ಚಿಕ್ಕಮಗಳೂರು
ಶೃಂಗೇರಿ ತಾಲೂಕಿನಲ್ಲಿ ಅತೀ ಹೆಚ್ಚಿನ ಮಳೆ :
ಮಲೆನಾಡು ಭಾಗದಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 89.5 ಮಿ.ಮೀ ಮಳೆಯಾಗಿದೆ, ಅತೀ ಕಡಿಮೆ ಅಂದರೆ 5.8 ಮಿ. ಮೀಟರ್ ಮಳೆ ಕಡೂರು ತಾಲೂಕಿನಲ್ಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಯಿಂದ ಸುರಿತ್ತಿರುವ ಮಳೆಯು ವಾಡಿಕೆಗಿಂತ ಶೇಕಡ 22ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶೃಂಗೇರಿ ತಾಲೂಕಿನಲ್ಲಿ 89.5 ಮಿ.ಮೀ, ಕೊಪ್ಪ ತಾಲೂಕಿನಲ್ಲಿ 82.4, ಮೂಡಿಗೆರೆ ತಾಲೂಕಿನಲ್ಲಿ 60.6, ಎನ್ ಆರ್ ಪುರ 45.3, ಚಿಕ್ಕಮಗಳೂರು 34.5, ತರೀಕೆರೆ 27.4, ಅಜ್ಜಂಪುರ 22.9 ಹಾಗೂ ಅತೀ ಕಡಿಮೆಯಾಗಿ ಕಡೂರಿನಲ್ಲಿ 5.8 ಮಳೆಯಾಗಿದೆ ಎಂಬುದಾಗಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಜನತಾ ಪಾರ್ಟಿ ಸೇರ್ಪಡೆ :
ಜನತಾ ಪಾರ್ಟಿಯ ಶೃಂಗೇರಿ ತಾಲೂಕಿನ ಉಪಾಧ್ಯಕ್ಷರಾಗಿ ಸತೀಶ್ ಕುಮಾರ್ ಪಿ.ಕೆ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯತ್ನಟ್ಟಿ ಸಂಜಯ್, ಕುಳುಗಾರು ಸೂರ್ಯ, ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜನತಾಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಟಿ.ಸಿ ರಾಜೇಂದ್ರ, ಜಿಲ್ಲಾಧ್ಯಕ್ಷರಾದ ರಜಿತ್ ಬೇಸೂರು, ಕ್ಷೇತ್ರಾಧ್ಯಕ್ಷ ಕೆ.ಎಸ್ ವೆಂಕಪ್ಪ ಆಚಾರ್ಯ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಪತ್ತೆಗಾಗಿ ಕಾರ್ಯಾಚರಣೆ :
ನಿನ್ನೆ ಚಿಕ್ಕಮಗಳೂರಿನ ಉಂಡೆದಾಸರ ಹಳ್ಳಿಯಲ್ಲಿ ನದಿಯಲ್ಲಿ ಮುಳುಗಿದ ವ್ಯಕ್ತಿಯ ದೇಹವನ್ನು ಪತ್ತೆ ಮಾಡುವ ಸಲುವಾಗಿ ಎನ್.ಡಿ.ಆರ್.ಎಫ್. ತಂಡ, ನಗರ ಸಭೆಯ ಅಧಿಕಾರಿಗಳು, ಪೊಲೀಸ್ ಇಲಾಖೆ, ತಹಸೀಲ್ದಾರ್ ಹಾಗೂ ಸ್ಥಳೀಯ ನಗರಸಭಾ ಸದಸ್ಯರ ಸಹಯೋಗದೊಂದಿಗೆ ಇಂದೂ ಶೋಧ ಕಾರ್ಯಾಚರಣೆ ನಡೆಯಿತು. ಎಷ್ಟೇ ಹುಡುಕಿದರೂ ಇಂದೂ ಸುಳಿವು ದೊರೆಯದ ಕಾರಣ ವ್ಯಕ್ತಿಯ ಪತ್ತೆಗಾಗಿ ನಾಳೆಯೂ ಶೋಧ ಕಾರ್ಯವನ್ನು ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹುಣ್ಣಿಮೆಯ ಅಂಗವಾಗಿ ದತ್ತಾತ್ರೇಯ ಪಾದುಕೆಗಳ ದರ್ಶನ ಪಡೆದ ಬಜರಂಗದಳ
ಹಿಂದೂಗಳ ಧಾರ್ಮಿಕ ಕೇಂದ್ರವಾದ ಚಿಕ್ಕಮಗಳೂರಿನ ಪ್ರಕೃತಿಯ ಮಡಿಲಿನಲ್ಲಿರುವ ದತ್ತಪೀಠದಲ್ಲಿ ಹುಣ್ಣಿಮೆ ಪೂಜೆಯ ಅಂಗವಾಗಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕೊಪ್ಪ ಪ್ರಖಂಡದ ಕಾರ್ಯಕರ್ತರು ದತ್ತ ಪಾದುಕೆಗಳ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಸಹ ಸಂಯೋಜಕರಾದ ರಘು ಸಕಲೇಶಪುರ ಹಾಗೂ ಬಜರಂಗದಳದ ಕಾರ್ಯಕರ್ತರು ಹಾಜರಿದ್ದರು.
ವ್ಯಕ್ತಿಯ ಶವ ಪತ್ತೆ :
ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮದನ್ ಅವರ ಶವ ಚಿಕ್ಕಮಗಳೂರಿನ ಮಾಗಡಿ ಕೆರೆಯಲ್ಲಿ ಪತ್ತೆಯಾಗಿದೆ. ಆಲ್ದೂರು ಹೊಸಳ್ಳಿಯ ನಿವೃತ್ತ ಶಿಕ್ಷಕರಾದ ಗೋಪಾಲ್ ರವರ ಪುತ್ರ ಮದನ್ ಶವ ಎಂದು ಗುರುತಿಸಲಾಗಿದೆ.
ಶಿವಮೊಗ್ಗ
ಭದ್ರಾ ಜಲಾಶಯದ ನೀರನ್ನು ನದಿಗೆ ಬಿಡುವುದರ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ :
ಮಲೆನಾಡು ಭಾಗದಲ್ಲಿ ಉಂಟಾಗಿರುವ ಸತತ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ, ಜಲಾಶಯ ಸಂಪೂರ್ಣವಾಗಿ ತುಂಬಲು ಕೆಲವೇ ಅಡಿಗಳು ಇರುವ ಕಾರಣ ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್ ಮುಖಾಂತರ ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸನ್ನಿವೇಶವಿದ್ದು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ನದಿ ಪಾತ್ರದಲ್ಲಿ ಜಾನುವಾರುಗಳು, ನಾಗರೀಕರು ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತಿಳಿಸಿದೆ.
ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿ ; ಕಾಗೋಡು ತಿಮ್ಮಪ್ಪ :
ನೆರೆಯಿಂದ ಹಾನಿಗೀಡಾದವರಿಗೆ, ಮನೆ ಕಳೆದುಕೊಂಡವರಿಗೆ ಸರ್ಕಾರ ತಕ್ಷಣ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದರು. ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಗೌತಮಪುರ, ಆಚಾಪುರ, ಹೊಸೂರು ಇನ್ನಿತರೆ ಭಾಗಗಳಿಗೆ ಭೇಟಿ ನೀಡಿ ಆಚಾಪುರದಲ್ಲಿ ಗಾಳಿಮಳೆಗೆ ಮನೆ ಕಳೆದುಕೊಂಡ ಪ್ಯಾರಿಜಾನ್ ಎಂಬ ಮಹಿಳೆಗೆ ವೈಯಕ್ತಿಕ ಧನ ಸಹಾಯ ನೀಡಿ ಅವರು ಮಾತನಾಡಿದರು.
ಕೊಡಗು :
ಬೈಕ್ ಹಾಗೂ ಶಾಲಾ ವಾಹನದ ನಡುವೆ ಭೀಕರ ರಸ್ತೆ ಅಪಘಾತ
ಮಡಿಕೇರಿ ಹಾಗೂ ಚೆಟ್ಟಳ್ಳಿ ಮಾರ್ಗದ ಕತ್ತಲೆಕಾಡು ಬಳಿಯಲ್ಲಿ ಶಾಲಾ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಸಂಚಾರ ನಡೆಸುತ್ತಿದ್ದ 22 ವರ್ಷ ಪ್ರಾಯದ ಲಿತೀಶ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ, ಪ್ರಯಾಣ ನಡೆಸುತ್ತಿದ್ದ ಕೋಟಿ ಪೂಜಾರಿ ಎಂಬುವವರು ಸಹ ಗಂಭೀರ ಗಾಯಗಳಿಗೆ ತುತ್ತಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸಂಬಂಧ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಮಡಿಕೇರಿ ಗ್ರಾಮಾಂತರ ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಯುವಕನನ್ನು ಕಳೆದುಕೊಂಡಿರುವ ಮನೆಯವ ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ.



0 Comments