ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಮಲೆನಾಡು ಮತ್ತು ಕರಾವಳಿಯ 7 ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ ಎರಡರ ವರೆಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲೂ ಮಳೆ ಹೆಚ್ಚಾಗುತ್ತಿದ್ದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದೆ.

ಇದನ್ನೂ ಓದಿ :  ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ರಾಮಚಂದ್ರಾಪುರ ಮಠದ ಮೇಲೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಉಗ್ರರು

ಇಂದಿನಿಂದ ಆಗಸ್ಟ್​ 2ರವರೆಗೆ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಅಂತೆಯೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೂಡ ವ್ಯಾಪಕ ಮಳೆಯಾಗಲಿದೆ ಎನ್ನಲಾಗಿದ್ದು  ಮಲೆನಾಡು ಮತ್ತು ಕರಾವಳಿಯ 7 ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. 

ಉತ್ತರ ಒಳನಾಡಿನಲ್ಲೂ ಮಳೆ ಹೆಚ್ಚಾಗುತ್ತಿದ್ದು ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಇಂದು ‘ಹಳದಿ ಅಲರ್ಟ್’ ಘೋಷಿಸಲಾಗಿದೆ. ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಆರಂಭದ ಮುಂಗಾರು ಭಾರೀ ಪ್ರಮಾಣದಲ್ಲಿ ಸುರಿದ ಹಿನ್ನೆಲೆ ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳ ಜನ ಜೀವನಕ್ಕೆ ತೊಂದರೆಯುಂಟಾಗಿತ್ತು. ಭಾರೀ ಮಳೆಯಾಗುವ ಸಂದರ್ಭದಲ್ಲಿ ರೈತರು ಸೂಕ್ತವಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ.