ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಎಂಬ ಯುವಕನ ಹತ್ಯೆ ರಾಜ್ಯದ ಜನರಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದ್ದು ಈ ಕುರಿತಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಬೇಸರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಕುರಿತಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ನಮ್ಮದೇ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ ಇದನ್ನು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತಿದೆ ಕ್ಷಮಿಸಿಬಿಡು ಪ್ರವೀಣ್ ಎಂದು ಅಸಹಾಯಕರಾಗಿ ಫೇಸ್ ಬುಕ್ ನಲ್ಲಿ ಬರೆದು ಹಾಕಿ ತಮಗಿರುವ ಅಸಮಾಧಾನವನ್ನು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.


ಭೀಕರ ಹತ್ಯೆಯ ಕುರಿತು ಸಂಘ ಪರಿವಾರ ಹಾಗೂ ಬಿಜೆಪಿಯ ಕಾರ್ಯಕರ್ತರು ತೀವ್ರಮಟ್ಟದ ಆಕ್ರೋಶವನ್ನು ಎಲ್ಲೆಡೆ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಶಾಸಕರು ಕೂಡ ಸರ್ಕಾರದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ತಮಗಿರುವ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರೆಕೊಟ್ಟಿರುವ ಬಂದ್ ಗೆ ಹಿಂದೂ ಬ್ರಿಗೇಡ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಮತ್ತು ಬಜರಂಗದಳ ಕೈಗೊಳ್ಳುವ ಯಾವುದೇ ನಿರ್ಣಯಕ್ಕೆ ನಮ್ಮ ಸಂಘಟನೆಯ ಸಹಮತ ಇರುತ್ತದೆ ಎಂದು ತಿಳಿಸಲು ಬಯಸುತ್ತೇನೆ - ಪ್ರವೀಣ್ ಖಾಂಡ್ಯ, ಹಿಂದೂ ಬ್ರಿಗೇಡ್ ಕಾರ್ಯಕರ್ತ

ಪ್ರವೀಣ್ ಹತ್ಯೆ ಖಂಡಿಸಿ ನಾಳೆ ಜಯಪುರ, ಕೊಪ್ಪ ಸ್ವಯಂ ಪ್ರೇರಿತ ಬಂದ್ :

ಅತ್ಯಂತ ಖಂಡನಾರ್ಹವಾದ ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಹೆಡೆಮುರಿಕಟ್ಟಿ ತುರ್ತಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ನಾಳೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹಾಗೂ ಜಯಪುರ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕರೆ ನೀಡಿ ಪ್ರತಿಭಟನಾ ಮೆರವಣಿಗೆ ನಡೆಸಿ ಅತೀ ಶೀಘ್ರವಾಗಿ ಆರೋಪಿಗಳ ಬಂಧನ ಹಾಗೂ ಶಿಕ್ಷೆ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಲಿದ್ದಾರೆ.