ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಸರಕು ಸಾಗಣೆ ನಡೆಸುತ್ತಿದ್ದ ಲೇಲೆಂಡ್ ವಾಹನ ಉರುಳಿ ಜಖಂಗೊಂಡಿರುವ ಘಟನೆ ನಡೆದಿದೆ.

ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

ಗ್ರೌಂಡ್ ರಿಪೋರ್ಟ್ ವೀಕ್ಷಿಸಿ : ಭೀಕರ ಮಳೆಯಿಂದ ನೆಲಕಚ್ಚಿದ ಮಲೆನಾಡಿಗರ ಬದುಕು ಇದ್ದ ಮನೆಯೂ ಧರೆಗುರುಳಿತು; ಕಣ್ಣೀರಿಟ್ಟ ಜನ


ಪಲ್ಟಿಯಾದ ತೀವ್ರತೆಗೆ ಲಾರಿ ಜಖಂಗೊಂಡಿದ್ದು ಚಾಲಕ ಸುರಕ್ಷಿತವಾಗಿದ್ದಾರೆ. ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಈಗಾಗಲೇ ಅನೇಕ ಕಡೆಗಳ ರಸ್ತೆ ಕುಸಿದು ಭಾರೀ ಹಾನಿಯುಂಟಾಗಿದೆ. ಹೆಚ್ಚಿನ ತಿರುವು ಮುರುವುಗಳನ್ನು ಮಲೆನಾಡು ಭಾಗದ ರಸ್ತೆಗಳು ಹೊಂದಿರುವುದರಿಂದ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷಿತವಾಗಿ ಈ ಮಾರ್ಗದಲ್ಲಿ ಸಂಚಾರ ಮಾಡಬೇಕಿದೆ. 

ಅಂತೆಯೇ ಶೃಂಗೇರಿ ಮೂಲಕ ಕುದುರೆಮುಖ ಹಾಗೂ ಕಾರ್ಕಳವನ್ನು ಸಂಪರ್ಕಿಸುವ ಮಾರ್ಗವಾದ ಎಸ್.ಕೆ ಬಾರ್ಡರ್ ಬಳಿಯೂ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ನಿನ್ನೆ ರಸ್ತೆಯ ಬದಿಗೆ ಉರುಳಿತ್ತು. ಇದರಿಂದಾಗಿ ಕೆಲ ಸಮಯ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅತೀ ಕಡಿದಾದ ರಸ್ತೆಗಳನ್ನು ಹಾಗೂ ತಿರುವುಗಳನ್ನು ಹೊಂದಿರುವ ಈ ಮಾರ್ಗವು ದಟ್ಟ ಅರಣ್ಯ ಪ್ರದೇಶವಾಗಿದ್ದು ಅನೇಕ ಅವಘಡಗಳು ಈ ಮಾರ್ಗದಲ್ಲಿ ಸಂಭವಿಸಿರುವ ನಿದರ್ಶನಗಳಿವೆ.


ಈ ಭಾಗದಲ್ಲಿನ ಸೇತುವೆಗಳು ಕೂಡ ಶಿಥಿಲಾವಸ್ಥೆಯನ್ನು ತಲುಪಿದ್ದು ಭಾರೀ ಪ್ರಮಾಣದ ವಾಹನಗಳು ಈ ರಸ್ತೆಯಲ್ಲಿ ತಿರುಗುವುದರಿಂದ ಹಾಗೂ ಹೆಚ್ಚಿನ ಮಳೆಯಾಗುತ್ತಿರುವ ಪರಿಣಾಮ ವಾಹನ ಸವಾರರು ಜಾಗರೂಕತೆಯಿಂದ ಈ ಮಾರ್ಗದಲ್ಲಿ ಸಂಚರಿಸಬೇಕಿದೆ.

ತನು ಕೊಟ್ಟಿಗೆಹಾರ, ವರದಿಗಾರರು