ಚಿಕ್ಕಮಗಳೂರು :
ಶಾಲೆಯಿಂದ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಬಾಲಕಿ :
ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯು ಮುಂದುವರಿದಿದ್ದು ನದಿಗಳು, ಹಳ್ಳ ಕೊಳ್ಳಗಳು ಅಪಾಯದ ಮಟ್ಟ ತಲುಪುತ್ತಿದೆ ಮುಂಜಾಗ್ರತಾ ಕ್ರಮವಾಗಿ ಶೃಂಗೇರಿ ಹಾಗೂ ಕಳಸ ತಾಲೂಕಿನ ಎಲ್ಲಾ ಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ. ಮಳೆಯ ಆರ್ಭಟಕ್ಕೆ ಶಾಲಾ ವಿದ್ಯಾರ್ಥಿನಿಯೊಬ್ಬಳು ಕಿರು ಸೇತುವೆ ದಾಟುವ ವೇಳೆ ಕಾಲುಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಕಾಫಿ ಎಸ್ಟೇಟ್ ಒಂದರಲ್ಲಿ ನಡೆದಿದ್ದು, ಸುಪ್ರೀತ ಎಂಬಾಕೆ ನೀರಿನಲ್ಲಿ ಕೊಚ್ಚಿಹೋಗಿರುವ ಬಾಲಕಿ. ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಸುಪ್ರೀತ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವ ಸಂಧರ್ಭದಲ್ಲಿ ಹೊಸಪೇಟೆ ಗ್ರಾಮದ ಕಾಫಿ ಎಸ್ಟೇಟ್ ಒಂದರ ಸಣ್ಣ ಹಳ್ಳವೊಂದನ್ನು ದಾಟುವ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ ಎಂಬ ಮಾಹಿತಿ ದೊರಕಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು ಮಗುವಿಗಾಗಿ ಶೋಧ ಕಾರ್ಯ ತೀವ್ರಗತಿಯಲ್ಲಿ ಸಾಗುತ್ತಿದೆ.
ಕಾರಿನ ಮೇಲೆ ಬಿದ್ದ ಮರ :
ಚಿಕ್ಕಮಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯು ಮುಂದುವರಿದಿದ್ದು ನದಿಗಳು ಅಪಾಯದ ಮಟ್ಟ ತಲುಪುತ್ತಿದೆ. ಮುಂಜಾಗ್ರಾತಾ ಕ್ರಮವಾಗಿ ಶೃಂಗೇರಿ ಹಾಗೂ ಕಳಸ ತಾಲೂಕಿನ ಎಲ್ಲಾ ಶಾಲೆಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ. ಮೂಡಿಗೆರೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಅದರ ಪರಿಣಾಮ ಆಲ್ಟೋ ಕಾರ್ ಮೇಲೆ ಬೃಹತ್ ಕಾರದ ಮರವೊಂದು ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಗಂಗನಮಕ್ಕಿಯಲ್ಲಿ ಈ ಅವಘಡ ನಡೆದಿದೆ.
ಶಾಲೆಗಳಿಗೆ ಎರಡು ದಿನ ರಜೆ
ಶೃಂಗೇರಿ : ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಶೃಂಗೇರಿ,ಬಾಳೂರು,ಕಳಸ ತಾಲೂಕಿನ ಶಾಲೆಗಳಿಗೆ ಎರಡು ದಿನಗಳ ಕಾಲ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಬಾಳೂರು ವ್ಯಾಪ್ತಿಯ ಶಾಲೆಗಳಿಗೆ 5.07.2022 ಹಾಗೂ 06.07.2022 ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ್ದಾರೆ. ಇಂದು ಕೆರೆಕಟ್ಟೆ, ಎಸ್.ಕೆ.ಬಾರ್ಡರ್ , ಕಳಸ, ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು ಮಳೆಯ ರಭಸಕ್ಕೆ ನದಿ, ಹಳ್ಳ ಕೊಳ್ಳಗಳು ಮೈತುಂಬಿ ಹರಿಯುತ್ತಿದ್ದು ಈ ಹಿನ್ನೆಲೆ ನಾಳೆಯೂ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ಕಾರಣ ಹಾಗೂ ಮಕ್ಕಳ ಸುರಕ್ಷತೆಯ ಸಲುವಾಗಿ ಮುಂಜಾಗ್ರತಾ ದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಶೃಂಗೇರಿಯ ಬೈಪಾಸ್ ರಸ್ತೆಯ ಮೇಲೆ ನೀರು ನಿಂತಿದ್ದು, ಶೃಂಗೇರಿ ಮಠದ ಕಪ್ಪೆ ಶಂಕರ ದೇವಾಲಯವು ಮುಳುಗಡೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿರುವ ಕಾರಣ ಹಾಗೂ ತಗ್ಗು ಪ್ರದೇಶಗಳಲ್ಲಿ, ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿರುವ ಕಾರಣ ಮಕ್ಕಳ ಹಿತ ದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ.
ದರ್ಜಿ ಕನ್ಹಯ್ಯ ಹತ್ಯೆ ಖಂಡಿಸಿ ಬಣಕಲ್, ಕೊಟ್ಟಿಗೆಹಾರ ಬಂದ್
ಮೂಡಿಗೆರೆ : ರಾಜಸ್ಥಾನದ ಉದಯಪುರದಲ್ಲಿ ಭೀಕರವಾಗಿ ಇಬ್ಬರು ಮುಸಲ್ಮಾನ ವ್ಯಕ್ತಿಗಳಿಂದ ಹತ್ಯೆಗೀಡಾದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಾಗೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಇಂದು ಮೂಡಿಗೆರೆಯ ಬಣಕಲ್ ಹಾಗೂ ಕೊಟ್ಟಿಗೆಹಾರ ಬಂದ್ ನಡೆಯಿತು. ಇಂದು ಬೆಳಗ್ಗಿನಿಂದ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು, ಈ ದುಷ್ಕೃತ್ಯವನ್ನು ಎಸಗಿ ವೀಡಿಯೋ ಮಾಡಿ ವಿಕೃತಿ ಮೆರೆದ ಆರೋಪಿಗಳ ವಿರುದ್ಧವಾಗಿ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕರೆ ನೀಡಿದ್ದ ಬಂದ್ ನ ಕುರಿತಾಗಿ ಬಣಕಲ್ ಸಮುದಾಯ ಭವನದಲ್ಲಿ ಸಭೆ ನಡೆಯಿತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ.ಕೆ ಪ್ರಾಣೇಶ್, ತನ್ನ ಟೈಲರಿಂಗ್ ವೃತ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಉದಯಪುರದ ದರ್ಜಿ ಕನ್ಹಯ್ಯ ಲಾಲ್ ನ ಕುತ್ತಿಗೆ ಸೀಳಿ ಹತ್ಯೆಗೈದಿರುವುದು ಖಂಡನಾರ್ಹ ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ದೇಶಕ್ಕೆ ಮಾರಕವಾಗಿರುವ ಇಂತಹ ಕೆಟ್ಟ ಮನಸ್ಸನ್ನು ಹೊಂದಿರುವವರ ಮೇಲೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದರು
ಶಿವಮೊಗ್ಗ :
ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು :
ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವ್ಯಾಪ್ತಿಯ ಮುಡುಬ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದ್ದು ಮುಡುಬದ ಚೌಡೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ಮಂಜುನಾಥ್ ಹೆಗ್ಡೆ ಎಂಬುವವರ ತೋಟಕ್ಕೆ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿದೆ. ಕಾರಿನ ಚಾಲನೆ ನಡೆಸುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತರನ್ನು ತರೀಕೆರೆಯ ವಕೀಲ ಸಂಪತ್ ಎಂದು ಗುರುತಿಸಲಾಗಿದೆ. ಅವರೊಂದಿಗೆ ಪತ್ನಿ ಹಾಗೂ ಮಗಳು ಸಹ ಪ್ರಯಾಣ ನಡೆಸುತ್ತಿದ್ದು ಇಬ್ಬರೂ ಪ್ರಾಣಾಪಾಯಾಗಳಿಂದ ಪಾರಾಗಿದ್ದಾರೆ. ಮಗನನ್ನು ಮೂಡುಬಿದ್ರೆ ಶಾಲೆಗೆ ಬಿಟ್ಟು ಬರುವ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.



0 Comments