ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯು ಭಾರೀ ಪ್ರಮಾಣದ ನಷ್ಟವನ್ನು ಹಾಗೂ ಅಪಾಯವನ್ನು ಎದುರು ನೋಡುವಂತೆ ಮಾಡಿದೆ. 

ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿಗರು ನಲುಗಿದ್ದು ಇಂದೂ ಸಹ ಮಳೆಯ ತೀವ್ರತೆ ಹೆಚ್ಚಿದ್ದು ಮಲೆನಾಡು ಭಾಗದ ನದಿಗಳಾದ ತುಂಗಾ, ಭದ್ರಾ ನದಿಗಳು ಉಕ್ಕಿ ಹರಿಯುತ್ತಿದೆ. ಬಾಳೆಹೊನ್ನೂರಿನ ಬಿಕ್ಕರಣೆ ಸಮೀಪ ಹರಿಯುವ ಭದ್ರಾ ನದಿಯಲ್ಲಿ ಶವವೊಂದು ತೇಲಿಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಕೆಲವರ ಮೊಬೈಲ್ ಫೋನಿನಲ್ಲಿ ಸೆರೆಯಾಗಿದೆ. 

ಮಳೆಯು ಭಾರೀ ಅವಾಂತರಗಳನ್ನು ಸೃಷ್ಟಿಸಿದ್ದು, ಈ ಹಿಂದೆಯೂ ಕೂಡ ಚಿಕ್ಕಮಗಳೂರಿನ ಗ್ರಾಮದಲ್ಲಿ ಒಂದನೇ ತರಗತಿ ಬಾಲಕಿ ನೀರಿನಲ್ಲಿ ಕೊಚ್ಚಿಹೋಗಿದ್ದು ಎಷ್ಟೇ ಶೋಧಕಾರ್ಯ ನಡೆದರು ಕೂಡ ಆಕೆಯ ಸುಳಿವು ಈ ವರೆಗೂ ಪತ್ತೆಯಾಗಿಲ್ಲ. ದಿನಕಳೆದಂತೆ ಮಳೆಯ ಆರ್ಭಟ ಹೆಚ್ಚುತ್ತಾ ಹೋಗಿದ್ದು, ಆರಂಭದಲ್ಲೇ ಈ ರೀತಿಯ ಅವಘಡಗಳನ್ನು ಸೃಷ್ಟಿಸುತ್ತಿರುವ ವರುಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಾಂತರಗಳನ್ನು ಸೃಷ್ಟಿಮಾಡಬಹುದು ಎಂಬ ಭೀತಿಯಲ್ಲಿ ಮಲೆನಾಡಿಗರಿದ್ದಾರೆ. 


ಚಿಕ್ಕಮಗಳೂರಿಗೆ ತಾತ್ಕಾಲಿಕವಾಗಿ ಬೈರತಿ ಬಸವರಾಜ್ ಉಸ್ತುವಾರಿ ಸಚಿವರಾಗಿ ನೇಮಕ : 

ಚಿಕ್ಕಮಗಳೂರು ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ಭೈರತಿ ಬಸವರಾಜ್ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. 

ಕರ್ನಾಟಕದ ರಾಜ್ಯಪಾಲರ ಆದೇಶದ ಅನುಸಾರ ನಗರಾಭಿವೃದ್ದಿ ಸಚಿವ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ಎ ಭೈರತಿ ಬಸವರಾಜ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕಗೊಳಿಸಿ ಸರ್ಕಾರದ ಅಪರ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. 

ಕೆ.ಎಸ್ ಈಶ್ವರಪ್ಪ ಅವರಿಂದ ತೆರವಾದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಇದೀಗ ಭೈರತಿ ಬಸವರಾಜ್ ಅವರ ನೇಮಕ ಆಗಿರುವುದು ಮಲೆನಾಡಿನ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮಳೆಯಿಂದಾಗಿ ಉಂಟಾಗಿರುವ ಭಾರೀ ಪ್ರಮಾಣದ ನಷ್ಟವನ್ನು ಅತೀ ಶೀಘ್ರವಾಗಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಮೂಲಕ ಭರಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸರ್ಕಾರ ರಚನೆಯಾದ ಬಳಿಕದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ನಂತರದಲ್ಲಿ ಎಸ್. ಅಂಗಾರ,  ಗೃಹ ಸಚಿವ ಆರಗಜ್ಞಾನೇಂದ್ರ, ಶಾಸಕ ಕೆ.ಎಸ್ ಈಶ್ವರಪ್ಪ ಹಾಗೂ  ಐದನೇಯವರಾಗಿ ನಗರಾಭಿವೃದ್ದಿ ಸಚಿವರಾದ ಭೈರತಿ ಬಸವರಾಜ್ ಚಿಕ್ಕಮಗಳೂರಿನ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : 

https://forms.gle/APPtk8M3ZDk2oMka6


ಅತೀ ಶೀಘ್ರವಾಗಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮಳೆಯಿಂದಾಗಿ ತಲೆದೋರಿರುವ ಭಾರೀ ಪ್ರಮಾಣದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದಾರೆ. 

ಹಾನಿ ವೀಕ್ಷಣೆವೇಳೆ ಕೆಸರಿನಲ್ಲಿ ಸಿಲುಕಿದ ಸಚಿವರು : 

ಇಂದು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವರು ಮೂಡಿಗೆರೆ ಭಾಗದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದರು. ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದ ಕಾಫಿ ತೋಟದಲ್ಲಿ ಮಳೆಯಿಂದಾಗಿ ಉಂಟಾದ ಭೂಕುಸಿತದ ಸ್ಥಳವನ್ನು ವೀಕ್ಷಣೆ ಮಾಡುವ ವೇಳೆ ಸಚಿವರ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿತು, ಒಂದೆರಡು ನಿಮಿಷಗಳ ಕಾಲ ಸಚಿವರು ಕೆಸರಿನಿಂದ ಕಾಲನ್ನು ಮೇಲಕ್ಕೆತ್ತಲು ಪರದಾಟ ನಡೆಸಿದರು. ಈ ಬಳಿಕದಲ್ಲಿ ಅವರ ಗನ್ ಮ್ಯಾನ್ ಅವರನ್ನು ಕೆಸರಿನಿಂದ ಮೇಲಕ್ಕೆತ್ತಲು ಸಹಕರಿಸಿದರು. 

ಸಚಿವರೊಂದಿಗೆ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್, ಉಪ ವಿಭಾಗಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.