ಚಿಕ್ಕಮಗಳೂರು :
ನಾಲ್ಕು ದಿನ ಕಳೆದರೂ ದೊರೆಯದ ಪುಟ್ಟ ಬಾಲಕಿಯ ಸುಳಿವು :
ಕಳೆದ ನಾಲ್ಕು ದಿನಗಳ ಹಿಂದೆ ಶಾಲೆಯಿಂದ ಮನೆಗೆ ಮರಳುವ ವೇಳೆ ಕೈಕಾಲು ಹಾಗೂ ಛತ್ರಿಯನ್ನು ತೊಳೆಯುವ ಸಲುವಾಗಿ ರಭಸವಾಗಿ ಹರಿಯುತ್ತಿದ್ದ ಹಳ್ಳಕ್ಕೆ ತೆರಳಿ ಕೊಚ್ಚಿ ಹೋದ ಬಾಲಕಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ, ಬಾಲಕಿಯ ಕುರಿತು ಯಾವುದೇ ಸುಳಿವುಗಳು ಸಿಗದೇ ಇರುವುದು ಪೋಷಕರಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ. ಚಿಕ್ಕಮಗಳೂರಿನ ಹೊಸಪೇಟೆ ಗ್ರಾಮದಲ್ಲಿರುವ ಹಳ್ಳದಲ್ಲಿ ಬಾಲಕಿ ಸುಪ್ರೀತಾ ಕೊಚ್ಚಿಹೋಗಿದ್ದಳು, ಈ ನಂತರದಲ್ಲಿ ಆಕೆಯನ್ನು ಪತ್ತೆ ಮಾಡುವ ಸಲುವಾಗಿ SDRF, ಅಗ್ನಿಶಾಮಕದಳ, ಧರ್ಮಸ್ಥಳ ವಿಪತ್ತು ಸಿಬ್ಬಂದಿ ಸೇರಿ ಮೂರು ರಕ್ಷಣಾ ತಂಡಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ. ಆದರೆ ಬಾಲಕಿಯ ಕುರಿತಾಗಿ ಯಾವುದೇ ಮಾಹಿತಿಗಳು ಈ ವರೆಗೆ ಲಭ್ಯವಾಗಿಲ್ಲ. ಶೋಧ ನಡೆಸುತ್ತಿರುವ ಸಿಬ್ಬಂದಿಗಳಿಗೆ ಇತ್ತ ಹೊಸಪೇಟೆ, ಕಟ್ಟೆಹೊಳೆ, ಹಿರೇಬಿದ್ದರೇ, ಸಿದ್ದರಹಳ್ಳಿ ಗ್ರಾಮಗಳ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ, ಆದರೂ ಬಾಲಕಿ ಕುರಿತಾದ ಯಾವುದೇ ಗುರುತುಗಳು ಈ ವರೆಗೆ ಪತ್ತೆಯಾಗಿಲ್ಲ.
ನರಸಿಂಹರಾಜಪುರದಲ್ಲಿ ಬೃಹದಾಕಾರದ ಕಾಳಿಂಗ ಸರ್ಪ ಸೆರೆ :
ಮನೆಯ ಸಮೀಪದಲ್ಲಿ ಒಂದು ವಾರದಿಂದ ಓಡಾಡುತ್ತಿದ್ದ ಬೃಹದಾಕಾರದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸ್ನೇಕ್ ಹರೀಂದ್ರ ಹಿಡಿದಿದ್ದಾರೆ. ಸೆರೆ ಸಿಕ್ಕ ಕಾಳಿಂಗ ಸರ್ಪವು 12 ಅಡಿ ಉದ್ದವಿದ್ದು ಹಾವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸ್ನೇಕ್ ಹರೀಂದ್ರ ಅರಣ್ಯಕ್ಕೆ ಬಿಟ್ಟಿದ್ದಾರೆ.
ಹೊರನಾಡು ಶೃಂಗೇರಿ ಕಲ್ಪಿಸುವ ಮಾರ್ಗ ಮಧ್ಯೆ ಭೂಕುಸಿತ
ಚಿಕ್ಕಮಗಳೂರು : ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ ಮಾರ್ಗಮಧ್ಯೆ ಭೂಕುಸಿತ ಸಂಭವಿಸಿದೆ. ರಸ್ಥೆಯ ಪಕ್ಕದಲ್ಲಿನ ಮಣ್ಣು ಕುಸಿದಿದ್ದು, ಬೃಹದಾಕಾರದ ಮರಗಳು ಉರುಳಿದ್ದು ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಹ ಸ್ಥಿತಿ ಎದುರಾಗಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಅತ್ತಿಗುಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಿಕಲ್ಲು ಬಳಿಯಲ್ಲಿ ಅಂದಾಜು ,120 ರಿಂದ 150 ಅಡಿಗಳಷ್ಟು ಆಳಕ್ಕೆ ಭೂಕುಸಿತ ಉಂಟಾಗಿದೆ. ಶೃಂಗೇರಿ, ಹೊರನಾಡು ಹಾಗೂ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ. ಮುಖ್ಯ ಸಂಪರ್ಕ ಮಾರ್ಗವಾದ ಅಬ್ಬಿಕಲ್ಲು ಬಳಿಯಲ್ಲಿ ಭೂಕುಸಿತ ಸಂಭವಿಸಿರುವ ಪರಿಣಾಮ ಆತಂಕದಲ್ಲಿ ವಾಹನ ಸವಾರರು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ಥೆಯ ಸಮೀಪದಲ್ಲೇ ಹಳ್ಳವೊಂದು ಹರಿದಿದ್ದು ಮಳೆಯ ತೀವ್ರತೆಗೆ ಹಳ್ಳದ ನೀರು ಗದ್ದೆಗಳಿಗೆ ಹರಿದು ರೈತರಿಗೂ ಮಳೆಯಿಂದಾಗಿ ಸಮಸ್ಯೆಗಳಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಕೊಂಚ ಮಟ್ಟಿಗೆ ಅಸ್ತವ್ಯಸ್ತವಾಗಿದ್ದು, ಎದುರಾಗಬಹುದಾದ ಅಪಾಯದ ಕುರಿತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಗಮನವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಕೋರಿದ್ದಾರೆ.
ಶಿವಮೊಗ್ಗ :
ಬಿಜೆಪಿ ಹಿರಿಯ ಮುಖಂಡ ರಘುವೀರ್ ಭಟ್ ನಿಧನ
ತೀರ್ಥಹಳ್ಳಿ : ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ರಘುವೀರ್ ಭಟ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರಥಬೀದಿಯ ನಿವಾಸದಲ್ಲಿ ಇಂದು ರಘುವೀರ್ ಭಟ್ (90) ಅವರು ನಿಧನರಾಗಿದ್ದು ಮೃತರ ಅಗಲುವಿಕೆಯ ಕುರಿತು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ರಘುವೀರ್ ಭಟ್ ಅವರು 1947 ರಲ್ಲಿ ನಡೆದ ಭಾರತದ ಮೊಟ್ಟ ಮೊದಲ ಸ್ವಾತಂತ್ರೋತ್ಸವದಲ್ಲಿ ಭಾಗಿಯಾಗಿದ್ದರು, ಸಮಾಜಕ್ಕಾಗಿ ಅನೇಕ ಕಾರ್ಯಗಳಲ್ಲಿ ಭಾಗಿಯಾಗಿದ್ದ ಅವರು ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತೀರ್ಥಹಳ್ಳಿ ಭಾಗದ ಹಿರಿಯ ಬಿಜೆಪಿ ಮುಖಂಡರಾಗಿದ್ದರು.ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಸೇರಿದಂತೆ ಅನೇಕ ಗಣ್ಯರು ಮೃತರ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ.
ಭಾರೀ ಮಳೆಗೆ ಮನೆ ಗೋಡೆ ಕುಸಿತ :
ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ದೇವಂಗಿ ಗ್ರಾಮಪಂಚಾಯಿತಿಯ ಇಂಗ್ಲಾದಿ ಗ್ರಾಮದ ನಳಿನಿ ರಮೇಶ್ ಎಂಬುವವರ ಮನೆಯ ಗೋಡೆಯು ಕುಸಿದಿದೆ. ಅದೃಷ್ಟವಶಾತ್ ಎಂಬಂತೆ ಯಾರಿಗೂ ಯಾವುದೇ ರೀತಿಯ ಪ್ರಾಣಾಪಾಯಗಳು ಸಂಭವಿಸಿಲ್ಲ.
ಮೃತ ವ್ಯಕ್ತಿಯ ಅಂತ್ಯಕ್ರಿಯೆಯ ವೇಳೆಯಲ್ಲಿ ಕುಟುಂಬಸ್ಥರಿಗೆ ಸಾವಿನ ಕುರಿತು ಅನುಮಾನ
ಶಿವಮೊಗ್ಗ : ಮೃತ ವ್ಯಕ್ತಿಯೋರ್ವರ ದೇಹವನ್ನು ಅಂತ್ಯಕ್ರಿಯೆಯ ಬಳಿಕದಲ್ಲಿ ಸ್ಮಶಾನದಿಂದ ಮರಣೋತ್ತರ ಪರೀಕ್ಷೆಗಾಗಿ ಅನುಮಾನದ ಮೇರೆಗೆ ತೆಗೆದುಕೊಂಡು ಹೋಗಿರುವ ವಿಚಿತ್ರ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಕಾಡಿನಲ್ಲಿ ಕುಳಿತು ಮದ್ಯಪಾನ ಮಾಡಿರುವ ಶಿವಮೊಗ್ಗದ ಉರುಳಿಹಳ್ಳಿ ಮಾರುತಿ ಕ್ಯಾಂಪ್ ನಿವಾಸಿ ವಿಠಲ ಮತ್ತು ಆತನ ಸ್ನೇಹಿತ ಮದ್ಯ ಕುಡಿದು ಮಲಗಿದ್ದಾರೆ. ಕೆಲ ಸಮಯದ ನಂತರ ಸ್ನೇಹಿತ ಎದ್ದು ಗ್ರಾಮಕ್ಕೆ ಹೋಗಿದ್ದಾನೆ, ಆದರೆ ವಿಠಲ ಎಂಬ ವ್ಯಕ್ತಿ ಗ್ರಾಮಕ್ಕೆ ಹಿಂದಿರುಗಲಿಲ್ಲ ಎನ್ನಲಾಗಿದೆ. ಈ ನಂತರದಲ್ಲಿ ಕಾಡಿಗೆ ತೆರಳಿದ ಗ್ರಾಮಸ್ಥರೊಬ್ಬರು ವಿಠಲ ಮೃತಪಟ್ಟಿರುವುದನ್ನು ಕಂಡು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚು ಮದ್ಯ ಸೇವಿಸಿದ್ದರಿಂದ ಮೃತಪಟ್ಟಿರಬಹುದು ಎಂದು ಭಾವಿಸಿದ ಕುಟುಂಬಸ್ಥರು, ದುಃಖ ವ್ಯಕ್ತಪಡಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯದಲ್ಲಿ ಆತನ ಸಾವಿನ ಕುರಿತು ಮನೆಯವರು ಹಾಗೂ ಸ್ಥಳೀಯರು ಅನುಮಾನಗೊಂಡು ತುಂಗಾನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಮಶಾನಕ್ಕೆ ಧಾವಿಸಿದ ಪೊಲೀಸರು ಅಂತ್ಯಸಂಸ್ಕಾರಕ್ಕೆ ತಡೆಯೊಡ್ಡಿ ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವಿಠಲ ಅವರ ಮೃತದೇಹವನ್ನು ರವಾನಿಸಿದ್ದಾರೆ.
ಕೊಡಗು
ಭಾರೀ ಮಳೆ ಗುಡ್ಡ ಕುಸಿತದ ನಡುವೆ ಆನೆ ದಾಳಿ ರೈತರಲ್ಲಿ ಮೂಡಿದ ಆತಂಕ :
ಕೊಡಗು ಮಡಿಕೇರಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮಳೆಯ ಆರ್ಭಟಕ್ಕೆ ಅನೇಕ ಭಾಗಗಳಲ್ಲಿ ಮರಗಳು ಧರೆ ಗುರುಳುತ್ತಿದೆ, ಕೊಡಗಿನ ಸಿದ್ದಾಪುರ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಒಂದೆಡೆ ಭೀಕರ ಮಳೆ, ಗುಡ್ಡ ಕುಸಿತ, ರಸ್ತೆಗೆ ಅಡ್ಡಲಾಗಿ ಮರ ಬೀಳುವುದು ಮುಖ್ಯ ಸಮಸ್ಯೆಯಾಗಿ ಕೊಡಗಿನ ಜನರಿಗೆ ಕಾಡುತ್ತಿದ್ದರೆ ಇನ್ನೊಂದೆಡೆ ಕೊಡಗಿನ ಸಿದ್ಧಾಪುರ ಬಳಿಯ ಅಮ್ಮತ್ತಿ, ಇಂಜಿಲಗೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ ಮಿತಿ ಮೀರಿದೆ. ಈ ಭಾಗದ ರೈತರ ಕಾಫಿ, ಬಾಳೆಗಿಡ, ಭತ್ತದ ಪೈರನ್ನು ಆನೆಗಳು ನಾಶ ಪಡಿಸುತ್ತಿದೆ. ಮಳೆಗಾಲದ ಆರಂಭದ ಸಮಯವಾದ ಈ ಸಂದರ್ಭದಲ್ಲಿ ಜನರು ಕೃಷಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಾರೆ. ಆದರೆ ಎಗ್ಗಿಲ್ಲದೆ ನಡೆಯುತ್ತಿರುವ ಆನೆ ದಾಳಿಯಿಂದಾಗಿ ಜನರು ತಮ್ಮ ಜೀವನಾಧಾರವಾದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಆನೆ ದಾಳಿ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಕೆ ನಡೆಸುತ್ತಿದ್ದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳು ನಿಗಾವಹಿಸಿ ಆನೆ ದಾಳಿಗೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.
ಗುಡ್ಡ ಕುಸಿತ ಉಂಟಾದ ಪ್ರದೇಶಗಳಿಗೆ ಕಂದಾಯ ಸಚಿವರ ಭೇಟಿ, ಪರಿಶೀಲನೆ :
ಆರಂಭವಾಗಿರುವ ಮುಂಗಾರು ಮಳೆಗೆ ಕತ್ತರಿಸಿರುವ ಕೊಡಗು ಜಿಲ್ಲೆಗೆ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂಪೂರ್ಣ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸ್ಪಂದಿಸುವಂತೆ ಸೂಚಿಸಿದ್ದಾರೆ.


0 Comments