ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ ಮಾರ್ಗಮಧ್ಯೆ ಭೂಕುಸಿತ ಸಂಭವಿಸಿದೆ. ರಸ್ಥೆಯ ಪಕ್ಕದಲ್ಲಿನ ಮಣ್ಣು ಕುಸಿದಿದ್ದು, ಬೃಹದಾಕಾರದ ಮರಗಳು ಉರುಳಿದ್ದು ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಹ ಸ್ಥಿತಿ ಎದುರಾಗಿದೆ. 

ಇದನ್ನೂ ಓದಿ : ಕೊಚ್ಚಿ ಹೋಗಿ ನಾಲ್ಕು ದಿನ ಕಳೆದರೂ ಪತ್ತೆಯಾಗದ ಬಾಲಕಿ ಗುರುತು

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಅತ್ತಿಗುಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಿಕಲ್ಲು ಬಳಿಯಲ್ಲಿ ಅಂದಾಜು 120 ರಿಂದ 150 ಅಡಿಗಳಷ್ಟು ಆಳಕ್ಕೆ ಭೂಕುಸಿತ ಉಂಟಾಗಿದೆ. ಶೃಂಗೇರಿ, ಹೊರನಾಡು ಹಾಗೂ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ. ಮುಖ್ಯ ಸಂಪರ್ಕ ಮಾರ್ಗವಾದ ಅಬ್ಬಿಕಲ್ಲು ಬಳಿಯಲ್ಲಿ ಭೂಕುಸಿತ ಸಂಭವಿಸಿರುವ ಪರಿಣಾಮ ಆತಂಕದಲ್ಲಿ ವಾಹನ ಸವಾರರು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6


ಈ ರಸ್ತೆಯ ಸಮೀಪದಲ್ಲೇ ಹಳ್ಳವೊಂದು ಹರಿದಿದ್ದು ಮಳೆಯ ತೀವ್ರತೆಗೆ ಹಳ್ಳದ ನೀರು ಗದ್ದೆಗಳಿಗೆ ಹರಿದು ರೈತರಿಗೂ ಮಳೆಯಿಂದಾಗಿ ಸಮಸ್ಯೆಗಳಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಕೊಂಚ ಮಟ್ಟಿಗೆ ಅಸ್ತವ್ಯಸ್ತವಾಗಿದ್ದು, ಎದುರಾಗಬಹುದಾದ ಅಪಾಯದ ಕುರಿತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಗಮನವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಕೋರಿದ್ದಾರೆ. 

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಸಂಚಾರ ಮಾಡುವುದರಿಂದ ಅತೀ ಶೀಘ್ರವಾಗಿ ಅಧಿಕಾರಿಗಳು ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಭಾರೀ ಮಳೆ ಗುಡ್ಡ ಕುಸಿತದ ನಡುವೆ ಆನೆ ದಾಳಿ ; ಕೃಷಿಕರು ತತ್ತರ 

ಕೊಡಗು ಮಡಿಕೇರಿ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮಳೆಯ ಆರ್ಭಟಕ್ಕೆ ಅನೇಕ ಭಾಗಗಳಲ್ಲಿ ಮರಗಳು ಧರೆ ಗುರುಳುತ್ತಿದೆ, ಕೊಡಗಿನ ಸಿದ್ದಾಪುರ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚುತ್ತಲೇ ಇದೆ. 

ಒಂದೆಡೆ ಭೀಕರ ಮಳೆ, ಗುಡ್ಡ ಕುಸಿತ, ರಸ್ತೆಗೆ ಅಡ್ಡಲಾಗಿ ಮರ ಬೀಳುವುದು ಮುಖ್ಯ ಸಮಸ್ಯೆಯಾಗಿ ಕೊಡಗಿನ ಜನರಿಗೆ ಕಾಡುತ್ತಿದ್ದರೆ ಇನ್ನೊಂದೆಡೆ ಕೊಡಗಿನ ಸಿದ್ಧಾಪುರ ಬಳಿಯ ಅಮ್ಮತ್ತಿ, ಇಂಜಿಲಗೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ ಮಿತಿ ಮೀರಿದೆ. 


ಈ ಭಾಗದ ರೈತರ ಕಾಫಿ, ಬಾಳೆಗಿಡ, ಭತ್ತದ ಪೈರನ್ನು ಆನೆಗಳು ನಾಶ ಪಡಿಸುತ್ತಿದೆ. ಮಳೆಗಾಲದ ಆರಂಭದ ಸಮಯವಾದ ಈ ಸಂದರ್ಭದಲ್ಲಿ ಜನರು ಕೃಷಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಾರೆ. ಆದರೆ ಎಗ್ಗಿಲ್ಲದೆ ನಡೆಯುತ್ತಿರುವ ಆನೆ ದಾಳಿಯಿಂದಾಗಿ ಜನರು ತಮ್ಮ ಜೀವನಾಧಾರವಾದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. 

ಅರಣ್ಯ ಇಲಾಖೆಯಿಂದ ಯಾವುದೇ ಪ್ರಯೋಜನಗಳಾಗುತ್ತಿಲ್ಲ ; ಸಾರ್ವಜನಿಕರ ಆರೋಪ 

ಆನೆ ದಾಳಿ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಕೆ ನಡೆಸುತ್ತಿದ್ದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳು ನಿಗಾವಹಿಸಿ ಆನೆ ದಾಳಿಗೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.