ಚಿಕ್ಕಮಗಳೂರು : 

ಮನೆ ಮೇಲೆ ಉರುಳಿದ ಮರ :
ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಇಂದೂ ಸಹ ಮಳೆ ಮುಂದುವರಿದಿದ್ದು ಬಿರುಗಾಳಿ ಆರ್ಭಟಕ್ಕೆ ಮರ ಬಿದ್ದು ಮನೆಯೊಂದು ಸಂಪೂರ್ಣ ಜಖಂ ಆಗಿದೆ. ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದ ಈ ಘಟನೆ ನಡೆದಿದ್ದು ಮ, ಕೂಲಿ ಕಾರ್ಮಿಕ ಕ್ಲೆಮೆಂಡ್ ಡಿಸೋಜ ಎಂಬುವರ ಮನೆ ಮೇಲೆ  ಮರ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ. ಬೆಳಗಿನ ಜಾವ ಸುಮಾರು 4.30ರ ಸಮಯದಲ್ಲಿ ಮರ ಬಿದ್ದಿದ್ದು ಮನೆಯಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶೃಂಗೇರಿ ಸರ್ಕಾರಿ ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಹಾಗೂ ಸ್ಥಳಾವಕಾಶ ಸಮಸ್ಯೆ ಬಗೆಹರಿಸುವಂತೆ ಒತ್ತಾಯ :
 
ಸುಳ್ಳು ಭರವಸೆ ನಿಲ್ಲಿಸಿ ಶೃಂಗೇರಿ ತಾಲೂಕು ಆಸ್ಪತ್ರೆಗೆ ವೈದ್ಯರ ನಿಯೋಜನೆ ಮಾಡುವಂತೆ ಒತ್ತಾಯಿಸಿ ಹಾಗೂ ಸ್ಥಳಾವಕಾಶ ಸಮಸ್ಯೆ ಬಗೆಹರಿಸುವಂತೆ ಶೃಂಗೇರಿ ಸಾರ್ವಜನಿಕರು ಒತ್ತಾಯಿಸಿದ್ದು ಜುಲೈ 10ರೊಳಗೆ ಬೇಡಿಕೆ ಈಡೇರದೆ ಇದ್ದಲ್ಲಿ ಡಿ.ಎಚ್.ಓ ಕಛೇರಿ ಎದುರು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು, ಕಿವಿ ಮೂಗು, ಗಂಟಲು ತಜ್ಞರು, ಸರ್ಜನ್, ಮಕ್ಕಳ ತಜ್ಞರು ಇಲ್ಲದೆ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ‌. ಶೃಂಗೇರಿಗೆ ನೇಮಕವಾದ ಮಕ್ಕಳ ತಜ್ಞರನ್ನು ಸಹ ಕೊಪ್ಪ ಆಸ್ಪತ್ರೆಗೆ ವರ್ಗಾಯಿಸಿ ಕೋವಿಡ್ ಮುಗಿದ ನಂತರವೂ ಶೃಂಗೇರಿಗೆ ಕರ್ತವ್ಯ ನಿರ್ವಹಿಸಲು ಹಾಕಿರುವುದಿಲ್ಲ‌. ಈ ಹಿಂದೆ ಹಲವು ಬಾರಿ ಡಿ.ಎಚ್‌ಓ ಹಾಗೂ ಜನಪ್ರತಿನಿಧಿಗಳಲ್ಲಿ ಈ ಬಗ್ಗೆ ಮನವಿ ಮಾಡಿದ್ದು, ತಕ್ಷಣವೇ ಡೆಪ್ಯುಟೇಶನ್ ಆಧಾರದ ಮೇಲೆ ಶೃಂಗೇರಿ ಆಸ್ಪತ್ರೆಗೆ ನಿಯೋಜಿಸುವುದಾಗಿ ತಿಳಿಸಿದ್ದರೂ ಸಹ ಭರವಸೆ ಸುಳ್ಳಾಗಿಸಿದ್ದಾರೆ. ಆದಕಾರಣ ಈ ಬಗ್ಗೆ ಸಾರ್ವಜನಿಕರು ಸಹ ತೀವ್ರ ಅಸಮಾಧಾನ ಹೊಂದಿದ್ದು ಹೋರಾಟಕ್ಕೆ ತೀರ್ಮಾನಿಸಿದ್ದು ಜುಲೈ ತಿಂಗಳ 10ನೇ ತಾರೀಖಿನ ಒಳಗೆ ಡೆಪ್ಯುಟೇಶನ್ ಆಧಾರದ ಮೇಲೆ ನಿಯೋಜನೆಗೊಳಿಸದೆ ಇದ್ದಲ್ಲಿ ಹಾಗೂ ಆಸ್ಪತ್ರೆಗೆ ಸಂಬಂಧಿಸದ ಕೆಲವು ವಿಭಾಗಗಳನ್ನು ಈಗಿರುವ ಆಸ್ಪತ್ರೆಯ ಕಟ್ಟಡದಿಂದ ಬೇರೆಡೆಗೆ ವರ್ಗಾಯಿಸದೆ ಇದ್ದಲ್ಲಿ ನಿಮ್ಮ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ಹಾಗೆಯೇ ಶೃಂಗೇರಿ ಆಸ್ಪತ್ರೆ ಹಾಗೂ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವ ಶೃಂಗೇರಿ ಕ್ಷೇತ್ರದ ರಾಜಕಾರಣಿಗಳಿಗೆ ಹಾಗೂ ಸರ್ಕಾರದ ಪ್ರತಿನಿಧಿಗಳಿಗೆ ಕಂಡಕಂಡಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಶಾಲಾ ಮಕ್ಕಳಿಗೆ ರಜೆ ಘೋಷಣೆ : 
ಮಲೆನಾಡಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆ ನಾಲ್ಕು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಕಲಂ 26, 30, 34 ರ ಅಡಿಯಲ್ಲಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ದಿನಾಂಕ 05 ಜುಲೈ 2022 ರಿಂದ 09 ಜುಲೈ ವರೆಗೆ ಮೂಡಿಗೆರೆ, ಕಳಸ, ನರಸಿಂಹರಾಜಪುರ,ಕೊಪ್ಪ,ಶೃಂಗೇರಿ ತಾಲೂಕಿನ ಶಾಲೆಗಳಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾನ್ಯ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ರಜೆ ಘೋಷಣೆ ಮಾಡಿದ್ದಾರೆ.

ಮಳೆಯಿಂದಾಗಿ ಧರೆ ಕುಸಿದು ಮನೆ ಹಾನಿಯಾಗುವ ಭೀತಿಯಲ್ಲಿ ಕುಟುಂಬ : 

ಶೃಂಗೇರಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮರಗಳು ರಸ್ತೆಗೆ ಅಡ್ಡಲಾಗಿ ಉರುಳುವುದು, ಧರೆ ಕುಸಿತ  ಸೇರಿದಂತೆ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸಿದೆ. ಶೃಂಗೇರಿ ತಾಲೂಕಿನ ಬೆಳಂದೂರು ಗ್ರಾಮದ ಹಾಸ್ಟೆಲ್ ಸರ್ಕಲ್ ನೇರಳೆಕುಡಿಗೆ ಗೋಪಾಲ ಕೃಷ್ಣ ಎಂಬುವವರ ಮನೆಯ ವರಾಂಡ ಮಳೆಯಿಂದಾಗಿ ಕುಸಿಯುವ ಸ್ಥಿತಿಯಲ್ಲಿದ್ದು ಈ ಭಾಗವು ಕುಸಿದಲ್ಲಿ ಮನೆಗೆ ಸಂಪೂರ್ಣ ಹಾನಿಯಾಗಲಿದೆ, ಈ ಕುರಿತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಾಗೂ ಈ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ. ಗೋಪಾಲ ಕೃಷ್ಣ ಅವರ ಪರಿವಾರವು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಸಂಬಂಧಿಸಿದ ಅಧಿಕಾರಿಗಳನ್ನು ತ್ವರಿತಗತಿಯಲ್ಲಿ ಸ್ಥಳ ಪರಿಶೀಲನೆ ಗೆ ಕಳುಹಿಸಿ ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರನ್ನು ಕೋರಿದ್ದಾರೆ.


ಶಿವಮೊಗ್ಗ : 
ABVP ಪ್ರಮುಖ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರ ಗುಂಪಿನಿಂದ ಹಲ್ಲೆ 

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಎಬಿವಿಪಿ ತಾಲೂಕು ಅಧ್ಯಕ್ಷ ಮತ್ತು ಆತನ ಸ್ನೇಹಿತನ ಮೇಲೆ 15 ಜನ ಯುವಕರು ನಿನ್ನೆ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಗಾಯಗೊಂಡಿರುವ ಎಬಿವಿಪಿ ಪ್ರಮುಖನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಒದಗಿಸಲಾಗುತ್ತಿದೆ. ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸಮೀಪ ನಿನ್ನೆ ಮಧ್ಯಾಹ್ನ ಈ ಗಲಾಟೆ ನಡೆದಿದ್ದು ತೀರ್ಥಹಳ್ಳಿಯ ಜಿಪಿಎಸ್ ಸಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ  ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ತಾಲೂಕು ಅಧ್ಯಕ್ಷ ಪ್ರತೀಕ್ ಗೌಡ ಮನೆಗೆ ತೆರಳಲೆಂದು ಸ್ನೇಹಿತನೊಂದಿಗೆ ಕಾರಿನಲ್ಲಿ ಕಾಲೇಜು ಆವರಣದಿಂದ ಹೊರಹೋಗುವ ಸಂದರ್ಭದಲ್ಲಿ ಕಾಲೇಜಿನ ಹೊರಭಾಗದಲ್ಲಿದ್ದ ಅದೇ ಕಾಲೇಜಿನ ಮತ್ತು ಇತರೆ ಇಬ್ಬರು ಯುವಕರು ಕಾರನ್ನ ತಡೆದು ಕಾರಿನ ಡೋರನ್ನ ಒಡೆದು ಕಾರಿನಲ್ಲಿರುವ ಇಬ್ಬರು ಯುವಕರನ್ನ ಹೊರಗೆ ಎಳೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರೆ ಹೊರಗಿನ ಯುವಕರು ಈ ಇಬ್ಬರು  ಯುವಕರನ್ನ ಕಾರಿನಿಂದ ಹೊರಗೆ ಎಳೆದು ಥಳಿಸಿ ನೆಲಕ್ಕೆ ಉರುಳಿಸಿ ಥಳಿಸಿದ್ದಾರೆ, ಕೈಕಾಲುಗಳಿಗೆ ಕಲ್ಲುಗಳಿಂದ ಥಳಿಸಿದ್ದಾರೆ. ನಮ್ಮ ತಂಟೆಗೆ ಬಂದರೆ ನಿಮ್ಮನ್ನ ಜೀವಂತವಾಗಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಲಾಗಿದೆ.ಈ ಘಟನೆ ಹಳೆಯ ದ್ವೇಷದಿಂದ ನಡೆದಿದೆ ಎಂದು ಆರೋಪಿಸಿ ಪ್ರತೀಕ್ ಗೌಡ,  ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಬ್ಯಾರಿ ಇನ್ನಿತರರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಹರ್ಷನ ಸಹೋದರಿ ಹಾಗೂ ಹಿಂದೂಪರ ಸಂಘಟನೆಗಳಿಂದ ಗೃಹ ಸಚಿವರ ಮೇಲೆ ತೀವ್ರ ಆಕ್ರೋಶ : 

ಶಿವಮೊಗ್ಗದಲ್ಲಿ ಬರ್ಬರವಾಗಿ  ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಸೀಗೆಹಟ್ಟಿ ಹರ್ಷನನ್ನು ಹತ್ಯೆ ಮಾಡಿರುವ ಆರೋಪಿಗಳು ಜೈಲಿನಲ್ಲಿ ರಾಜಾತಿಥ್ಯವನ್ನು ಪಡೆಯುತ್ತಿರುವುದು ಉನ್ನತ ಪೊಲೀಸ್ ಅಧಿಕಾರಿಗಳ ದಾಳಿ ವೇಳೆ ಬಯಲಾಗಿದೆ. ಆರೋಪಿಗಳ ಬಳಿಯಲ್ಲಿ ಮೊಬೈಲ್​ ಹಾಗೂ ಇತರ ಉಪಕರಣಗಳು ಇರುವುದು ಪೊಲೀಸರ ದಾಳಿಯ ವೇಳೆ ಪತ್ತೆಯಾಗಿವೆ. ಪರಪ್ಪನ ಅಗ್ರಹಾರ ಜೈಲ್ ನ ಆಯ್ದ ಸೆಲ್​ಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಶಿವಮೊಗ್ಗದ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಯಾದ ಹರ್ಷನ  ಆರೋಪಿಗಳ ಸೆಲ್​ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಆರೋಪಿಗಳಿಗೆ ವಿಶೇಷ ಆರೈಕೆ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳಾದ ಖಾಸೀಫ್​ ಮತ್ತು ​ ಗ್ಯಾಂಗ್​ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದೇ ಹಲವರಿಗೆ ವಿಡಿಯೋ ಕಾಲ್​ ಮಾಡಿದ್ದಾರೆ ಎನ್ನಲಾಗಿದೆ. ಅದಲ್ಲದೆ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿರುವ ವಿಡಿಯೋಗಳು, ಬೇರೆಯದ್ದೆ ರೀತಿಯಲ್ಲಿ ಎಡಿಟ್ ಮಾಡಿ ಲಾಂಗು, ಮಚ್ಚಿನ ಹಾಡುಗಳೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಡಲಾಗಿದೆ ಎಂಬ ಆರೋಪಗಳೂ ಕೇಳಿ ಬಂದಿದೆ.ರಾಜ್ಯದ ಜನರನ್ನು ಅತೀವ ಆತಂಕಕ್ಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ಹರ್ಷನ ಹತ್ಯೆಯನ್ನು ಜೈಲಿಗೆ ಹಾಕಿ ಈ ರೀತಿಯಾಗಿ ಸೌಲಭ್ಯಗಳನ್ನು ನೀಡಿ ರಾಜಾತಿಥ್ಯ ನೀಡುತ್ತಿರುವುದರ ವಿರುದ್ಧ ಹರ್ಷನ ಸಹೋದರಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹವರನ್ನು ಇನ್ನೂ ಸಾಕುತ್ತಿರುವ ಹಾಗೂ ಅವರಿಗೆ ಸಹಕಾರ ನೀಡುತ್ತಿರುವ ಜೈಲಿನ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. 

ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಯುವಕ : 
ತೀರ್ಥಹಳ್ಳಿ : ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ತೀರ್ಥಹಳ್ಳಿ ಮಾರ್ಗ ಮಧ್ಯದ ಪ್ರದೇಶವಾದ ಗುಡ್ಡೆಕೇರಿ ಬಳಿಯಲ್ಲಿ ಕಾರ್ ಹಾಗೂ ಬೈಕ್ ನ ನಡುವೆ ಈ ಅಪಘಾತ ಸಂಭವಿಸಿದ್ದು ಬೈಕ್ ಚಾಲಕ ಸುನೀಲ್ ದುರ್ಮರಣವನ್ನಪ್ಪಿದ್ದಾರೆ. ಕೈಮರ ಮೂಲದ ಸೊಸೈಟಿ ಪಿಗ್ಮಿ ಸಂಗ್ರಾಹಕ ಸುನೀಲ್ ಮೃತಪಟ್ಟ ದುರ್ದೈವಿ. ಕೈಮರದಿಂದ ಗುಡ್ಡೆಕೇರಿಗೆ ತೆರಳುವ ಸಮಯದಲ್ಲಿ ಈ ದುರಂತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸುನೀಲ್ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ತಾಲೂಕು ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗ ಮಧ್ಯದಲ್ಲಿ ಸುನೀಲ್ ಕೊನೆಯುಸಿರೆಳೆದಿದ್ದಾರೆ.

ಹಾಸನ :  
ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ : 

ವಿವಾಹಿತ ಮಹಿಳೆಯೋರ್ವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ಸಂಬಂಧ ಅನುಮಾನ ವ್ಯಕ್ತಪಡಿಸಿರುವ ಆಕೆಯ ಸಂಬಂಧಿಕರು ಆಕೆಯ ಪತಿಯೇ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಿದ್ದ ಇದರಿಂದಾಗಿ ದಂಪತಿಗಳ ಮಧ್ಯದಲ್ಲಿ ಸದಾ ಕಲಹ ಉಂಟಾಗುತ್ತಿತ್ತು ಎಂದು ಆರೋಪಿಸಿರುವ ಮೃತ ತೇಜಸ್ವಿನಿ ಕುಟುಂಬಸ್ಥರು ಆಕೆಯ ಪತಿ ಮಧು ವಿರುದ್ಧ ಕಿಡಿಕಾರಿದ್ದಾರೆ. ಮೃತ ತೇಜಸ್ವಿನಿ ಹಾಸನ ತಾಲೂಕಿನ ದೊಡ್ಡ ಮಂಡಿಗನ ಹಳ್ಳಿ ಗ್ರಾಮದವರು, ಪತಿ ಮಧು ಕ್ರಿಕೆಟ್ ಬೆಟ್ಟಿಂಗ್ ನ ವ್ಯಸನಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು ದಂಪತಿಗಳ ನಡುವೆ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಕಲಹ ಏರ್ಪಡುತ್ತಿತ್ತು ಅಂತೆಯೇ ಬೆಟ್ಟಿಂಗ್ ಆಡಲೆಂದು ಇಪ್ಪತ್ತು ಲಕ್ಷಕ್ಕೂ ಅಧಿಕ ಹಣವನ್ನು ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು ಇದಕ್ಕೆ ಸಂಬಂಧಿಸಿ ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಆಕೆಯನ್ನು ಪತಿಯೇ ಹತ್ಯೆ ಮಾಡಿದ್ದಾನೆ ಎಂದು ಮನೆಯವರು ದೂರಿದ್ದಾರೆ. ರೊಚ್ಚಿಗೆದ್ದ ಮನೆಯವರು ಮನೆಯವರು ಮಧು ಮನೆಮುಂದೆ ಮೃತಳ ಶವವನ್ನಿಟ್ಟು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರ ಈ ಕುರಿತಾಗಿನ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ. ಮೃತಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಶೀಘ್ರವೇ ನಮಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿದ್ದಾರೆ.