ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ನಿನ್ನೆ ರಾತ್ರಿ 8.30 ರ ವೇಳೆಗೆ ದುಷ್ಕರ್ಮಿಗಳ ಸಂಚಿಗೆ ಬಲಿಯಾಗಿ ಭೀಕರವಾಗಿ ಹತ್ಯೆಗೀಡಾದ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಮಿಟಿಯ ಕಾರ್ಯಕಾರಿಣಿ ಸದಸ್ಯ ಪ್ರವೀಣ ನೆಟ್ಟಾರು ಹತ್ಯೆಗೆ ಇಡೀ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿಡಿ ರಾಜೇಗೌಡ ತಮ್ಮ ಜನ್ಮದಿನದ ಆಚರಣೆಯನ್ನು ಬೆಂಬಲಿಗರು ನಡೆಸಿದಂತೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ನಾಳೆ ದಿನಾಂಕ 28.07.2022 ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅವರ ಜನ್ಮ ದಿನವಾಗಿದ್ದು, ಈ ದುಃಖದ ಪರಿಸ್ಥಿತಿಯಲ್ಲಿ ಜನ್ಮದಿನದ ಆಚರಣೆ ಬೇಡ ಎಂದು ಸ್ವತಃ ಶಾಸಕರೇ ತಮ್ಮ ಅಭಿಮಾನಿಗಳಿಗೆ ಬೆಂಬಲಿಗರಿಗೆ ಮತ್ತು ಪಕ್ಷದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ. ಯುವಕನನ್ನು ಕಳೆದುಕೊಂಡ ಪೋಷಕರ ಹಾಗೂ ಮನೆಯವರ ನೋವು ಭರಿಸಲಾರದ್ದು. ಕೇವಲ ಮನೆಯವರಿಗಷ್ಟೇ ಮಾತ್ರ ಈ ನೋವು ಕಾಡಬಾರದು ಅವರ ನೋವಿನೊಂದಿಗೆ ನಾವು ನಿಲ್ಲೋಣ ತನ್ಮೂಲಕ ಕುಟುಂಬಕ್ಕೆ ಸಾಂತ್ವಾನ ಹಾಗೂ ಧೈರ್ಯವನ್ನು ತುಂಬುತ್ತಾ ಕುಟುಂಬದವರೊಂದಿಗೆ ಭಾಗಿಯಾಗೋಣ ಎಂದು ಕರೆ ನೀಡಿದ್ದಾರೆ.
ಪ್ರವೀಣ್ ಹತ್ಯೆಗೆ ಕಾಂಗ್ರೆಸ್ ಶಾಸಕ ಟಿ. ಡಿ ರಾಜೇಗೌಡ ಖಂಡನೆ :
ಪ್ರವೀಣ್ ಹತ್ಯೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಪ್ರವೀಣ ನೆಟ್ಟಾರು ಹಂತಕರಿಗೆ ತೀವ್ರ ಶಿಕ್ಷೆಯಾಗಬೇಕು ಮಗನನ್ನು ಕಳೆದುಕೊಂಡ ತಂದೆ ತಾಯಿ ಹಾಗೂ ಆತನ ಪತ್ನಿಗೆ ನ್ಯಾಯ ದೊರೆಯಬೇಕು. ಬೇರೊಬ್ಬರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವುದು ಕ್ರಮವಲ್ಲ ಹಂತಕರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಹಿನ್ನಲೆ :
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನಿನ್ನೆ ಬರ್ಬರವಾಗಿ ಹತ್ಯೆಗೊಳಗಾಗಿದ್ದರು.
ಬಿಜೆಪಿ ಯುವ ಮುಖಂಡ 29 ವರ್ಷದ ಪ್ರವೀಣ್ ನೆಟ್ಟಾರು ಎಂಬ ಯುವಕನನ್ನು ನಗರದ ಬೆಳ್ಳಾರೆ ಪೇಟೆಯಲ್ಲಿ ಹತ್ಯೆಗೈದಿದ್ದರು. ಘಟನೆ ನಡೆದ ರಾತ್ರಿಯೇ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರು. ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಬೈಕ್‌ನಲ್ಲಿ ಬಂದಂತಹ ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ಪ್ರವೀಣ್ ನೆಟ್ಟಾರು ಮೇಲೆ ಮನಸೋ ಇಚ್ಛೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದರು. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಪೆರುವಾಜೆ ಕ್ರಾಸ್ ಬಳಿ ಪ್ರವೀಣ್ ಅವರು ಕೋಳಿ ಅಂಗಡಿ ಹೊಂದಿದ್ದು, ರಾತ್ರಿ ಅಂಗಡಿ ಮುಚ್ಚುತ್ತಿರುವ ವೇಳೆ ಬೈಕ್‌ನಲ್ಲಿ ಬಂದಂತಹ ಮೂವರು ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಪ್ರವೀಣ್ ತಪ್ಪಿಸಿಕೊಳ್ಳಲು ಓಡಿದರಾದರೂ ಅಟ್ಟಾಡಿಸಿಕೊಂಡು ಹೋದ ದುಷ್ಕರ್ಮಿಗಳು ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಂದು ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಬಿಜೆಪಿಯ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾ ಯುವ ಮೋರ್ಚಾ ಸಾಮೂಹಿಕ ರಾಜೀನಾಮೆ :
ಹಿಂದೆಲ್ಲಾ ನಡೆದ ಕೊಲೆಗಳಿಗೆ ಯಾವ ರೀತಿಯಲ್ಲಿ ಉತ್ತರ ಸಿಕ್ಕಿದೆ ಎನ್ನುವುದು ನೋಡಿದ್ದೇವೆ, ಕಠಿಣ ಕ್ರಮ ಭರವಸೆಯಾಗಿಯೇ ಉಳಿದಿರುವ ಕಾರಣ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್ ಸೇರಿದಂತೆ ಜಿಲ್ಲಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ 9 ಮಂಡಲದ ಅಧ್ಯಕ್ಷರು ಸೇರಿ ಪಕ್ಷದ ಎಲ್ಲಾ ಜವಾಬ್ದಾರಿ ಗಳಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.





0 Comments