ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ನಿನ್ನೆ ರಾತ್ರಿಯ ವೇಳೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಇಡೀ ರಾಜ್ಯವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹತ್ಯೆಯನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಹಾಗೂ ತಾಲೂಕು ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಳ್ಯದ ಪ್ರವೀಣ್ ನೆಟ್ಟಾರ್ ಹತ್ಯೆಯ ಕುರಿತು ಆಕ್ರೋಶ ಹೊರಹಾಕಿರುವ ಬಿಜೆಪಿ ಯುವಮೋರ್ಚಾದ ಅನೇಕ ಪದಾಧಿಕಾರಿಗಳು ರಾಜೀನಾಮೆಗೆ ಮುಂದಾಗಿದ್ದಾರೆ. ಈ ಕುರಿತು ತಿಳಿಸಿರುವ ಪದಾಧಿಕಾರಿಗಳು ಹಿಂದುತ್ವದ ಅಜೆಂಡಾ ಹಿಡಿದು ಹಿಂದುತ್ವದ ಆಧಾರದ ಮೇಲೆ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡದೇ ಇರುವುದು ಖೇದಕರ ಸಂಗತಿ, ಈ ಹಿಂದೆಯೂ ಕಾರ್ಯಕರ್ತರ ಹತ್ಯೆಯಾದಾಗ ಕಠಿಣ ಕ್ರಮ ನಿರ್ದಾಕ್ಷಿಣ್ಯ ಕ್ರಮದ ಭರವಸೆಯನ್ನು ನೀಡಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳದೇ ಇರುವುದು ಖಂಡನಾರ್ಹ. ಭರವಸೆ ಕೇವಲ ಭರವಸೆಯಾಗಿ ಉಳಿದಿದೆ, ಇನ್ನಾದರೂ ಹೇಳುತ್ತಿರುವ ಕಠಿಣ ಕ್ರಮವನ್ನು ಜಾರಿಗೆ ತಂದು ಕಾರ್ಯಕರ್ತರ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ರಾಜೀನಾಮೆ ನೀಡುತ್ತಿದ್ದಾರೆ. 

ಜಿಲ್ಲಾ ಯುವಮೋರ್ಚಾ ಮಾಧ್ಯಮ ಪ್ರಮುಖರಾದ ಪ್ರೀತಮ್ ಹೆಬ್ಬಾರ್, ಶೃಂಗೇರಿ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಸಂಪೇಕೊಳಲು, ಕೊಪ್ಪ ತಾಲೂಕು ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ಹಾಗೂ ಸುಧನ್ವ ಬಿಕ್ಕರಣೆ, ಮನು ಹೆಗ್ಡೆ ಕೊಚ್ಚವಳ್ಳಿ ಸೇರಿದಂತೆ ಹಲವರು ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಹತ್ಯೆಯ ಕುರಿತು ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಆರೋಪಿಗಳ ತಲೆದಂಡಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಸಾಮೂಹಿಕ ರಾಜೀನಾಮೆ: ಹಿಂದೆಲ್ಲಾ ನಡೆದ ಕೊಲೆಗಳಿಗೆ ಯಾವ ರೀತಿಯಲ್ಲಿ ಉತ್ತರ ಸಿಕ್ಕಿದೆ ಎನ್ನುವುದು ನೋಡಿದ್ದೇವೆ, ಕಠಿಣ ಕ್ರಮ ಭರವಸೆಯಾಗಿಯೇ ಉಳಿದಿರುವ ಕಾರಣ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ಸೇರಿದಂತೆ ಜಿಲ್ಲಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ 9 ಮಂಡಲದ ಅಧ್ಯಕ್ಷರು ಸೇರಿ ಪಕ್ಷದ ಎಲ್ಲಾ ಜವಾಬ್ದಾರಿ ಗಳಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ

ಹಿಂದುತ್ವದ ಆಧಾರದಲ್ಲಿ ಹಿಂದುತ್ವ ಮತ್ತು ರಾಷ್ಟ್ರಿಯತೆಗಾಗಿ ಭಾರತೀಯ ಜನತಾ ಪಾರ್ಟಿಯನ್ನು ನನ್ನಂತ ಹಲವಾರು ಕಾರ್ಯಕರ್ತರು ಬೆಂಬಲಿಸಿ ಕೆಲಸ ಮಾಡುತ್ತಿದ್ದು, ಅಂತಹ ಕಾರ್ಯಕರ್ತರಿಗೆ ಪದೇ ಪದೇ ಇಂತಹ ಸಮಸ್ಯೆ ಎದುರಗುತ್ತಿದ್ದೂ ಇವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ನಮ್ಮದ್ದೆಲ್ಲ ಆಗಬೇಕು. ಧರ್ಮಕ್ಕಾಗಿ ಪ್ರಾಣ ನೀಡಿದ ಇಂತಹ ಹಲವಾರು ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು - ಸುಭಾಷ್ ಚಂದ್ರ ಕೊಳೆಗೋಡು

ಪ್ರವೀಣ್ ಹತ್ಯೆ ಖಂಡಿಸಿ ಶೃಂಗೇರಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಹಿಂದುಗಳ ಪರ ಹೊರತು ನಕಲಿ ಹಿಂದುಗಳ ಪರ ಅಲ್ಲ - ಸುನೀಲ್ ಸಂಪೆಕೊಳಲು