ಚಿಕ್ಕಮಗಳೂರು :

N.R ಪುರ : ಟ್ರ್ಯಾಕ್ಟರ್ ನಿಂದ ಬಿದ್ದು ಟ್ರ್ಯಾಲಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುಡುಬ ಶಂಕರಪುರ ಮಧ್ಯಭಾಗವಾದ ಚಬ್ಬೆ ನಾಡು ಬಳಿ ಈ ದುರಂತ ಸಂಭವಿಸಿದ್ದು, ಟ್ರ್ಯಾಕ್ಟರ್ ಚಲಿಸುತ್ತಿದ್ದ ವೇಳೆ ವ್ಯಕ್ತಿಯು ಟ್ರ್ಯಾಕ್ಟರ್ ನಿಂದ ಉರುಳಿ ಟ್ರಾಕ್ಟರ್ ಹಿಂಭಾಗದ ಟ್ರಾಲಿ ಚಕ್ರಕ್ಕೆ ಸಿಲುಕಿ ಧಾರಣವಾಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು 46 ವರ್ಷದ ಗಂಗಾ ನಾಯಕ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ದಾರುಣವಾಗಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗೆ ಚಾಲಕನ ನಿರ್ಲಕ್ಷ್ಯ ಕಾರಣ ಎಂಬುದಾಗಿ ಕೇಳಿಬಂದಿದ್ದು, ಘಟನಾಸ್ಥಳಕ್ಕೆ ಧಾವಿಸಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿಯು ಶಿವಮೊಗ್ಗ ತಾಲೂಕಿನ ಗಾಜನೂರು ಮೂಲದವನು ಎನ್ನಲಾಗಿದ್ದು ಮತನನ್ನು ಕಳೆದುಕೊಂಡ ಕುಟುಂಬದವರು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಶೃಂಗೇರಿಯ ನೂತನ ತಹಸೀಲ್ದಾರ್ ಆಗಿ ಗೌರಮ್ಮ.ಪಿ ನೇಮಕ : 

ಶೃಂಗೇರಿಗೆ ನೂತನ ತಹಸೀಲ್ದಾರ್ ಆಗಿ ಶ್ರೀಮತಿ ಗೌರಮ್ಮ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಹಸೀಲ್ದಾರ್ ಆಗಿ ಒಂದು ತಿಂಗಳು ಹತ್ತು ದಿನಗಳ ಕಾಲ ಡಾ. ಲೋಕೇಶ್ ಇವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಇವರ ಸ್ಥಳ ನಿಯುಕ್ತಿಗಾಗಿ ಸರ್ಕಾರದಲ್ಲಿ ವರದಿ ಮಾಡಿಕೊಳ್ಳಬೇಕೆಂದು ಆದೇಶಿಸಲಾಗಿದ್ದು, ಇವರ ಸ್ಥಾನಕ್ಕೆ ಜಿಲ್ಲಾಧಿಕಾರಿ ಕಚೇರಿ ಬೆಂಗಳೂರು ಇಲ್ಲಿನ ಸಾಮಾಜಿಕ ಭದ್ರತಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಗೌರಮ್ಮ ಪಿ ಇವರನ್ನು ಶೃಂಗೇರಿಯ ನೂತನ ತಹಸೀಲ್ದಾರ್ ಆಗಿ ಕರ್ನಾಟಕ ಸರ್ಕಾರ ನೇಮಕಗೊಳಿಸಿದೆ. ಶೃಂಗೇರಿಯ ತಾಲೂಕು ಕಛೇರಿಯಲ್ಲಿ ನಡೆದ ಹಕ್ಕುಪತ್ರ ಹಗರಣದ ಬಳಿಕ ಇದೀಗ ಮೂರನೇ ತಹಸೀಲ್ದಾರ್ ಆಗಿ ಗೌರಮ್ಮ.ಪಿ ನೇಮಕಗೊಂಡಿದ್ದಾರೆ.


ಕಾಲೇಜು ಸ್ಥಳಾಂತರಕ್ಕೆ ವಿರೋಧಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ 

ನರಸಿಂಹರಾಜಪುರ : ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕೆ ಕಾಲೇಜನ್ನು ದೇರಳಕಟ್ಟೆಗೆ ಸ್ಥಳಾಂತರ ಮಾಡಲು ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ವಿರೋಧಿಸಿ ಮುತ್ತಿನಕೊಪ್ಪದ ಗ್ರಾಮ ಪಂಚಾಯತ್ ಎದುರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಸಹ ಭಾಗಿಯಾಗಿದ್ದರು. ಮುತ್ತಿನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕೆ ಶಾಲೆಯನ್ನು ಮಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ, ಶಾಲೆ ಸ್ಥಳಾಂತರದ ಕುರಿತು ಶಾಸಕರ ಗಮನಕ್ಕೂ ತಾರದೆ ಕಳೆದ 26 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕಾಲೇಜನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಈ ಭಾಗದಲ್ಲಿ ಬಡವರ್ಗದ ಜನರ ಮಕ್ಕಳು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಜನರ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಕಲಾ ವಿಭಾಗ ಮಾತ್ರ ಈ ಕಾಲೇಜಿನಲ್ಲಿದ್ದು ಕಳೆದ ಸಾಲಿನಲ್ಲಿ 13 ಜನ ವಿದ್ಯಾರ್ಥಿಗಳು ದಾಖಲಾಗಿದ್ದು ಈ ಸಾಲಿನಲ್ಲಿ ಈಗಾಗಲೇ 12 ಜನರು ದಾಖಲಾಗಿದ್ದು ಕಾಲೇಜಿನ ಸ್ಥಳಾಂತರ ರದ್ದಾಗುವವರೆಗೂ ಸುದೀರ್ಘ ಹೋರಾಟ ನಡೆಸುವ ಎಚ್ಚರಿಕೆಯನ್ನು ಸ್ಥಳೀಯರು ಈ ಸಂದರ್ಭದಲ್ಲಿ ನೀಡಿದರು. 


ಎರಡು ಬಸ್ಸುಗಳ ನಡುವೆ ಮುಖಾಮುಖಿ ರಸ್ತೆ ಅಪಘಾತ : 

NR ಪುರ : ಶೃಂಗೇರಿಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KSRTC ಬಸ್ ಹಾಗೂ ಶಿವಮೊಗ್ಗದಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಕೆಕೆಬಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನರಸಿಂಹರಾಜಪುರ ಸಮೀಪದ ಉಂಬಳೆ ಬೈಲು ಪಂಚಾಯತ್ ಹುರಳಿಹಳ್ಳಿ ತೋಟದಕೆರೆ ಕ್ರಾಸ್ ಬಳಿ ಮುಖಾಮುಖಿ ಅಪಘಾತ ಸಂಭವಿಸಿದ್ದು ಶೃಂಗೇರಿಯಿಂದ ಮಧ್ಯಾಹ್ನ ಒಂದು ಗಂಟೆಗೆ ಹೊರಟಿದ್ದ KSRTC ಬಸ್ ಹಾಗೂ ಶಿವಮೊಗ್ಗದಿಂದ ಶೃಂಗೇರಿಗೆ ಮೂರು ಗಂಟೆಗೆ ಹೊರಟಿದ್ದ ಕೆಕೆಬಿ ಎರಡು ಬಸ್ಸುಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದ್ದು, ಎರಡೂ ಬಸ್ಸುಗಳ ಚಾಲಕ ಹಾಗೂ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದೆ. ಅಪಘಾತದ ತೀವ್ರತೆಗೆ ಎರಡೂ ಬಸ್ಸುಗಳು ಜಖಂಗೊಂಡಿದ್ದು ಗಾಯಾಳುಗಳನ್ನು ಬೇರೆ ಬಸ್ಸಿನ ಮುಖಾಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.


ಬೈಕ್ ಸವಾರನ ಮೇಲೆ ಆನೆ ದಾಳಿ :

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ಬೈಕ್ ಸವಾರನ ಮೇಲೆ ಆನೆ ದಾಳಿ ನಡೆಸಿದೆ. ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದ್ದು ಬೈಕ್ ಸವಾರ ಗಾಯಗೊಂಡಿದ್ದಾನೆ. ಆನೆ ದಾಳಿಗೆ ಬೈಕ್ ಜಖಂಗೊಂಡಿದ್ದು ಅದೃಷ್ಟವಶಾತ್ ಎಂಬಂತೆ ಪ್ರಾಣಾಪಾಯದಿಂದ ಸವಾರ ಬಚಾವ್ ಆಗಿದ್ದಾನೆ. ಸವಾರನ ಕಾಲು ಹಾಗೂ ಹೊಟ್ಟೆಗೆ ತೀವ್ರಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಮೂಡಿಗೆರೆ ಬಂದ್ :

ರಾಜಸ್ಥಾನದಲ್ಲಿ ನಡೆದ ಹಿಂದೂ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಸ್ವಯಂ ಪ್ರೇರಿತ ಮೂಡಿಗೆರೆ ಪಟ್ಟಣ ಬಂದ್ ಹಾಗೂ ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಸಾವಿರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೂಡಿಗೆರೆಯ ಎಂ.ಜಿ ರಸ್ತೆಯಲ್ಲಿ ಮೆರೆವಣಿಗೆಗೆ ಪೊಲೀಸರು ಅವಕಾಶ ನೀಡದೇ ಇದ್ದ ಸಂದರ್ಭದಲ್ಲಿ ಎಂ.ಜಿ ರಸ್ತೆ ಮುಂಭಾಗದಿಂದಲೇ ಬ್ಯಾರಿಕೇಡ್ ಗಳನ್ನು ತಳ್ಳಿ ಹಾಕಿ ಖಾಕಿ ಪಡೆಯ ಸರ್ಪಗಾವಲನ್ನು ಭೇದಿಸಿ ಎಂ.ಜಿ ರಸ್ತೆಗೆ ನುಗ್ಗಿದ ಪ್ರತಿಭಟನಾಕಾರರು.ಪೊಲೀಸ್ ಬ್ಯಾರಿಕೇಡಿಗಳನ್ನು ತಳ್ಳಿ ಪ್ರತಿಭಟನಾ ಮೆರವಣಿಗೆಯನ್ನು ಜನರು ನಡೆಸಿದರು. 


ಶಿವಮೊಗ್ಗ : 

ಸೀಗೆಹಟ್ಟಿ ಹರ್ಷನ ರಕ್ತಸಿಕ್ತ ಫೋಟೋ ಅಪ್ಲೋಡ್ ಮಾಡಿದ ನಾಲ್ವರ ಮೇಲೆ ಕೇಸ್ ದಾಖಲು : 

ಶಿವಮೊಗ್ಗ : ಅಮಾನುಷವಾಗಿ ನಡು ರಸ್ತೆಯಲ್ಲಿ ಹತ್ಯೆಗೀಡು ಮಾಡಲಾಗಿದ್ದ ಬಜರಂಗದಳದ ಕಾರ್ಯಕರ್ತ ಸೀಗೆಹಟ್ಟಿ ಹರ್ಷನ ಹತ್ಯೆಯ ನಂತರದಲ್ಲಿ ಆತನ ರಕ್ತ ಸಿಕ್ತ ದೇಹದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಿರುವ ಪೊಲೀಸರು ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ರಕ್ತ ಸಿಕ್ತನಾಗಿ ಬಿದ್ದ ಹರ್ಷನ ಫೋಟೋದೊಂದಿಗೆ ನಾಲ್ವರು ತಮ್ಮ ಫೊಟೊ ಅಪಲೋಡ್ ಮಾಡಿದ್ದರು, ಕೋಮು ಸೌಹಾರ್ಧತೆಗೆ ಧಕ್ಕೆ ಉಂಟು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದು, ನಾಲ್ವರು ಅಪ್ರಾಪ್ತ ಬಾಲಕರ ವಿರುದ್ಧ ಸುಮೋಟೊ ಪ್ರಕರಣ‌ ದಾಖಲಾಗಿದೆ. ಈ ನಾಲ್ಕು ಜನರಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೋಲಿಸರು ವಿಚಾರಣೆ ನಡೆಸಿದ್ದಾರೆ. ಪಿಐ ಸಂಜೀವ್ ಕುಮಾರ್ ಗಸ್ತಿನಲ್ಲಿದ್ದಾಗ‌ ರಾಗಿಗುಡ್ಡದ ಬಳಿ ನಾಲ್ವರು ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಒರ್ವನ ಬಳಿಯಿದ್ದ ಮೊಬೈಲ್ ಪೋನಿನಲ್ಲಿ ಹತ್ಯೆಯಾದ ಹರ್ಷ ರಕ್ತಸಿಕ್ತವಾಗಿ ಬಿದ್ದಿರುವ ಪೋಟೊ ಜೊತೆಗೆ ಟ್ಯಾಗ್ ಲೈನ್ ಹಾಕಲಾಗಿತ್ತು. ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು ಸ್ಟೇಟಸ್ ಹಾಕಿ ಹೆಸರು ಮಾಡಲು ಹೊರಟಿದ್ದ ನಾಲ್ವರು ವಿರುದ್ಧ ಪ್ರಕರಣ ದಾಖಲಾಗಿದೆ. ಹರ್ಷನ ಹತ್ಯೆಯ ನಂತರದಲ್ಲಿ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗಳಿಗೆ ವಾಹನಗಳಿಗೆ ಕಲ್ಲು ತೂರಾಟ ಬೆಂಕಿ ಹಚ್ಚಿ ಉದ್ರಿಕ್ತರ ಗುಂಪು ತೀವ್ರ ಮಟ್ಟದ ಹಾನಿಯನ್ನು ಮಾಡಿತ್ತು. ಬಳಿಕದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಬಹಳಷ್ಟು ಹರಸಾಹಸಪಟ್ಟಿದ್ದರು.