ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಬಣಕಲ್ ಭಾಗದಲ್ಲಿ ಭಾರೀ ಮಳೆಯಾಗಿದ್ದು ಮಳೆಯಿಂದ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ. ಈ ರಣ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಾತ್ಕಾಲಿಕವಾಗಿ ಚಿಕ್ಕಮಗಳೂರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಭೈರತಿ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಹಾನಿಯಿಂದ ಹಾನಿಗೊಳಗಾದ ಹೆಬ್ಬರಿಗೆ ಗ್ರಾಮದ ವನಜಾಕ್ಷಿ, ಕೊಟ್ಟಿಗೆಹಾರ ಆಜಾದ್‍ನಗರದ ಲೀಲಾ, ಸಬ್ಲಿ ಗ್ರಾಮದ ರಾಮಮ್ಮ ಅವರ ಮನೆಗೆ ಭೇಟಿ ನೀಡಿ ಸಂತ್ರಸ್ತರೊಡನೆ ಮಾತುಕತೆ ನಡೆಸಿದರು. ಹೆಬ್ಬರಿಗೆ ಗ್ರಾಮದ ವನಜಾಕ್ಷಿ ಅವರಿಗೆ 95 ಸಾವಿರ, ಸಬ್ಲಿ ಗ್ರಾಮದ ರಾಮಮ್ಮ ಅವರಿಗೆ 90 ಸಾವಿರ ಹಾಗೂ ಕೊಟ್ಟಿಗೆಹಾರದ ಆಜಾದ್‍ನಗರದ ಲೀಲಾ ಅವರಿಗೆ ವೈಯಕ್ತಿಕವಾಗಿ 50 ಸಾವಿರ ಪರಿಹಾರವನ್ನು ನೀಡಿದರು. ಕೊಟ್ಟಿಗೆಹಾರ ಆಜಾದ್‍ನಗರದ ಲೀಲಾ ಅವರ ಮನೆ ಶಿಥಿಲಾವಸ್ಥೆ ತಲುಪಿರುವುದರಿಂದ ಪ್ಲಾಸ್ಟಿಕ್ ಹಾಗೂ ಶೀಟಿನಿಂದ ಮಾಡಿದ ಮನೆಯಲ್ಲಿ ಇರುವ ಬಗ್ಗೆ ಸಚಿವರೊಡನೆ ಅಳಲು ತೋಡಿಕೊಂಡರು. ಸ್ಥಳದಲ್ಲೆ 50 ಸಾವಿರ ಪರಿಹಾರ ನೀಡಿದ ಸಚಿವರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಸೋಮವಾರದೊಳಗೆ ಸರ್ಕಾರದ ಪರಿಹಾರದ ಹಣವನ್ನು ಲೀಲಾ ಅವರ ಕುಟುಂಬಕ್ಕೆ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜು ಅವರು ಮೂಡಿಗೆರೆ ತಾಲ್ಲೂಕಿನ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಭೇಟಿ ನೀಡಿದ ಸ್ಥಳಗಳಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್ ನೀಡಲಾಗಿದ್ದು ಈ ಭಾಗದ ನೆರೆ ಸಂತ್ರಸ್ತರಿಗೆ ಪರಿಹಾರದ ಹಣವನ್ನು ಮನೆ ಬಾಗಿಲಿಗೆ ಅಧಿಕಾರಿಗಳು ವಿತರಣೆ ಮಾಡಲಿದ್ದಾರೆ ಮತ್ತು ಸೂಕ್ತ ಪರಿಹಾರವನ್ನು ಶೀಘ್ರವಾಗಿ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್, ಉಪವಿಭಾಗಾಧಿಕಾರಿ ನಾಗರಾಜ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್, ತಹಸೀಲ್ದಾರ್ ನಾಗರಾಜ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ಬಿಜೆಪಿ ಮುಖಂಡರಾದ ಸಂಜಯಗೌಡ, ನಯನ ತಳವಾರ, ಆದರ್ಶ್ ತರುವೆ, ಪರೀಕ್ಷಿತ್, ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಸತೀಶ್, ವಿಕ್ರಂ ಮುಂತಾದವರು ಇದ್ದರು.
ತನು ಕೊಟ್ಟಿಗೆಹಾರ, ವರದಿಗಾರರು






0 Comments