ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಆರಂಭವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧಿತ ವಿವಾದದ ಮುಂದುವರೆದ ಭಾಗವಾಗಿ ಇದೀಗ ಕಾಂಗ್ರೆಸ್ ನಿಂದ ಪಾದಯಾತ್ರೆಯ ಕೂಗು ಕೇಳಿ ಬಂದಿದೆ. ಪಠ್ಯಪುಸ್ತಕ ಪರಿಷ್ಕರಣ ಸಮಿತಿಯು ವಿಸರ್ಜನೆಯಾಗಿದೆ ಆದರೆ ಆ ಪಠ್ಯಗಳು ಹಾಗೆಯೇ ಉಳಿದಿದೆ ಇದು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರಕವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.
ಪಠ್ಯ ಪರಿಷ್ಕರಣೆಯಲ್ಲಿ ದೊಡ್ಡ ದೊಡ್ಡ ಪ್ರಮಾದಗಳೇ ಆಗಿದ್ದರೂ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿದ್ಯಾರ್ಹತೆ ಏನು? ಬೋಧನಾ ಅನುಭವ ಏನೆಂದು ಪ್ರಶ್ನಿಸಿದರು. ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದರು. ಪರಿಷ್ಕರಣೆ ಸಂಬಂಧ ಇದುವರೆಗೂ ಪಿಡಿಎಫ್ ಬಿಡುಗಡೆಯಾಗಿಲ್ಲ ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಆಗಿರುವ ಅಧ್ವಾನ ಸರಿಪಡಿಸುವಂತೆ ಆಗ್ರಹಿಸಿ ಜೂ.15 ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುತ್ತದೆ. ಅಂದು ಬೆಳಗ್ಗೆ 7ಕ್ಕೆ ಕುವೆಂಪು ಸಮಾಧಿಗೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಸುಮಾರು 18 ಕಿ.ಮೀ. ಜಾಥಾ ಸಾಗಿ ಮಧ್ಯಾಹ್ನ 12 ಗಂಟೆಗೆ ತೀರ್ಥಹಳ್ಳಿಯ ಟೌನ್‌ಹಾಲ್ ಬಳಿ ಬಂದು, ಬಹಿರಂಗ ಸಭೆ ನಡೆಸಲಾಗುತ್ತದೆ ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಹೆಸರಿನಲ್ಲಿ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ, ಪುಸ್ತಕಗಳು ಮಕ್ಕಳ ಕೈ ಸೇರುವುದು ಯಾವಾಗ, ಅವರು ಅದನ್ನು ಓದುವುದು ಅರ್ಥೈಸಿಕೊಳ್ಳುವುದು ಯಾವಾಗ ಇದಕ್ಕೆ ಸರ್ಕಾರವೇ ಹೊಣೆಯಾಗಿದೆ ಎಂದರು.





0 Comments