ ಯುವಕರು ಅಪಘಾತದ ತೀವ್ರತೆಗೆ ದಾರುಣವಾಗಿ ಅಂತ್ಯ ಕಂಡಿದ್ದಾರೆ. ಯುವಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಹೇಳತೀರದಾಗಿದ್ದು, ಸ್ಥಳೀಯರು ಗೆಳೆಯರನ್ನು ಕಳೆದುಕೊಂಡಿರುವ ಕುರಿತು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ
ಮೂಡಿಗೆರೆಯ ಹೆಬ್ಬರಿಗೆ ಸುರೇಶ್ ಎಂಬುವವರ ಮನೆಯ ಸಮೀಪ ಇಂದು ಬೃಹದಾಕಾರದ 12 ಅಡಿ ಉದ್ದವಿದ್ದ ಕಾಳಿಂಗಸರ್ಪ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಧಾವಿಸಿದ ಸ್ನೇಕ್ ಆರೀಫ್ ತಮ್ಮ ಕೈಚಳಕದಿಂದ ಹಾವನ್ನು ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಅವರ ಸಮ್ಮುಖದಲ್ಲಿ ಹಾವನ್ನು ಚಾರ್ಮಾಡಿ ಘಾಟ್ ನ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
11ನೆ ಅಖಿಲ ಭಾರತ ಮಾರ್ಷಲ್ ಆರ್ಟ್ಸ್ ನ ಕರಾಟೆಯಲ್ಲಿ ಕೊಟ್ಟಿಗೆಹಾರದ ಯುವತಿಗೆ ಸ್ಥಾನ
ಕೇರಳದ ಕಲ್ಲಿಕೋಟೆಯಲ್ಲಿ ನಡೆದ 11 ನೆಯ ಅಖಿಲ ಭಾರತ ಮಾರ್ಷಲ್ ಆರ್ಟ್ಸ್ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಕೊಟ್ಟಿಗೆಹಾರದ ಯುಕ್ತ ಎರಡನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ರಾಜ್ಯಕ್ಕೆ, ಊರಿಗೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದ್ದಾರೆ. ಯುಕ್ತ ಅವರ ಈ ಸಾಧನೆಗೆ ಅನೇಕರು ಅಭಿನಂದಿಸಿದ್ದಾರೆ.
ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆಮನೆಗೆ ಶ್ರೀಗಳ ಭೇಟಿ :
ಶೃಂಗೇರಿ ಶ್ರೀಮಠದ ಜಗದ್ಗುರುಗಳಾದ ಶ್ರೀ ಜಗದ್ಗುರು ವಿಧುಶೇಖರ ಭಾರತೀತೀರ್ಥ ಮಹಾಸ್ವಾಮಿಗಳು ಬೆಂಗಳೂರಿನ ಗವಿಪುರಂನಲ್ಲಿರುವ ಡಾ.ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದ, ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವದಿಸಿದ ಅವರು ಸರ್ವರೂ ಪರರ ಹಿತಕ್ಕಾಗಿ ಶ್ರಮಿಸಬೇಕು, ನೈಸರ್ಗಿಕ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ತನ್ಮೂಲಕ ಸಮಾಜದ ಉನ್ನತಿಗಾಗಿ ಶ್ರಮಿಸಬೇಕು ಎಂದರು.
ಹಾಸನ :
ಮದುವೆಯಾದ ಮಹಿಳೆಗೆ ಪರಿಚಯಸ್ಥ ಯುವಕನಿಂದ ಕಿರುಕುಳ :
ಯುವಕನೋರ್ವ ಏಳು ತಿಂಗಳ ಹಿಂದೆ ಮದುವೆಯಾಗಿರುವ ವಿವಾಹಿತೆಗೆ ತನ್ನೊಂದಿಗೆ ಗಂಡನನ್ನು ಬಿಟ್ಟು ಬರುವಂತೆ ಹಿಂಸೆ ನೀಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವಕನ ಬೆದರಿಕೆ ಹಾಗೂ ನೀಡುತ್ತಿರುವ ಹಿಂಸೆಯನ್ನು ತಾಳಲಾರದೆ ಯುವತಿ ಠಾಣೆಯ ಮೆಟ್ಟಿಲೇರಿದ್ದಾಳೆ. ಆಕೆಯೊಂದಿಗೆ ತೆಗೆಸಿದ್ದ ಫೋಟೋವನ್ನು ಗಂಡನ ಮನೆಯವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯ ಹಿಂಸೆಯನ್ನು ತಾಳಲಾರದೆ ದೂರು ನೀಡಿದ್ದಾಳೆ.
ಶಿವಮೊಗ್ಗ :
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಪ್ರತಿಭಟನೆ
ಜನಪರ ಸಂಘಟನೆಗಳ ಒಕ್ಕೂಟದಿಂದ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಉಂಟಾದ ಲೋಪಗಳು, ಅದರಿಂದ ಕೆದಡಿದ ಸಮಾಜದ ಸ್ವಾಸ್ಥ್ಯದ ಕುರಿತು ಪ್ರತಿಭಟನೆ ನಡೆಯಿತು. ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನಾ ನಿರತರು ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ತಾಲೂಕು ಕಛೇರಿ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಮನೋಭಾವನೆಯಲ್ಲಿ ಉತ್ತಮ ರೀತಿಯ ಪ್ರಯೋಜನ ಲಭಿಸುವಂತಹ ಪಾಠಗಳ ಅಳವಡಿಕೆಯಾಗಬೇಕೆಂದು ಆಗ್ರಹಿಸಿದರು.
ಎನ್.ಎಸ್.ಯು.ಐ ದಾಂಧಲೆ ಖಂಡಿಸಿ ಬಿ.ಜೆ.ಪಿಯಿಂದ ಪ್ರತಿಭಟನೆ :
ಎನ್.ಎಸ್.ಯು.ಐ ಕಾರ್ಯಕರ್ತರು ಶಿಕ್ಷಣ ಸಚಿವರು ಮನೆಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ಕುರಿತು ರಾಜ್ಯದ್ಯಂತ ತೀವ್ರವಾದ ವಿರೋಧ ವ್ಯಕ್ತವಾಗಿದ್ದು ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆಯಿತು. ಬಾಳೆಹೊನ್ನೂರು ಹಾಗೂ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಹಾಗೂ NSUI ಸಂಘಟನೆಗೆ ಧಿಕ್ಕಾರ ಕೂಗಿ ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಕೊಡಗು :
NSUI ಪುಡಿ ರೌಡಿಗಳನ್ನು ಬಂಧಿಸಿ ; ಕೆಜಿ ಬೋಪಯ್ಯ
ಒಂದು ವಿದ್ಯಾರ್ಥಿ ಸಂಘಟನೆಯಾಗಿ ಈ ರೀತಿಯ ಘಟನೆಯನ್ನು ನಡೆಸಿರುವುದು ಅತ್ಯಂತ ಖಂಡನಾರ್ಹ, ಶಾಂತಿ ಕದಡಲು ಯತ್ನಿಸುತ್ತಿರುವ ಕ್ರಿಮಿಗಳನ್ನು ಈಗಲೇ ಮಟ್ಟಹಾಕಬೇಕು, ದಾಳಿನಡೆಸಿರುವ ಎನ್ಎಸ್ಯುಐ ಪುಡಿ ರೌಡಿಗಳನ್ನು ಬಂಧಿಸಬೇಕು, ಕಾಂಗ್ರೆಸ್ನ ಭವಿಷ್ಯ ಈಗಲೇ ಎದ್ದು ಕಾಣುತ್ತಿದೆ ಎಂದು ಟ್ವಿಟರ್ ನ ಮೂಲಕ ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಖಂಡನೆ ವ್ಯಕ್ತಪಡಿಸಿದರು.



0 Comments