ಚಿಕ್ಕಮಗಳೂರು
ಅಕ್ರಮ ಗಾಂಜಾ ಮಾರಾಟಗಾರ ಸೆರೆ :
ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಚಿಕ್ಕಮಗಳೂರು ಪೊಲೀಸರು ಚಿಕ್ಕಮಗಳೂರು ತಾಲೂಕಿನ ಮಲ್ಲೇದೇವರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ಓರ್ವ ಆರೋಪಿಯನ್ನು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಳಿ ಇದ್ದ 80 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈ ಕಾಲದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕಾರ್ಯಾಚರಣೆಯನ್ನು CEN ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ನಡೆಸಿದ್ದು ಅಕ್ರಮವಾಗಿ ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದಲ್ಲಿ ಯಾವುದೇ ಆತಂಕವಿಲ್ಲದೆ ಮುಕ್ತವಾಗಿ ಪೊಲೀಸರಲ್ಲಿ ತಿಳಿಸಲು ಸೂಚಿಸಿದ್ದಾರೆ.
ದೇವಸ್ಥಾನದ ಬೀಗ ಒಡೆದು ಕಾಣಿಕೆ ಹುಂಡಿ ಹೊತ್ತೊಯ್ದ ಖದೀಮರು :
ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮದ ಶ್ರೀ ಸುಗ್ಗಿಕಲ್ಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ಸಂಭವಿಸಿದ್ದು, ದೇವಾಲಯದ ಮುಂಬಾಗಿಲಿನ ಬೀಗ ಮುರಿದು ಕಳ್ಳರು ಹಣವನ್ನು ದೋಚಿದ್ದಾರೆ. ಕಳ್ಳತನ ನಡೆದಿರುವ ಕುರಿತಾಗಿ ದೇವಸ್ಥಾನದ ಪಕ್ಕದ ಮನೆಯವರು ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ಈ ಕುರಿತು ನೋಡಿದಾಗ ಕಳ್ಳರು ಕಾಣಿಕೆ ಹುಂಡಿಯನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಕಾಣಿಕೆ ಹುಂಡಿಯಲ್ಲಿ ಅಂದಾಜು 20 ರಿಂದ 25 ಸಾವಿರ ರೂಪಾಯಿ ಹಣವಿದ್ದು, ಈ ಕೃತ್ಯವನ್ನು ಎಸಗಿರುವ ಕಳ್ಳರನ್ನು ಅತೀ ಶೀಘ್ರವಾಗಿ ಬಂಧಿಸಿ ಹಣವನ್ನು ಪತ್ತೆ ಮಾಡಿಕೊಡಬೇಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಮಳೆಯಲ್ಲೇ ಗ್ರಾಮಸ್ಥರಿಂದ ಪ್ರತಿಭಟನೆ :
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವೈಕುಂಠಪುರದಿಂದ ಬಾಕುರ್ಡಿ ಮಾರ್ಗವಾಗಿ ತೆರಳುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆಯನ್ನು ದುರಸ್ತಿಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕುಸಿದ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಕೂಡಲೇ ರಸ್ತೆಯನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ತಹಸೀಲ್ದಾರ್ ಗೌರಮ್ಮ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಗೊಳಿಸಿ ಕೊಡಲಾಗುವುದು, ಮೇಲಧಿಕಾರಿಗಳ ಗಮನಕ್ಕೆ ಈ ವಿಚಾರ ತಂದು ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿ ನಡೆಸುವ ಭರವಸೆಯನ್ನು ನೀಡಿದರು. ಈ ಕುರಿತು ಮಾತನಾಡಿದ ಕೂತುಗೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಮಾರ್ ಭಟ್, ರಸ್ತೆಯು ಕಳೆದ ವರ್ಷದ ಪ್ರವಾಹದಿಂದಾಗಿ ಸಂಪೂರ್ಣ ಹದಗೆಟ್ಟಿದ್ದು ಅನೇಕರು ಈ ರಸ್ತೆಯ ಮೂಲಕ ಸಂಚಾರ ನಡೆಸುತ್ತಾರೆ ಆದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರು ಈ ಕುರಿತು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ ಎಂದರು.
ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ ; ಬಾವಿಯಲ್ಲಿ ದೊರೆತ ಮೃತದೇಹ :
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೇಮನೆ ಹೆಗ್ಗದ್ದೆ ರಸ್ತೆಯ ಸಮೀಪದಲ್ಲಿ ಮನೆ ಹೊಂದಿದ್ದ ಚಂದ್ರಶೇಖರ ಎಂಬುವವರು ಮೂರುದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಕುರಿತಂತೆ ಮನೆಯವರು ಕುಟುಂಬಸ್ಥರನ್ನು ವಿಚಾರ ಮಾಡಿದ್ದರು ಹಾಗೂ ಗ್ರಾಮಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೂ ಅವರು ದೊರೆಯದ ಕಾರಣ ವ್ಯಕ್ತಿಯನ್ನು ಪತ್ತೆಮಾಡಿ ಕೊಡುವಂತೆ ದೂರು ನೀಡಿದ್ದರು. ಪೊಲೀಸರು ಈ ಸಂಬಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಇಂದು ಬೆಳಗ್ಗೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಅಡ್ಡಗದ್ದೆ ವ್ಯಾಪ್ತಿಯ ಕುಂಬ್ರಿ ರಾಘವೇಂದ್ರ ಎಂಬುವವರ ಮನೆಯ ಹತ್ತಿರವಿರುವ ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕದಲ್ಲಿ ಹಾಗೂ ಸಂಪೂರ್ಣ ತನಿಖೆಯ ನಂತರವಷ್ಟೇ ಘಟನೆಗೆ ನಿಖರಕಾರಣಗಳೇನು ಎಂಬುದಾಗಿ ಮಾಹಿತಿ ಹೊರಬೀಳಲಿದೆ.
ಮೂಡಿಗೆರೆಯ ಅಮೃತ್ ಪಟೇಲ್ ರಾಷ್ಟ್ರಕ್ಕೆ ಪ್ರಥಮ :
ಕ್ಯಾನ್ಸರ್ ಸ್ಪೆಷಾಲಿಟಿ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದ ಡಾ.ಅಮೃತ್ ಪಟೇಲ್ ರಾಷ್ಟ್ರಮಟ್ಟದ ಸಾಧನೆಗೈದಿದ್ದಾರೆ. ಕೃಷಿಕರ ಪುತ್ರರಾದ ಅಮೃತ್ ವೈದ್ಯಕೀಯ ವಿಜ್ಞಾನ ಸಂಸ್ಥೆ ನವದೆಹಲಿಯಲ್ಲಿ ನಡೆದ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಭಾರತದಲ್ಲಿ 11ನೆಯ ರ್ಯಾಂಕ್ ಪಡೆದಿದ್ದು ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರಿಗರು ಸುರಕ್ಷಿತ :
ಹಿಂದೂಗಳ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾ ಸ್ಥಳವಾಗಿರುವ ಅಮರನಾಥ ಯಾತ್ರೆಗೆ ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿರುವ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯಾತ್ರಾಸ್ಥಳ ಅಮರನಾಥದಲ್ಲಿ ಮೇಘ ಸ್ಫೋಟವಾಗಿದ್ದು, ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದ್ದು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿರುವ ಯಾತ್ರಾರ್ಥಿಗಳು ಯಾವುದೇ ಸಮಸ್ಯೆಗೀಡಾಗದೆ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅಮರನಾಥಕ್ಕೆ ಚಿಕ್ಕಮಗಳೂರು ಜಿಲ್ಲೆಯಿಂದ 60 ಜನ ಯಾತ್ರಿಕರು ಸುರಕ್ಷಿತವಾಗಿದ್ದು ಇವರನ್ನು ಸೇನಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸದ್ಯ 58 ಜನ ಮಂದಿ ಬಲ್ಸಾಲ್ ಬಂಕರ್ ನಲ್ಲಿ ವಾಸ್ತವ್ಯವಿದ್ದು, ಇನ್ನಿಬ್ಬರು ಜಮ್ಮುವಿಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 15 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಕೂಡ ಮೇಘಸ್ಫೋಟ ಸಂಭವಿಸಿದಾಗ ಅನೇಕರು ಅಪಯಕ್ಕೀಡಾಗಿದ್ದರು. ತುರ್ತಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆ ಈ ಬಾರಿ ಬಹುತೇಕ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ.
ಹಾಸನ :
25 ಜನ ಶಾಲಾ ಮಕ್ಕಳಿದ್ದ ಬಸ್ ಪಲ್ಟಿ
ಶಾಲಾ ಮಕ್ಕಳಿದ್ದ ಬಸ್ವೊಂದು ರಸ್ತೆ ಬದಿಗೆ ಉರುಳಿ ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ದೇವಗೌಡನಹಳ್ಳಿಯ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಬಸ್ ಇಂದು ಬೆಳಗ್ಗೆ ಉರುಳಿಬಿದ್ದಿದ್ದು, ಬಸ್ಸಿನಲ್ಲಿದ್ದ 25 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಕಳಪೆ ರಸ್ತೆ ಕಾಮಗಾರಿಯಿಂದ ರಸ್ತೆ ಬದಿಯ ಮಣ್ಣು ಕುಸಿದು ಶಾಲಾ ಬಸ್ ಉರುಳಿ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ. ಅದೃಷ್ಟವಶಾತ್ ಎಂಬಂತೆ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಬಸ್ಸಿನಲ್ಲಿದ್ದ 25 ಜನ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸ ರಸ್ತೆ ನಿರ್ಮಾಣದ ವೇಳೆ ರಸ್ತೆಯ ಎರಡೂ ಬದಿಯಲ್ಲಿ ಸೂಕ್ತ ರೀತಿಯಲ್ಲಿ ಸಮತಟ್ಟು ಮಾಡದೇ ಅನಾಹುತಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ
ಶಿವಮೊಗ್ಗದಿಂದ ಅಮರನಾಥ ಯಾತ್ರೆ ತೆರಳಿದ್ದವರು ಸೇಫ್ :
ಶಿವಮೊಗ್ಗ ಜಿಲ್ಲೆಯಿಂದ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ 16 ಮಂದಿ ಮಹಿಳೆಯರು ಅಮರನಾಥ ಯಾತ್ರೆಗೆ ಜೂನ್ 30 ರಂದು ತೆರಳಿದ್ದರು. ತೆರಳಿರುವ ಅಷ್ಟೂ ಜನರು ನಿನ್ನೆ ಸಂಭವಿಸಿದ ಮೇಘಸ್ಪೋಟದ ಸಂದರ್ಭದಲ್ಲಿ ಯಾವುದೇ ತೊಂದರೆಗೀಡಾಗದೇ ಸುರಕ್ಷಿತವಾಗಿದ್ದಾರೆ. ವೈಷ್ಣೋದೇವಿ ದರ್ಶನ ಪಡೆದು ಅಮರನಾಥ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಮೇಘಸ್ಪೋಟದಿಂದ ಯಾತ್ರೆಗೆ ನಿರ್ಬಂಧ ಹೇರಿದ ಹಿನ್ನಲೆ ಯಾತ್ರಾರ್ಥಿಗಳು ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಶ್ರೀನಗರದಿಂದ ಸೋಮವಾರ ಶಿವಮೊಗ್ಗಕ್ಕೆ ವಾಪಸ್ ಬರುತ್ತೇವೆ. ಯಾವುದೇ ಆತಂಕ ಬೇಡ ಎಂದು ಸುರೇಖಾ ಮುರಳೀಧರ್ ಅವರು ಯಾತ್ರಾರ್ಥಿಗಳ ಕುಟುಂಬಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದ್ದಾರೆ



0 Comments