ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸಮರ್ಪಕವಾದ ರಸ್ತೆ ಸಂಪರ್ಕವಿಲ್ಲದೆ ಅನಾರೋಗ್ಯ ಪೀಡಿತರನ್ನು ನಾಲ್ವರು ಒಂದು ಮರಕ್ಕೆ ಕಟ್ಟಿಕೊಂಡು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಹೊತ್ತುಕೊಂಡು ಸಾಗುವ ಮನಕಲುಕುವ ರೀತಿಯ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಮೂಲಭೂತವಾದ ಶಿಕ್ಷಣ, ಆರೋಗ್ಯ, ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ಕೂಡ ಕಿಲೋಮೀಟರ್ ಗಟ್ಟಲೆ ದೂರ ಸಾಗಬೇಕಿರುವ ದುಸ್ಥಿತಿ ಎದುರಾಗಿದೆ. 

ಕಳಸದ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಗಲ್ ಗ್ರಾಮದ 35 ಕ್ಕೂ ಅಧಿಕ ಗಿರಿಜನ ಕುಟುಂಬಗಳನ್ನು ಸಂಪರ್ಕಿಸುವ ಸಲುವಾಗಿ ಹೆಸರಿಗೆ ತೂಗು ಸೇತುವೆಯಿದೆಯಾದರೂ ಮಳೆಗಾಲದಲ್ಲಿ ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಿರುವ ಪರಿಣಾಮ ಜನರಿಗೆ ಓಡಾಡಲು ತೀವ್ರ ಸಂಕಷ್ಟ ಎದುರಾಗಿದೆ ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳ ವರ್ತನೆಯಿಂದ ಬೇಸತ್ತ ಜನರು ತಮಗಾಗುತ್ತಿರುವ ಗೋಳನ್ನು ವ್ಯಕ್ತಪಡಿಸಿದರು. 

ವೀಡಿಯೋ ನೋಡಿ : ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ನಡುವೆಯೇ ಹೊಡೆದಾಟ

ವಯಸ್ಸಾದವರು, ಶಾಲಾ ಮಕ್ಕಳು, ಸೇರಿದಂತೆ ಮಧ್ಯಮ ವಯಸ್ಸಿನವರು ಇಲ್ಲಿ ವಾಸ ಮಾಡುತ್ತಿದ್ದು ಸಮರ್ಪಕ ರಸ್ತೆ ವ್ಯವಸ್ಥೆ, ನೆಟ್ವರ್ಕ್, ಶಾಲೆ, ಸೇರಿದಂತೆ  ಮೂಲ ಸೌಲಭ್ಯಕ್ಕೆ ಕೊರತೆಯುಂಟಾಗಿದೆ. ಈ ಕುರಿತಾಗಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು - ಸ್ಥಳೀಯರು

ಕಳೆದ ಕೆಲ ಸಮಯಗಳ ಹಿಂದಷ್ಟೇ ಬಾಣಂತಿಯೋರ್ವರನ್ನು ಆಸ್ಪತ್ರೆಗೆ ಹೊತ್ತೊಯ್ಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತಾಗಿ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿತ್ತು. ಈಗಿರುವ ನಿವಾಸಿಗಳು ಮೂಲತಃ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಿವಾಸಿಗಳಾಗಿದ್ದು ಲಕ್ಯಾ ಡ್ಯಾಂ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಲ್ಲಿಂದ ಈ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗಿತ್ತು  ಆದರೆ ಅಗತ್ಯವಾಗಿ ದೊರೆಯಬೇಕಿದ್ದ ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಈ ಕುಟುಂಬಸ್ಥರು ಅತೀ ಶೀಘ್ರವಾಗಿ  ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. 


ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸ್ಥಳೀಯರು ಗ್ರಾಮದ ಸಂಪರ್ಕಕ್ಕೆ ಸೂಕ್ತವಾದ ರಸ್ತೆಯಿಲ್ಲ. ತುರ್ತು ಸಂದರ್ಭಗಳಲ್ಲಿ ಸಂಚಾರಕ್ಕೆ ತಡೆಉಂಟಾಗುತ್ತದೆ. ಈ ಕುರಿತಾಗಿ ಇಲ್ಲಿನ  ಶಾಸಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಕ್ರಮವಹಿಸಿ ಜನರ ಬದುಕಿಗೆ ಆಸರೆಯಾಗಬೇಕೆಂದು ಕೋರಿದ್ದಾರೆ.