ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಮೂವರು ಖತರ್ನಾಕ್ ನಯ ವಂಚಕರನ್ನು ಕಾಫಿ ನಾಡಿನ ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆಹಿಡಿದಿದ್ದಾರೆ.
ಖಾಸಗಿ ಕಂಪನಿಯೊಂದರ ಹೆಸರನ್ನು ಬಳಸಿಕೊಂಡು ಉದ್ಯೋಗ ನೀಡುವುದಾಗಿ ನಿರುದ್ಯೋಗಿ ಯುವಕ ಯುವತಿಯರನ್ನು ನಂಬಿಸಿ ಗೂಗಲ್ ಪೇ ಫೋನ್ ಪೇ ಮೂಲಕ ಹಣ ವಸೂಲಿ ನಡೆಸುತ್ತಿದ್ದ ಮೂವರ ತಂಡವನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದಿದ್ದಾರೆ. ವಂಚನೆ ಕುರಿತಂತೆ ಈ ಹಿಂದೆಯೇ ಚಿಕ್ಕಮಗಳೂರಿನ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ಒಂದನ್ನು ರಚಿಸಿ ಪೊಲೀಸರು ವಂಚಕರನ್ನು ಪತ್ತೆ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಮೊಬೈಲ್ ನಂಬರ್ ನ ಜಾಡು ಹಿಡಿದು ಬೆಂಗಳೂರಿಗೆ ತೆರಳಿದ ಪೊಲೀಸರ ತಂಡ ಆರೋಪಿಗಳಾದ ಕುಮಾರಸ್ವಾಮಿ ಬಿನ್ ಮಾರೇಶ, ಲಕ್ಷ್ಮೀಶ ಬಿನ್ ಧರ್ಮೇಗೌಡ, ಪ್ರದೀಪ ಎಂ.ಕೆ ಬಿನ್ ಕೃಷ್ಣ
ಎಂಬ ಮೂವರು ಆರೋಪಿಗಳ ವಿಚಾರಣೆ ಆರಂಭಿಸಿದಾಗ ಗೂಗಲ್ ಪೇ, ಫೋನ್ ಪೇ ಮುಖಾಂತರ ಹಣ ಪಡೆದು ವಂಚನೆ ನಡೆಸಿರುವುದನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾರೆ.
ಆರೋಪಿಗಳಿಂದ ಏಳು ಮೊಬೈಲ್ ಫೋನ್, ಹಾಗೂ 12,500 ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಹಾಗೂ ಆರೋಪಿಗಳ ಬೇರೆ ಪ್ರಕರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ.






0 Comments