ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಖಂಡಿಸಿ ಇಡೀ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನೇಕ ಪದಾಧಿಕಾರಿಗಳು ಈ ಹತ್ಯೆಯ ಕುರಿತು ಆಕ್ರೋಶ ಹೊರಹಾಕಿ ತಮ್ಮ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ, ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಸೈಯ್ಯದ್ ಪರ್ವೀನ್ ಘಟನೆ ಕುರಿತಂತೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತಿಳಿಸಿರುವ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಬಿಜೆಪಿಯಲ್ಲಿ ಸಕ್ರಿಯನಾಗಿ ಕಾರ್ಯನಿರ್ವಹಿಸಿದ್ದೆ, ಸಹೋದರ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಾಗಿದ್ದು ಆರೋಪಿಗಳ ಬಂಧನವಾಗುವವರೆಗೆ ಹಾಗೂ ಕೊಲೆಗೆ ನ್ಯಾಯ ಸಿಗುವವರೆಗೂ ತಾಲೂಕು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ರಾಜೀನಾಮೆ ಪತ್ರವನ್ನು ಭಾರತೀಯ ಜನತಾಪಾರ್ಟಿಯ ನರಸಿಂಹರಾಜಪುರದ ಅಧ್ಯಕ್ಷರಾದ ಅರುಣ್ ಕುಮಾರ್ ಅವರಿಗೆ ಬರೆದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾ ಯುವ ಮೋರ್ಚಾ ಸಾಮೂಹಿಕ ರಾಜೀನಾಮೆ :
ಹಿಂದೆಲ್ಲಾ ನಡೆದ ಕೊಲೆಗಳಿಗೆ ಯಾವ ರೀತಿಯಲ್ಲಿ ಉತ್ತರ ಸಿಕ್ಕಿದೆ ಎನ್ನುವುದು ನೋಡಿದ್ದೇವೆ, ಕಠಿಣ ಕ್ರಮ ಭರವಸೆಯಾಗಿಯೇ ಉಳಿದಿರುವ ಕಾರಣ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್ ಸೇರಿದಂತೆ ಜಿಲ್ಲಾ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ 9 ಮಂಡಲದ ಅಧ್ಯಕ್ಷರು ಸೇರಿ ಪಕ್ಷದ ಎಲ್ಲಾ ಜವಾಬ್ದಾರಿ ಗಳಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.





0 Comments