ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣದಲ್ಲಿರುವ ಶೃಂಗೇರಿ ತಾಲೂಕು ಆಸ್ಪತ್ರೆಗೆ ಸೇರಿದ ಜಾಗವನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು, ಆ ಜಾಗವನ್ನು ಯಾರಿಗೂ ಹಸ್ತಾಂತರ ಮಾಡಬಾರದೆಂದು ತಾಲೂಕು ಆಡಳಿತ ವೈದ್ಯಾಧಿಕಾರಿಗಳನ್ನು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಕೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದ ಜಾಗವು ಶೃಂಗೇರಿ ಪಟ್ಟಣದ ಭಾರತೀ ಬೀದಿಯಲ್ಲಿದ್ದು ಅದು ಯಾವುದೇ ರೀತಿಯ ಬಳಕೆಗೆ ಒಳಪಟ್ಟಿರುವುದಿಲ್ಲ, ಪ್ರಸ್ತುತ ತಾಲೂಕು ಆಸ್ಪತ್ರೆ ಇರುವ ಕಟ್ಟಡದಲ್ಲಿಯೂ ಜಾಗದ ಕೊರತೆಯಿರುವ ಕಾರಣ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಾರ್ವಜನಿಕರಿಗೆ ಅನಾನುಕೂಲಗಳು ಉಂಟಾಗಿರುತ್ತದೆ ಈ ನಿಟ್ಟಿನಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಹಾಯವಾಗುವಂತೆ ಆ ಜಾಗದಲ್ಲಿ ಆಯುಷ್ ಚಿಕಿತ್ಸಾಲಯ, ಪ್ರಕೃತಿ ಚಿಕಿತ್ಸಾ ಕೇಂದ್ರ ಅಥವಾ ಹೆರಿಗೆ ಆಸ್ಪತ್ರೆ ಇವುಗಳಲ್ಲಿ ಯಾವುದಾದರೊಂದನ್ನು ಮಾಡಲು ಸೂಕ್ತವಾಗಿರುವ ಜಾಗವಾದ ಕಾರಣ ಸಾರ್ವಜನಿಕರಿಗೆ ಅನುಕೂಲಕರವಾಗುತ್ತದೆ ಹಾಗೂ ಈಗಿರುವ ಸ್ಥಳಾವಕಾಶದ ಕೊರತೆ ಸರಿದೂಗಲಿದೆ ಎಂದು ಸಾರ್ವಜನಿಕರು ತಾಲೂಕು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆಸ್ಪತ್ರೆ ಜಾಗದ ಹಸ್ತಾಂತರಕ್ಕೆ ಸಾರ್ವಜನಿಕರ ವಿರೋಧವಿದೆ :
ಅಂತೆಯೇ ಶೃಂಗೇರಿ ಪಟ್ಟಣದಲ್ಲಿರುವ ಹಳೆಯ ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಗಳು ಆಸ್ಪತ್ರೆ ಹೋರಾಟ ಸಮಿತಿಯ ಬಳಿಯಿದ್ದು, ಆ ಜಾಗವು ಆಸ್ಪತ್ರೆಯ ಹೆಸರಿನಲ್ಲೇ ಇದ್ದು ಪೂರಕವಾದ ದಾಖಲೆಗಳನ್ನು ಸಹ ಹೊಂದಿರುವ ಕಾರಣ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೊರತು ಪಡಿಸಿ ಬೇರಾವುದೇ ವ್ಯಕ್ತಿ, ಸಂಸ್ಥೆ, ಅಥವಾ ಬೇರಾವುದೇ ಇಲಾಖೆಗೆ ಆಸ್ಪತ್ರೆ ಸುಪರ್ದಿಯಿಂದ ಹಸ್ತಾಂತರ ಮಾಡುವುದಕ್ಕೆ ಸಾರ್ವಜನಿಕರ ಹಾಗೂ ಆಸ್ಪತ್ರೆ ಹೋರಾಟ ಸಮಿತಿಯ ತಕರಾರಿದೆ ಎಂದು ತಿಳಿಸಿದೆ.
ಅಲ್ಲದೇ ಸಾರ್ವಜನಿಕರ ಆಸ್ತಿ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದ್ದು ಜಾಗದ ಹಸ್ತಾಂತರದ ಕುರಿತು ಯಾವುದೇ ಪ್ರಸ್ತಾವನೆ, ಅಥವಾ ಒತ್ತಡಗಳು ಬಂದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಹೋರಾಟ ಸಮಿತಿಗೆ ತಿಳಿಸುವಂತೆ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತಾಲೂಕು ಆಡಳಿತ ವೈದ್ಯಾಧಿಕಾರಿಗಳಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





.jpeg)

0 Comments