ಮೂಡಿಗೆರೆ : ಹುಲಿ ದಾಳಿಗೆ ಹಸು ಬಲಿ
ಬಣಕಲ್ ಹೋಬಳಿಯ ಬಿ. ಹೊಸಳ್ಳಿ ವ್ಯಾಪ್ತಿಯಲ್ಲಿ ಹುಲಿ ದಾಳಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಬಿ. ಹೊಸಳ್ಳಿಯ ಕನ್ ಗೆರೆ ಬಳಿಯಲ್ಲಿ ಹಸುವಿನ ಮೇಲೆ ಹುಲಿಯು ದಾಳಿ ನಡೆಸಿದ್ದು ಹಸುವನ್ನು ಕೊಂದು ಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಆತಂಕಗೊಂಡಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಇಲಾಖೆಯನ್ನು ಕೋರಿದ್ದಾರೆ. ಚಿದಾನಂದ ಎಂಬುವವರಿಗೆ ಸೇರಿದ ಹಸು ಹುಲಿ ದಾಳಿಯಿಂದ ಮೃತ ಪಟ್ಟಿದ್ದು ಘಟನಾ ಸ್ಥಳಕ್ಕೆ ಅರಣ್ಯ ರಕ್ಷಕ ಮೋಹಸೀನ್ ಹಾಗೂ ಜಾನುವಾರು ಅಧಿಕಾರಿ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜನತಾ ಪಾರ್ಟಿ ಅಧಿಕಾರ ಸ್ವೀಕಾರ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ
ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿರುವ ಜನತಾ ಪಾರ್ಟಿಯ ಜಿಲ್ಲಾ ಕಛೇರಿಯಲ್ಲಿ ಇಂದು ಜನತಾ ಪಾರ್ಟಿಯ ಅಧಿಕಾರ ಸ್ವೀಕಾರ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಟಿ.ಸಿ ರಾಜೇಂದ್ರ, ಜಿಲ್ಲಾಧ್ಯಕ್ಷರಾದ ರಜಿತ್ ಗೌಡ ಬೇಸೂರು ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ಹರಿಶ್ಚಂದ್ರ ಆಚಾರ್ಯ, ಗೋಚವಳ್ಳಿ ಶ್ರೀ ಎಂ.ಎಸ್ ನಯನ್,ಚಿಂತನ್ ಮೇಲ್ಪಾಲ್ ಹಾಗೂ ಗಿಣಿಕಲ್ ಶ್ರೀ ಸಾಗರ್ ರವರು ಇಂದು ಪದಾಧಿಕಾರಿಗಳ ಸಮ್ಮುಖದಲ್ಲಿ ಜನತಾಪಾರ್ಟಿ ಸೇರ್ಪಡೆಗೊಂಡರು. ನೇಗಿಲು ಹೊತ್ತ ರೈತ ಚಿನ್ಹೆಯನ್ನು ಹೊಂದಿರುವ ರಾಷ್ಟ್ರೀಯ ಜನತಾಪಾರ್ಟಿಯ ಶೃಂಗೇರಿ ಕ್ಷೇತ್ರದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಹ ಈ ಸಂದರ್ಭದಲ್ಲಿ ನಡೆಯಿತು.
ಜಮೀರ್ ಮನೆ ಮೇಲೆ ಎಸಿಬಿ ದಾಳಿ: ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ
ಚಿಕ್ಕಮಗಳೂರು ಮುಸ್ಲಿಂ ಅಸೋಸಿಯೇಷನ್ ವತಿಯಿಂದ ನಗರದ ಅಜಾದ್ ಪಾರ್ಕ್ ವೃತದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರು ಹಾಗೂ ಅಲ್ಪಸಂಖ್ಯಾತ ನಾಯಕ ಜನಪ್ರತಿನಿಧಿಗಳ ಮೇಲೆ ಅತಿಯಾದ ದೌರ್ಜನ್ಯ ಎಸಗುತ್ತಿರುವುದನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಹೋ ರಂಜನ್ಅಲ್ಪಸಂಖ್ಯಾತ ನಾಯಕರು ಹಾಗೂ ಚಾಮರಾಜಪೇಟೆ ಶಾಸಕರಾದ ಜಮೀರ್ ಅಹಮದ್ ಖಾನ್ ಅವರನ್ನು ಇಡಿ ಹಾಗೂ ಎಸಿಬಿ ಮುಖಾಂತರ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಹತ್ತಿಕ್ಕುತ್ತಿರುವುದು ನೋಡಿದರೆ ಇದರ ಹಿಂದೆ ಸರ್ಕಾರಗಳು ಮುಂದೆ ಅಲ್ಪಸಂಖ್ಯಾತರ ಮತ್ತು ಜನಪ್ರತಿನಿಧಿಗಳಿಗೆ ರಾಜಕೀಯ ಹಾಗೂ ಆರ್ಥಿಕವಾಗಿ ದಮನಿಸುವ ಸಂಚು ರೂಪಿಸುತ್ತಿರುವುದು ಎದ್ದು ಕಾಣುತ್ತಿದೆ.ಇಡಿ ಹಾಗೂ ಎಸಿಬಿ ಅವರು ಜನಸಾಮಾನ್ಯರಿಗೆ ಸಂವಿಧಾನಾತ್ಮಕವಾದ ನ್ಯಾಯ ನೀಡದೆ ಸಂವಿಧಾನದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸಕ್ಕೆ ಅವರು ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿರುವುದು ಕಾಣುತ್ತಿದೆ ಎಂದು ಆರೋಪ ಮಾಡಿದರು.ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣ, ಪಿಎಸ್ಐ ಹಗರಣ, ಪಠ್ಯಪುಸ್ತಕದಲ್ಲಿ ಗೊಂದಲ ಹೀಗೆ ಹಲವಾರು ಹಗರಣಗಳನ್ನು ಮರೆಮಾಚಲು ಇಂತಹ ದಾಳಿ ಮಾಡುತ್ತಿದ್ದಾರೆ. ಎಸಿಬಿಗೆ ಸಹ ಈ ಹಿಂದೆ ನ್ಯಾಯಾಲಯವು ಚೀಮಾರಿ ಹಾಕಿದ್ದರು ಸಹ ಬುದ್ದಿ ಕಲಿಯದೆ ಸಂವಿಧಾನ ಹಾಗೂ ಕಾನೂನು ಪಾಲಿಸಿದೆ ಅಲ್ಪಸಂಖ್ಯಾತ ನಾಯಕರು ಹಾಗೂ ಜನಪ್ರತಿನಿಧಿಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ.ಇದನ್ನು ತಮ್ಮ ಗಮನಕ್ಕೆ ತಂದಿದ್ದು ದಯವಿಟ್ಟು ತಾವು ಈ ಕೂಡಲೇ ಮಧ್ಯಪ್ರವೇಶಿಸಿ ಸಾಮಾಜಿಕ ನ್ಯಾಯವನ್ನು ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವಂತೆ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅಲ್ಪಸಂಖ್ಯಾತರ ನಾಯಕರು ಹಾಗೂ ಜನಪ್ರತಿನಿಧಿಗಳಿಗೆ ಕಾನೂನು ರಕ್ಷಣೆ ನೀಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಿಜ್ವಾನ್ ಖಾನ್ ಬಾಬರ್, ನಸಿರುಲ್ಲಾ ಜಮೀರ್ ನೈ ಮನ್ ಹಾಜರಿದ್ದರು.
ಆಲ್ದೂರು ಬಂದ್ :
ನಟಿ, ನಿರ್ಮಾಪಕಿ ಲೀನಾ ಮಣಿಮೆಕಲೈ ಕಾಳಿ ಎಂಬ ವಿವಾದಾತ್ಮಕ ಪೋಸ್ಟರ್ ಬಿಡುಗಡೆ ಮಾಡಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿ ಆಕೆಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಇಂದು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಬಂದ್ ನಡೆಯಿತು. ಹಿಂದೂಗಳು ಪೂಜಿಸುವ ಕಾಳಿ ದೇವಿಯ ರೂಪದಲ್ಲಿರುವ ಪೋಸ್ಟರ್ ಬಿಡುಗಡೆಯಾಗಿದ್ದು ದೇವರ ಕೈಯಲ್ಲಿ ಸಿಗರೇಟಿರುವುದು ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಂದ್ ನಡೆಸಿದ್ದು ಲೀನಾ ಮಣಿಮೆಕಲೈ ಬಂಧನಕ್ಕಾಗಿ ಆಗ್ರಹಿಸಿದ್ದಾರೆ. ಬಂದ್ ಗೆ ಆಲ್ದೂರಿನ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿ ವರ್ತಕರು ಬಂದ್ ಗೆ ಬೆಂಬಲ ಸೂಚಿಸಿದರು.
ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಕಾರು :
ಶೃಂಗೇರಿ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿ ಬಹುತೇಕ ಜಖಂಗೊಂಡಿರುವ ದುರ್ಘಟನೆ ಶೃಂಗೇರಿ ಹೊರವಲಯದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಡಿಯಲ್ಲಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ವಾಹನವು ಅಡ್ಡಗದ್ದೆ ಸಮೀಪದವರದ್ದು ಎನ್ನಲಾಗಿದೆ. ಬಳಿಕದಲ್ಲಿ ವಾಹನವು ರಸ್ತೆಯ ಮಧ್ಯದಲ್ಲಿ ಮಗುಚಿ ಬಿದ್ದಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಅದೃಷ್ಟವಶಾತ್ ಎಂಬಂತೆ ಮೂವರೂ ಕೂಡ ಪ್ರಣಾಪಾಯಗಳಿಂದ ಪಾರಾಗಿದ್ದು ಓರ್ವರಿಗೆ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಭವಿಸುತ್ತಿದ್ದಂತೆಯೇ ಬೇರೆ ವಾಹನಗಳ ಸವಾರರು ಹಾಗೂ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಬಹುತೇಕ ಜಖಂಗೊಂಡಿದೆ. ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.
ಶಿವಮೊಗ್ಗ :
ನಾಪತ್ತೆಯಾಗಿದ್ದ ಯುವಕನ ಶವ ಕವಲೇದುರ್ಗ ಕೆರೆಯಲ್ಲಿ ಪತ್ತೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಹಿರಿಯ ಬಿಜೆಪಿ ನಾಯಕರಾದ ಕಟ್ಟೇಗದ್ದೆ ಹಾಲಪ್ಪ ಅವರ ಪುತ್ರ ಆಕರ್ಷ್ ರಾಜ್ ಶವ ಕವಲೇದುರ್ಗದ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಆಕರ್ಷ್ ರಾಜ್ ಕಾರ್ ಅಪಘಾತವಾಗಿತ್ತು. ಮನೆಯಿಂದ ತೆಗೆದುಕೊಂಡು ಹೋಗಿದ್ದ ಬ್ರೀಜಾ ಕಾರು ಸಾಲೂರು ಕೊಂಡ್ಲೂರು ಸಮೀಪದ ಕವಲೇ ದುರ್ಗ ರಸ್ತೆಯಲ್ಲಿ ಅಪಘಾತಕ್ಕೀಡಾಗಿತ್ತು. ಕಾರು ಓಡಿಸುವ ಸ್ಥಿತಿಯಲ್ಲಿರಲಿಲ್ಲ ಹಾಗೂ ಅಂದಿನಿಂದಲೇ ಆಕರ್ಷ್ ರಾಜ್ ಕಣ್ಮರೆಯಾಗಿದ್ದರು. ಮೃತ ಆಕರ್ಷ್ ರಾಜ್ ಶವವು ಕವಲೇದುರ್ಗ ಕೆರೆಯಲ್ಲಿ ಪತ್ತೆಯಾಗಿದ್ದು ಈ ಸಾವು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮೃತನ ಸಾವಿನ ಕುರಿತಾಗಿ ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಘಟನಾ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ ಹಾಗೂ ಮಾಹಿತಿ ಕಲೆ ಹಾಕುತ್ತಿದ್ದಾರೆ.



0 Comments