ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಣದಾಸೆಗೆ ಮಗನೇ ತನ್ನ ತಾಯಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಅಮಾನವಿಯ ಘಟನೆ ವರದಿಯಾಗಿದೆ. 

ಹಣಕ್ಕಾಗಿ ಹೆತ್ತ ತಾಯಿಯೊಂದಿಗೆ ಜಗಳ ಮಾಡಿದ ಬಸವರಾಜು ಎಂಬಾತ ಆಕೆಯನ್ನು ರಾಡಿನಿಂದ ಹೊಡೆದು ಕೊಲೆ ಮಾಡಿ ನಂತರದಲ್ಲಿ ಆಕೆಯು ಬೆಂಕಿ ತಗುಲಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸುವ ಸಲುವಾಗಿ ಆಕೆಯ ಮೇಲೆ ಡೀಸಲ್ ಸುರಿದು ದೇಹವನ್ನು ಅರ್ದಂಬರ್ಧ ಸುಟ್ಟುಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ. ಈ ಕೃತ್ಯಕ್ಕೆ ಸ್ಥಳೀಯರೂ ಸಹಕಾರ ನೀಡಿದ್ದಾರೆ ಎನ್ನಲಾಗಿದ್ದು ಕೆಲವರ ಮೇಲೂ ಸಾಕ್ಷನಾಶದ ಆರೋಪದ ಮೇರೆಗೆ ದೂರು ದಾಖಲಾಗಿದೆ. 


ಮಗನಿಂದ ಹತ್ಯೆಗೀಡಾದ ತಾಯಿಯನ್ನು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಹಚ್ಚಡಮನೆ ಗ್ರಾಮದ ಲತಾ ಎಂದು ಗುರುತಿಸಲಾಗಿದೆ. ಹಣಕ್ಕಾಗಿ ಮಗ ಬಸವರಾಜು ತಾಯಿಯೊಂದಿಗೆ ಸದಾ ಜಗಳವಾಡುತ್ತಿದ್ದ ಎನ್ನಲಾಗಿದ್ದು ಜು.18 ರಂದು ಸಹ ಇದೇ ರೀತಿಯಲ್ಲಿ ಇಬ್ಬರ ನಡುವೆ ಕಲಹ ಏರ್ಪಟ್ಟಿದ್ದು, ತಾಯಿಯ ಮೆಲೆ ಸಿಟ್ಟಾದ ಬಸವರಾಜು ಒಲೆಯನ್ನು ಊದುವ ಕೊಳವೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ನಂತರದಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಸಲುವಾಗಿ ಅದರ ಸ್ವರೂಪವನ್ನೇ ತಿರಿಸುವ ಸಲುವಾಗಿ ಡೀಸಲ್ ಸುರಿದು ತಾಯಿಯ ಶವಕ್ಕೆ ಬೆಂಕಿ ಹಚ್ಚಿದ್ದಾನೆ. ಹಾಗೂ ಆ ಬಳಿಕ ಆಕೆಯ ಶವವನ್ನು ಸ್ಮಶಾನಕ್ಕೆ ಕೊಂಡೊಯ್ದು ಸ್ಥಳೀಯರ ನೆರವಿನಿಂದ ಪೂರ್ಣವಾಗಿ ಸುಟ್ಟುಹಾಕಲಾಗಿದೆ ಎನ್ನಲಾಗಿದೆ. ಈ ಕುರಿತಂತೆ ಸ್ಥಳೀಯರಿಗೆ ತಿಳಿದಿದ್ದರೂ ಕೂಡ ಪೊಲೀಸರಿಗೆ ಮಾಹಿತಿನೀಡದೆ ಆರೋಪಿ ನಡೆಸಿದ ನಾಟಕಕ್ಕೆ ಸಾಥ್ ನೀಡಿದ್ದಾರೆ ಎನ್ನಲಾಗಿದೆ. 


ಸಂಬಂಧಿಕರ ಮನೆಯಲ್ಲಿದ್ದ ಆರೋಪಿಯ ಸೆರೆ : 

ತಾಯಿಯ ಕೊಲೆಗೈದು ಮನೆಯಲ್ಲೇ ಆಕೆಗೆ ಬೆಂಕಿಹಚ್ಚಿ ಏನೂ ಗೊತ್ತಿಲ್ಲದವರಂತೆ ಆಕೆಯ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರವನ್ನು ನೆರವೇರಿಸಿ ಸಂಬಂಧಿಕರ ಮನೆಯಲ್ಲಿದ್ದ ಆರೋಪಿ ಬಸವರಾಜನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಇದಲ್ಲದೇ ಸಾಕ್ಷಿನಾಶಕ್ಕೆ ಸಹಕಾರ ನೀಡಿದ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.