ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ 37 ಕೆರೆಗಳ ಹೂಳು ತೆಗೆಯುವ ಕಾಮಗಾರಿಯ ಹೆಸರಿನಲ್ಲಿ ಬೃಹತ್ ಹಗರಣವೇ ನಡೆದಿತ್ತು ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವಂಚಿಸಲಾಗಿದೆ ಎಂಬ ಆರೋಪದಡಿ ಎಇಇ ಮಂಜುನಾಥ್ ನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಓ ಪ್ರಭು ಆದೇಶಿಸಿದ್ದಾರೆ. 

ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಸಂಬಂಧಿಸಿದಂತೆ ನರಸಿಂಹರಾಜಪುರದ 37 ಕೆರೆಯ ಹೂಳೆತ್ತದೆ ಕೇವಲ ದಾಖಲೆಗಾಗಿ ಮಾತ್ರ ಜೆಸಿಬಿ ಹಾಗೂ ಟ್ರಾಕ್ಟರ್ ಗಳನ್ನು ಕೆರೆಯ ಪಕ್ಕದಲ್ಲಿ ನಿಲ್ಲಿಸಿ ಫೋಟೋ ತೆಗೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಪಂಚಾಯತ್ ರಾಜ್ ಇಲಾಖೆಯ ಎಇಇ ಮಂಜುನಾಥ್ ರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಆದೇಶ ನೀಡಿದ್ದಾರೆ. ಕೆರೆಗಳ ಹೂಳು ತೆಗೆಯುವ ಕಾಮಗಾರಿಯನ್ನು ನಡೆಸದೆ, ಸರ್ಕಾರಕ್ಕೆ ಹಣ ಮರಳಿ ಹೋಗುತ್ತದೆ ಎಂದು, ಹಣವನ್ನು ಕೆಲಸವೇ ನಡೆಸದ ಗುತ್ತಿಗೆದಾರನ ಖಾತೆಗೆ ಇಂಜಿನಿಯರ್ ಜಮೆ ಮಾಡಿದ್ದರು. ಈ ಕುರಿತಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಕೂಡ ಗಂಭೀರ ಆರೋಪವನ್ನು ಮಾಡಿದ್ದರು. 


ಈ ಅವ್ಯವಹಾರದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಅವರು ತಾಲೂಕು ಪಂಚಾಯತ್ ಇಓ ನಯನಾ ಅವರಿಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿದ್ದರು, ಸೂಚನೆಯ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ನಯನ ಕೆರೆಯ ಹೂಳೆತ್ತುವ ಕಾಮಗಾರಿಗಳು ನಡೆಯದಿರುವುದನ್ನು ವರದಿಯ ಮೂಲಕ ತಿಳಿಸಿದ್ದಾರೆ. ಈ ವರದಿಯನ್ನಾಧರಿಸಿ ಯಾವುದೇ ಕಾಮಗಾರಿಗಳು ನಡೆಯದ ಹಿನ್ನೆಲೆ ಅಧಿಕಾರಿಯ ಸಸ್ಪೆಂಡ್ ಗೆ ಆದೇಶ ನೀಡಲಾಗಿದೆ.

37 ಕೆರೆಗಳ ಅಭಿವೃದ್ಧಿಗೆಂದು, 25 ಲಕ್ಷಕ್ಕೂ ಅಧಿಕ ಹಣ ಸರ್ಕಾರದಿಂದ ಬಿಡುಗಡೆಯಾಗಿತ್ತು, ಆದರೆ ಯಾವುದೇ ಕೆಲಸಗಳನ್ನು ಮಾಡದೆ ಹಣವನ್ನು ಗುತ್ತಿಗೆದಾರನಿಗೆ ಹಾಕಿ ಸೂಕ್ತ ರೀತಿಯ ಕಾಮಗಾರಿಗಳನ್ನು ನಡೆಸದೆ ಅಕ್ರಮದಲ್ಲಿ ಭಾಗಿಯಾಗಿರುವ ಕಾರಣ ಇಂಜಿನಿಯರ್ ನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.