ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಪರಮಪೂಜ್ಯ ಜಗದ್ಗುರುಗಳ ವಿರುದ್ಧವಾಗಿ ಅವಹೇಳನಕಾರಿ ಕಮೆಂಟ್ ಹಾಕಿದ್ದ ಮುನ್ನ ಅಜರ್ ಎಂಬಾತನಿಗೆ ಇಂದು ಶೃಂಗೇರಿಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 

ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವಿರುದ್ಧವಾಗಿ ಅವಹೇಳನಕಾರಿಯಾಗಿ ಫೇಸ್ಬುಕ್ ಪೇಜ್ ಒಂದರಲ್ಲಿ ಪೋಸ್ಟ್ ಹಾಕಿದ್ದ ಧಾರವಾಡದ ನವಲೂರು ವಾಸಿಯಾದ ಮುನ್ನಾ ಅಜರ್ (28) ಎಂಬುವವನಿಗೆ ಶೃಂಗೇರಿಯ ಜೆ.ಎಂ.ಎಫ್.ಸಿ ನ್ಯಾಯಾಲಯವು ಮೂರುವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 3,300 ರೂಪಾಯಿಗಳ ದಂಡವನ್ನು ವಿಧಿಸಿ ಆದೇಶಿಸಿದೆ. 


2015 ರ ನವೆಂಬರ್ 19 ರಂದು ಫೇಸ್ಬುಕ್ ನಲ್ಲಿ ಜಗದ್ಗುರುಗಳ ಕುರಿತಾಗಿ ಮುನ್ನಾ ಅಜರ್ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ, ಈ ಕುರಿತಾಗಿ ಶೃಂಗೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶೃಂಗೇರಿ ಮಠದ ಹಾಗೂ ಶ್ರೀಗಳ ಭಕ್ತರು ಅನೇಕ ಸಂಖ್ಯೆಯಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು. ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದರು. 

ಏನಿದು ಘಟನೆಯ ಹಿನ್ನೆಲೆ? 

ಶೃಂಗೇರಿ ಹಿಂದೂಸ್ (ಈಗ ಕರ್ನಾಟಕ ಹಿಂದೂಸ್) ಎಂಬ ಫೇಸ್ಬುಕ್ ಪೇಜ್ ನಲ್ಲಿ ಶೃಂಗೇರಿ ಶ್ರೀ ಮಠದ ಗುರುಪರಂಪರೆ ಕುರಿತು ಮಾಹಿತಿ ನೀಡುವ ಪೋಸ್ಟ್ ಒಂದನ್ನು ಹಾಕಲಾಗಿತ್ತು. ಅದರಲ್ಲಿ ಶೃಂಗೇರಿ ಶ್ರೀಗಳ ಫೋಟೋ ಸಹ ಇದ್ದಿತು.

ಮುನ್ನಾ ಅಜರ್ ಎಂಬ ಕಿಡಿಗೇಡಿ ಆ ಪೋಸ್ಟ್ ಗೆ ಅವ್ಯಾಚ್ಯ ಪದಗಳನ್ನು ಬಳಸಿ ಆಕ್ಷೇಪಾರ್ಹ ಕಮೆಂಟ್ ಗಳನ್ನು ಹಾಕಿದ್ದನ್ನು, ಈ ಕುರಿತು ಭಕ್ತ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಶೃಂಗೇರಿ ಸೇರಿದಂತೆ ಹಲವೆಡೆ ದೂರು ದಾಖಲಿಸಿ ಪ್ರತಿಭಟನೆ ಸಹ ನಡೆದಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕೆಲವೇ ದಿನಗಳಲ್ಲಿ ಧಾರವಾಡ ಮೂಲಕ ಆರೋಪಿ ಮುನ್ನ ಅಜರ್ ಎಂಬುವವನನ್ನು ಹೆಡೆಮುರಿ ಕಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ವೃತ ನಿರೀಕ್ಷಕ ಸುಧೀರ್ ಹೆಗ್ಡೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.


ಪ್ರಸ್ತುತ ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 3300 ರೂಪಾಯಿಗಳ ದಂಡವನ್ನು ವಿಧಿಸಿ ಶೃಂಗೇರಿಯ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು 2015 ರಲ್ಲಿ ಶೃಂಗೇರಿ ಠಾಣೆಯ ವೃತ್ತನಿರೀಕ್ಷಕರಾಗಿದ್ದ ಸುಧೀರ್ ಎಂ. ಹೆಗ್ಡೆ ನಡೆಸಿ ಆರೋಪಿಯನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದ್ದರು. ಆರೋಪಿಯ ವಿರುದ್ಧವಾಗಿ ವಕೀಲೆ ಹರೀಣಾಕ್ಷಿವಾದ ಮಂಡನೆ ನಡೆಸಿದ್ದರು.