ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಅಮ್ಮ ಫೌಂಡೇಶನ್ ವತಿಯಿಂದ ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಶೃಂಗೇರಿಯ ಅನೇಕ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡಿಸಿಕೊಂಡರು. ಉಡುಪಿಯ ಪ್ರಸಾದ್ ನೇತ್ರಾಲಯದ ವೈದ್ಯರ ತಂಡ ಶೃಂಗೇರಿಯ ಶಾರದಾ ಧನ್ವಂತರಿ ಆಸ್ಪತ್ರೆಗೆ ಆಗಮಿಸಿ ರೋಗಿಗಳ ನೇತ್ರ ತಪಾಸಣೆಯನ್ನು ನಡೆಸಿ ಅಗತ್ಯವಿದ್ದವರಿಗೆ ಮುಂದಿನ ಚಿಕಿತ್ಸೆಯ ಕುರಿತಾಗಿ ತಿಳಿಸಿದರು.


ಆಸ್ಪತ್ರೆಯಲ್ಲಿ ನಡೆದ ನೇತ್ರ ತಪಾಸಣಾ ಕುರಿತಾದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜನತಾದಳದ ಕಳಸಪ್ಪ,ಜನತಾದಳದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಹಾಗೂ ಅವರ ಪತ್ನಿ ಸುಖಲತಾ ಶೆಟ್ಟಿ, ಜೆಡಿಎಸ್ ಮುಖಂಡರಾದ ಡಾ. ಅಣ್ಣಾದೊರೆ, ಆಸ್ಪತ್ರೆಯ ಟ್ರಸ್ಟಿಗಳಾದ ಶ್ರೀಮತಿ ಶೈಲಜಾ ರತ್ನಾಕರ ಹೆಗಡೆ, ಸೇರಿದಂತೆ ಜೆಡಿಎಸ್ ನ ಪದಾಧಿಕಾರಿಗಳು ಹಾಗೂ ಅಮ್ಮ ಫೌಂಡೇಶನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೊಪ್ಪದ ಬಾಳಗಡಿ ರಸ್ತೆಯಲ್ಲಿರುವ ಜೆಡಿಎಸ್ ನ ಕೇಂದ್ರ ಕಚೇರಿಯಲ್ಲಿ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು. ಈ ಶಿಬಿರಕ್ಕೆ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ನ ರಾಜ್ಯ ಮುಖಂಡರಾದ ಹೆಚ್.ಜಿ ವೆಂಕಟೇಶ್ ಅವರು ಮಾತನಾಡಿ ಆರೋಗ್ಯದ ಕುರಿತು ಹೆಚ್ಚಿನ ಪ್ರಾಮುಖ್ಯತೆ ನೀಡಿ ಸೂಕ್ತ ಗಮನವಹಿಸುವುದು ಮನುಷ್ಯರ ಆದ್ಯ ಕರ್ತವ್ಯವಾಗಿದೆ, ಜನರಿಗೆ ಸಾಂಕ್ರಾಮಿಕ ರೋಗಗಳ ಭಯದ ವಾತಾವರಣವಿದ್ದು ಜನರು ಈ ನಿಟ್ಟಿನಲ್ಲಿ ಸೂಕ್ತ ಗಮನವಹಿಸಿ ಆರೋಗ್ಯಕ್ಕೆ ಮನ್ನಣೆ ನೀಡಬೇಕೆಂದರು. ನಡೆದ ಈ ಶಿಬಿರದಲ್ಲಿ ಜನರು ಉಚಿತ ತಪಾಸಣೆ ಪಡೆದುಕೊಂಡು ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಮ್ಮ ಫೌಂಡೇಶನ್ ವತಿಯಿಂದ ಖಾಸಗೀ ಮೆಡಿಕಲ್ ಗಳಿಂದ ಪಡೆದು ಉಚಿತವಾಗಿ ರೋಗಿಗಳಿಗೆ ನೀಡಲಾಯಿತು. 

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6


ನರಸಿಂಹರಾಜಪುರ ಅಗ್ರಹಾರದ ಉಮಾಮಹೇಶ್ವರ ದೇವಾಲಯದಲ್ಲಿ ನಡೆದ ಆರೋಗ್ಯ ಮೇಳದ ಉದ್ಘಾಟನೆಯನ್ನು ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ಈ ಕುರಿತು ಮಾತನಾಡಿದ ಸ್ವಾಮೀಜಿಗಳು ತನ್ನ ಜನ್ಮದಿನದಂದು ಜನರ ಒಳಿತಿಗಾಗಿ, ಜನಸೇವೆಗಾಗಿ ಮೀಸಲಿಟ್ಟಿರುವ ಸುಧಾಕರ್ ಎಸ್ ಶೆಟ್ಟಿ ಅವರ ಕಾರ್ಯವೈಖರಿಯು ಅತ್ಯಂತ ಶ್ಲಾಘನೀಯವಾದುದು, ಈ ಸದುಪಯೋಗವನ್ನು ಜನರು ಬಳಸಿಕೊಂಡು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ತಜ್ಞ ವೈದ್ಯ ಡಾಕ್ಟರ್ ಅಮಿತ್ ಶಾ ಮಾತನಾಡಿ, ಜನರಿಗೆ ಆಸ್ತಿ, ಹಣಕ್ಕಿಂತ ಆರೋಗ್ಯವೇ ಭಾಗ್ಯ ಸದೃಢ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಸೂಕ್ತ ಹಾಗೂ ಸಿದ್ದ ಆಹಾರವನ್ನು ಸೇವಿಸುತ್ತಾ ಜೀವನ ನಿರ್ವಹಣೆ ಮಾಡಬೇಕು ಆರೋಗ್ಯದಲ್ಲಿ ಪಂಚಮಟ್ಟಿನ ಏರುಪೇರಾದರೂ ಕೂಡ ವೈದ್ಯರನ್ನು ಸಂಪರ್ಕಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದರು. 250 ಜನ ರೋಗಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆಯಲ್ಲಿ ಭಾಗಿಯಾಗಿದ್ದರು. 

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ನ ಕ್ಷೇತ್ರಾಧ್ಯಕ್ಷರಾದ ದಿವಾಕರ್ ಭಟ್, ಮುಖಂಡ ಸಂಜಯ್, ಎನ್ಕೆ ಉದಯ್ ಸುವರ್ಣ, ಬದ್ರಿಯಾ ಮಹಮ್ಮದ್, ಸುಧಾಕರ್ ಶೆಟ್ಟಿ ಅವರ ಸಹೋದರ ಶಿವಾಕರ ಶೆಟ್ಟಿ, ವಾಸಪ್ಪ ಕುಂಚೂರು ಸೇರಿದಂತೆ ಅಮ್ಮ ಫೌಂಡೇಶನ್ ನ ಸದಸ್ಯರು ಉಪಸ್ಥಿತರಿದ್ದರು.