ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಕೊಡಗು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಮತ್ತೆ ಭೂಕಂಪನ ಉಂಟಾಗಿದೆ. 

ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಗುಡ್ಡ ಕುಸಿತ, ಪ್ರವಾಹ ಕೊಡಗಿನ ವಿವಿಧ ಪ್ರದೇಶಗಳಲ್ಲಿ ಉಂಟಾಗುತ್ತಿದ್ದು  ಈಗಾಗಲೇ ಹಲವು ಬಾರಿ ಭೂಕಂಪನ ಸಂಭವಿಸಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಚೆಂಬು, ಪೆರಾಜೆ, ಗೂನಡ್ಕ ವ್ಯಾಪ್ತಿಯಲ್ಲಿ ಲಘು ಭೂಕಂಪನ ಸಂಭವಿಸಿದೆ.


ಇಂದು ಸಂಜೆ ನಾಲ್ಕು ಗಂಟೆ ಒಂದು ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವ ಸ್ಥಳೀಯರಿಗಾಗಿದೆ. ಜುಲೈ ಹತ್ತನೇ ತಾರೀಖಿನಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಪ್ರದೇಶದ ಹಲವೆಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನಾರಿಗಾಗಿತ್ತು. ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು ಹಲವೆಡೆ ವರುಣ ಅವಾಂತರ ಸೃಷ್ಟಿಸಿದ್ದಾನೆ.

ಭಾರೀ ಮಳೆಗೆ ಮನೆ ಕುಸಿತ ; ಮನೆ ಸಂಪೂರ್ಣ ನೆಲಸಮ

ಭಾರೀ ಗಾಳಿಮಳೆಗೆ ಮನೆಯೊಂದು ಕುಸಿದಿರುವ ದುರ್ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ರಾಮಮ್ಮ ಹಾಗೂ ಸುಬ್ಬಯ್ಯ ಅವರ ಮನೆಯು ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ ಪರಿಣಾಮ ನಡೆಯಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದೆ. 


ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಯು ಕುಸಿದು ಬಿದ್ದಿದ್ದು, ಘಟನಾ ಸಂಬಂಧ ಸರ್ಕಾರವನ್ನು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿರುವ ಮನೆಯವರು ಅತೀ ಶೀಘ್ರವಾಗಿ ಪರಿಹಾರ ಒದಗಿಸಬೇಕೆಂದು ಕೋರಿದ್ದಾರೆ. 

ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾರೀ ಪ್ರಮಾಣದ ಹಾನಿಯುಂಟಾಗಿದೆ. ಹಲವೆಡೆ ಗುಡ್ಡ ಕುಸಿತ, ಪ್ರವಾಹ ಎದುರಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.