ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಪ್ರಕರಣವೊಂದರ ವಿಚಾರಣೆ ವೇಳೆ ಪೊಲೀಸ್ ಪಿಎಸೈ ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎಂಬ ಬಲವಾದ ಆರೋಪ ಯುವಕನಿಂದ ಕೇಳಿ ಬಂದಿತ್ತು. ಘಟನೆಯನ್ನು ಖಂಡಿಸಿ ಅನೇಕ ಪ್ರತಿಭಟನೆಗಳು ಹಾಗೂ ಪಿಎಸ್ಸೈ ಗೆ ಶಿಕ್ಷೆಯಾಗಬೇಕೆಂಬ ಆಗ್ರಹಗಳನ್ನು ದಲಿತಪರ ಸಂಘಟನೆಗಳು ನಡೆಸಿತ್ತು.  ಪ್ರಸ್ತುತ ಈ ಪ್ರಕರಣವನ್ನು ರಾಜ್ಯದ ಉಚ್ಚ ನ್ಯಾಯಾಲಯ ವಜಾಗೊಳಿಸಿ ಆದೇಶ ನೀಡಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಸೈ ಅರ್ಜುನ್ ಎಂಬುವವರು ವಿಚಾರಣೆಗೆಂದು ಕಿರಗುಂದ ಗ್ರಾಮದ ಪುನೀತ್ ಎಂಬಾತನನ್ನು ಠಾಣೆಗೆ ಕರೆಸಿ ಹಲ್ಲೆ ನಡೆಸಿ, ಮೂತ್ರ ಕುಡಿಸಿ ಹಿಂಸೆ ನೀಡಿದ್ದರು ಎಂಬುದಾಗಿ ಆರೋಪಿಸಿ ಪುನೀತ್ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದ್ದ. 


ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪಿಎಸ್ಸೈ ಅರ್ಜುನ್ ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಅಂತೆಯೇ ಅರ್ಜುನ್ ಅಮಾನತುಗೊಂಡಿದ್ದರು. ಈ ಬಳಿಕದಲ್ಲಿ ಎರಡು ಬಾರಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿತ್ತು. ಪ್ರಕರಣವು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಏರಿದಾಗ ಇಬ್ಬರೂ ರಾಜಿ ಮಾಡಿಕೊಂಡಿರುವ ಹಿನ್ನಲೆ ಈ ಪ್ರಕರಣವನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿ ಆದೇಶಿಸಿದೆ. 

ರಾಜಿ ಮಾಡಿಕೊಂಡಿರುವುದು ಹೋರಾಟಗಾರರಿಗೆ ಅವಮಾನ : 

ಪೊಲೀಸ್ ಪಿಎಸ್ಸೈ ಹಾಗೂ ಅರ್ಜುನ್ ನಡುವಿನ ಒಪ್ಪಂದವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪುನೀತ್ ಪರವಾಗಿ ಸಾಮಾಜಿಕ ಕಾರ್ಯಕರ್ತರು ಹಾಗೂ  ದಲಿತಪರ ಸಂಘಟನೆಗಳು ಹೋರಾಟ ನಡೆಸಿದ್ದರು. ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದಲೂ ಪರಿಹಾರದ ಹಣ ಬಿಡುಗಡೆಯಾಗಿತ್ತು ಪುನೀತ್ ನಡೆಯಿಂದ ಅವರ ಪರವಾಗಿಯೇ ಹೋರಾಡಿದ ಹೋರಾಟಗಾರರಿಗೆ ಅವಮಾನ ಉಂಟಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಕೇಸ್ ವಜಾ ಕುರಿತು ದೂರುದಾರ ಪುನೀತ್ ಸ್ಪಷ್ಟನೆ : 

ಈ ಕುರಿತು ತಿಳಿಸಿರುವ ಕಿರಗುಂದ ಪುನೀತ್ ನನ್ನ ಕೇಸ್ ವಜಾ ಆಗಿದೆ ಎಂಬ ವಿಷಯ ಈಗಷ್ಟೆ ತಿಳಿದಿದೆ. ಅನೇಕರು ಕರೆ ಮಾಡುತ್ತಿದ್ದಾರೆ, ದೂರುದಾರ ವಜಾಕ್ಕೆ ಅರ್ಜಿ ಸಲ್ಲಿಸಿದ್ದರು. ನಾನು ನಮ್ಮ ಹೈ ಕೋರ್ಟ್ ವಕೀಲರ ಮೂಲಕ ತಕರಾರು ಅರ್ಜಿಸಲ್ಲಿಸಿದ್ದೆವು, ನನ್ನಿಂದ ಸಹಿ ಹಾಕಿಸಿಕೊಂಡಿದ್ದರು. ವಜಾ ಹೇಗಾಯಿತೆಂದು ಇನ್ನೂ ಗೊತ್ತಿಲ್ಲ ನಾನು ರಾಜಿಯಾಗಿಲ್ಲ, ನಮ್ಮ ವಕೀಲರನ್ನು ಸಂಪರ್ಕಿಸಿ ವಜಾ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇನೆ. ನನ್ನ ಹೋರಾಟ ಮುಂದುವರೆಯುತ್ತದೆ ಎಂಬುದಾಗಿ ಪುನೀತ್ ತಿಳಿಸಿದ್ದಾರೆ. ಅಂತೆಯೇ ಕಳೆದ ತಿಂಗಳು ಇಲಾಖೆಯ ತನಿಖೆ ನಡೆದಾಗಲೂ ನಾನು ನನಗಾದ ಅನ್ಯಾಯವನ್ನು ಹೇಳಿದ್ದೇನೆ. ನನ್ನ ವಿರುದ್ದದ  ಸುಳ್ಳು ಅತ್ಯಾಚಾರ ಪ್ರಕರಣ ಕೂಡ ಇರುವುದರಿಂದ ನಾನೇಕೆ ರಾಜಿ ಮಾಡಿಕೊಳ್ಳಲಿ,   ಇಲಾಖೆ ವಿಚಾರಣೆ ಸಂದರ್ಭದಲ್ಲೂ ನನ್ನ ಮೇಲೆ ಅತ್ಯಾಚಾರ ನಡೆಸಿದಾಕೆ ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ನನ್ನ ವಿರುದ್ದ ಹೇಳಿದ್ದಾಳೆ. ಅತ್ಯಾಚಾರ ಆರೋಪ ಇಟ್ಟುಕೊಂಡು ನಾನ್ಯಾಕೆ ರಾಜಿ ಮಾಡಿಕೊಳ್ಳಲಿ. ಈ ಬಗ್ಗೆ ವಕೀಲರನ್ನು ಸಂಪರ್ಕಿಸಿ ಮುಂದಿನ ನಡೆ ತಿಳಿಸುತ್ತೇನೆ. ನ್ಯಾಯಕ್ಕಾಗಿ ನಾನು ಮುಂದಿನ ಕಾನೂನು ಹೋರಾಟ ಮುಂದುವರೆಸುತ್ತೇನೆ . ಅನೇಕರು ನಾನು ಮಾರಾಟ ಆದೆ ಎಂದು ನನ್ನ ವಿರುದ್ದ ಏನೆಲ್ಲಾ ಬರೆಯುತ್ತಿದ್ದಾರೆ. ನಾನು ಮಾರಾಟವಾಗಿಲ್ಲ. ನನ್ನ ಹೋರಾಟ ಮುಂದುವರೆಯುತ್ತದೆ ಎಂಬುದಾಗಿ ಪುನೀತ್ ಕಿರಗುಂದ ತಿಳಿಸಿದ್ದಾರೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 

https://forms.gle/APPtk8M3ZDk2oMka6