ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ಫೋಕಸ್) ಕಸ್ತೂರಿರಂಗನ್‌ ವರದಿ ಅನುಷ್ಠಾನಕ್ಕೆ ಕೇಂದ್ರ ಸರಕಾರ 4ನೇ ಬಾರಿ ಅಧಿಸೂಚನೆ ಹೊರಡಿಸಿರುವ ಕ್ರಮ ವಿರೋಧಿಸಿ ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆ ಬಂದ್‌ ಗೆ ಕರೆ ನೀಡಲಾಗಿದೆ.

ಕಾಫಿ ಬೆಳೆಗಾರರ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿ ನಿರ್ಣಯ ಈ ನಿರ್ಧಾರ ಕೈಗೊಂಡಿದ್ದಾರೆ. ನಿರ್ಣಯದಂತೆ ರಾಜ್ಯ ಸರಕಾರ ಕೇಂದ್ರ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸದ ಪರಿಣಾಮ ಸರ್ಕಾರ ಕಸ್ತೂರಿರಂಗನ್ ವರದಿ ಜಾರಿ ಮುಂದಾಗಿದೆ. ಇದರ ಕುರಿತು ಆಕ್ಷೇಪಣೆಗೆ ಎರಡು ತಿಂಗಳು ನೀಡಿರುವುದರಿಂದ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಸಭೆ ನಿರ್ಣಯ ಕೈಗೊಂಡಿದೆ. ಅಲ್ಲದೇ ಈ ವರದಿ ಜಾರಿಯಾದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ರೈತರು, ಕಾಫಿ, ಅಡಕೆ ಬೆಳೆಗಾರರು ಸೇರಿದಂತೆ ಕಾರ್ಮಿಕರು, ವರ್ತಕರ ಬದುಕು ನಾಶವಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.


ಪಶ್ಚಿಮ ಘಟ್ಟ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ 4ನೇ ಬಾರಿ ಅಧಿ ಸೂಚನೆ ಹೊರಡಿಸಲಾಗಿದೆ. ಜನರಿಗೆ ಮಾರಕವಾಗಿರುವ ಈ ವರದಿಯನ್ನು ವಿರೋಧಿಸಿ ಅನೇಕ ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಕೇಂದ್ರಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ರಾಜ್ಯ ವಿಫಲವಾಗಿದೆ. ಕೇಂದ್ರದಲ್ಲಿ ಬಿಜೆಪಿಯ 25 ಸಂಸದರಿದ್ದು, ಈ ಬಗ್ಗೆ ಸಂಸತ್‌ನಲ್ಲಿ ಚಕಾರ ಎತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಯಾವ ಯಾವ ತಾಲೂಕಿನ ಗ್ರಾಮಗಳು ಒಳಪಡುತ್ತವೆ?

ಈ ಅಧಿಸೂಚನೆ ಪ್ರಕಾರ ರಾಜ್ಯದ 10 ಜಿಲ್ಲೆಗಳ 1,572 ಗ್ರಾಮಗಳು ಒಳಪಡುತ್ತವೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ 142 ಗ್ರಾಮಗಳು ಸೇರಿವೆ. ಚಿಕ್ಕಮಗಳೂರಿನ 32, ಕೊಪ್ಪ 32, ಮೂಡಿಗೆರೆ 26, ನರಸಿಂಹರಾಜಪುರ 31, ಶೃಂಗೇರಿ 21 ಗ್ರಾಮಗಳು ಒಳಪಡುತ್ತವೆ. ಇದರಿಂದ ಜಿಲ್ಲೆಯ ಲಕ್ಷಾಂತರ ಜನರ ಬದುಕಿಗೆ ತೊಂದರೆಯಾಗಲಿದೆ.

ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಸಿಎಂ ಭೇಟಿ ಬಳಿಕ ಕೇಂದ್ರದ ಅರಣ್ಯ ಸಚಿವರನ್ನೂ ಭೇಟಿ ಮಾಡಿ ಸಮಸ್ಯೆಯನ್ನು ಮನವರಿಗೆ ಮಾಡುವ ಅಗತ್ಯವಿದೆ. ಸ್ಯಾಟ್‍ಲೈಟ್ ಸರ್ವೆಯ ವರದಿ ಕೈಬಿಟ್ಟು ಭೌತಿಕ ಸರ್ವೆಗೆ ಒತ್ತಾಯ ಹೇರಬೇಕಿದೆ. ಕಾಫಿ ಬೆಳೆಗಾರರ ಸಂಘದ ಮುಖಂಡರಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಂಪರ್ಕ ಇದ್ದು, ಸಿಎಂ ಭೇಟಿ ಹಾಗೂ ಕೇಂದ್ರ ಸಚಿವರ ಭೇಟಿಗೆ ಮುಖಂಡರು ಮುಂದಾಗಬೇಕಿದೆ - ಎಸ್. ವಿಜಯ ಕುಮಾರ್, ಸಿಪಿಐ ಮುಖಂಡ

ಮಲೆನಾಡು ಜಿಲ್ಲೆಗಳಲ್ಲಿ ಸರಣಿ ಬಂದ್

ಕಸ್ತೂರಿ ವರದಿಯನ್ನು ಕೇಂದ್ರ ಸರಕಾರ ವಾಪಸು ಪಡೆಯಬೇಕು ಎಂದು ಆಗ್ರಹಿಸಿ ಜುಲೈ 27 ರಂದು ಹಾಸನ ಬಂದ್‌, 28 ರಂದು ಕೊಡಗು, 29 ರಂದು ಚಿಕ್ಕಮಗಳೂರು ಬಂದ್‌ ನಡೆಸಲು ಸಂಘಟನೆಗಳು ನಿರ್ಧರಿಸಿವೆ. ಇದಲ್ಲದೇ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರಿಂದ ಅರ್ಜಿ ಪಡೆದು ಕೇಂದ್ರ ಪರಿಸರ ಇಲಾಖೆಗೆ ಮನವಿ ಸಲ್ಲಿಸುವುದು, ಮೂರೂ ಜಿಲ್ಲೆಯ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿ ಬೆಂಗಳೂರಿನಲ್ಲಿ ಸಭೆ ನಡೆಸುವ ಜತೆಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿ, ಜುಲೈ ಅಂತ್ಯದಲ್ಲಿ ಕೇಂದ್ರ ಪರಿಸರ ಖಾತೆ ಸಚಿವರನ್ನು ಭೇಟ ಮಾಡಿ ಮನವಿ ಸಲ್ಲಿಸಲು ಮುಖಂಡರು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

ಕಸ್ತೂರಿ ರಂಗನ್ ವರದಿಯಲ್ಲಿ ಏನಿದೆ?

ಕಸ್ತೂರಿ ರಂಗನ್‍ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚ,ಕಿ.ವ್ಯಾಪ್ತಿಯ ಪ್ರದೇಶ ಅಂದರೆ ಶೇಕಡಾ 36.4ರಷ್ಚು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಅಥವಾ ಯಾವುದೇ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಬೇಕು. ಎಲ್ಲಾರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ವ್ಯಾಪ್ತಿಯಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುದಿದ್ದರೂ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.


ಬಂದ್ ಗೆ ಪರಿಸರವಾದಿ ವಿಠಲ್ ಹೆಗ್ಡೆ ಬೆಂಬಲ

ಕಸ್ತೂರಿ ರಂಗನ್ ವರದಿ ವಿರೋಧಿಸಿ 29ರಂದು ಕರೆ ಕೊಟ್ಟಿರುವ ಚಿಕ್ಕಮಗಳೂರು ಬಂದ್ ಗೆ ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಅವರು, ನಾವು ಮಾಧವ ಗಾಡ್ಗಿಲ್ ಅವರು ವರದಿ ನೀಡಿದಿಂದಲೂ ಇದೊಂದು ಅವೈಜ್ಞಾನಿಕ ಯೋಜನೆ ಎಂದು ವಿರೋಧಿಸುತ್ತಲೇ ಬಂದಿದ್ದೇವೆ. ಇದು ಒಂದಿಷ್ಟು NGO ಗಳಿ ಪಿತೂರಿಯಾಗಿದ್ದು, ಈ NGO ಗಳ ಹಿಂದೆ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳಿದ್ದಾವೆ. ಶೃಂಗೇರಿ ತಾಲೂಕಿನ 1,09,000 ಎಕರೆ ಪ್ರದೇಶದಲ್ಲಿ ನಾವು ಈಗಾಗಲೇ 55 ಸಾವಿರ ಎಕರೆಯನ್ನು ಒಂದು ಅವೈಜ್ಞಾನಿಕ ಯೋಜನೆಗೆ, 77 ಸಿಂಗಲೀಕ ಕುಟುಂಬಗಳಿದ್ದಾವೆ ಎನ್ನುವ ಕಾರಣಕ್ಕೆ ತಾಲೂಕಿನ ಅರ್ಧಕ್ಕಿಂತ ಹೆಚ್ಚು ಪ್ರದೇಶವನ್ನು ನೀಡಿದ್ದೇವೆ. ಈಗ ಈ ರೀತಿಯ ಯೋಜನೆ ಮೂಲಕ ಮತ್ತೆ ನಿರ್ಬಂಧ ಹೇರಲು ಹೊರಟಿದ್ದಾರೆ ಎಂದರು.

ಕೆಲವಷ್ಟೇ ಜಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿ ಉಳಿದ ಜಾಗದಲ್ಲಿ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುವುದು ಅವೈಜ್ಞಾನಿಕ ವಿಚಾರ. ಪರಿಸರ ರಕ್ಷಣೆ ಎಂದರೆ ಭೂಮಿಯ ಎಲ್ಲಾ ಪ್ರದೇಶಗಳು ಪರಿಸರ ಸೂಕ್ಷ್ಮ ಪ್ರದೇಶವೆ. ಎಲ್ಲರಿಗೂ ಇದರ ಜವಬ್ದಾರಿ ಇದೆ. ನಗರ ಪ್ರದೇಶದಲ್ಲಿರುವವರ ಪಾಪದ ಪಲವಾಗಿ ಇಂದು ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗಿದೆ. ಅವರ ಪಾಪವನ್ನು ಪರಿಹಾರ ಮಾಡಿಕೊಳ್ಳಲು ನಮ್ಮ ಭಾಗದ ಕಾಡನ್ನು ಗುರಿಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ಹತ್ತು ವರ್ಷದಿಂದ ನಾವು ಇದನ್ನು ವಿರೋಧಿಸುತ್ತಿದ್ದೇವೆ. ಆದರೆ ಸರ್ಕಾರಗಳು ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ. ಮಲೆನಾಡು ಉಳಿಸುವ ಎಲ್ಲಾ ಪ್ರತಿಭಟನೆಗಳಿಗೆ ನಮ್ಮ ಬೆಂಬಲವಿದೆ. ಅದು ಯಾವುವೇ ಪಕ್ಷ ಅಥವಾ ವ್ಯಕ್ತಿ ಮಾಡಿದರೂ ನಮ್ಮ ಸಂಪೂರ್ಣ ಬೆಂಬಲವಿದೆ. ಕೆಲವೇ ಕೆಲವು NGO ಗಳು ಮಾಡುತ್ತಿರುವ ಸಂಚನ್ನು ನಾವೆಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕಿದೆ. ನಮಗೆ ಅವರು ಪರಿಸರದ ಪಾಠ ಹೇಳಿಕೊಡಬೇಕಾದ ಅಗತ್ಯ ಇಲ್ಲ. ಇಲ್ಲಿರುವವರೆಲ್ಲ ಪರಿಸರದೊಂದಿಗೆ ಸಹಬಾಳ್ವೆ ನಡೆಸಿಕೊಂಡು ಬಂದವರಾಗಿದ್ದಾರೆ. ಪರಿಸರ ಸಂರಕ್ಷಣೆ ನಮ್ಮ ರಕ್ತದಲ್ಲಿಯೇ ಬಂದಿದೆ. - ಕಲ್ಕುಳಿ ವಿಠಲ್ ಹೆಗ್ಡೆ, ಪರಿಸರವಾದಿ

ಗಾಡ್ಗಿಲ್ ವರದಿಯಲ್ಲಿ ಏನಿತ್ತು?

ಗಾಡ್ಗಿಲ್ ವರದಿಯಲ್ಲಿ ಶೇ. 94ರಿಂದ 97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳವಾಗ ಅದು ಅಲ್ಲಿಯ ಪರಿಸರವನ್ನು ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೆಕೆಂದು ಶಿಪಾರಸು ಮಾಡಿತು. ಈ ಭಾಗದಲ್ಲಿ ಬಹಳಷ್ಟು ತೋಟಗಳೂ, ವಸತಿ ಪ್ರದೇಶಗಳೂ, ಕೃಷಿ ಪ್ರದೇಶವೂ ಸೇರಿತ್ತು. ಇದರಲ್ಲಿ ಆಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಧಿತ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆ ಕಮಿಟಿಯ ಆಪ್ರದೇಶದಲ್ಲಿ ಯಾವುದೇ ದೊಡ್ಡ ಹೊಸ ಅಣೆಕಟ್ಟುಗಳನ್ನು ಕಟ್ಟುಬಾರದು, ಈ ಪ್ರದೇಶ ವಿಶೇಷ ರಕ್ಷಣೆ ಮತ್ತು ಅದರ ಭೂಲಕ್ಷಣ, ವನ್ಯಜೀವಿಗಳ ಕಾಳಜಿ, ಫಲವತ್ತಾದ ಭೂಮಿಯನ್ನು ಉಳಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿ, ಕೆಲವು ಐತಿಹಾಸಿಕ ಮೌಲ್ಯಗಳು ಸಹ ಇವೆ ಇತ್ಯಾದಿ ಕಾರಣಗಳನ್ನು ಕೊಟ್ಟಿತ್ತು. ಇದಾದ ಬಳಿಕ ಕುಂದುಕೊರತೆಯನ್ನು ನೀಗಿಸಲು ಕಸ್ತೂರಿ ರಂಗನ್ ಸಮಿತಿ ನೇಮಿಸಲಾಯಿತು.