ಶೃಂಗೇರಿ-ಆಗುಂಬೆ-ಉಡುಪಿ ರಸ್ತೆ ಸಂಪರ್ಕ ಕಡಿತ: ಶೃಂಗೇರಿಯಿಂದ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಯು ಭೂಕುಸಿತದಿಂದಾಗಿ ಸಂಪೂರ್ಣ ಕುಸಿದಿದ್ದು ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ಶೃಂಗೇರಿಯ ನೇರಳಕುಡಿಗೆ ಬಳಿ ಈ ಭೂಕುಸಿತ ಉಂಟಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳ ಮೂಲಕ ತೆರಳುವಂತೆ ಸೂಚಿಸಲಾಗಿದೆ. ಭೂಕುಸಿತ ಉಂಟಾದ ಸ್ಥಳಕ್ಕೆ ಶೃಂಗೇರಿ ತಹಸೀಲ್ದಾರ್ ಗೌರಮ್ಮ, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂಧಿಗಳು ಭೇಟಿ ನೀಡಿದ್ದಾರೆ.

ರಸ್ತೆ ಕುಸಿತದಿಂದ ಶೃಂಗೇರಿ-ಆಗುಂಬೆ ನಡುವಿನ ರಾಜ್ಯ ಹೆದ್ದಾರಿ ಸಂಪೂರ್ಣ ಕುಸಿದು ಸಂಪರ್ಕ ಕಡಿತವಾಗಿದ್ದು ಈ ಕೆಳಗಿನ ಬದಲಿ ಮಾರ್ಗಗಳ ಮೂಲಕ ಸಂಚರಿಸಬಹುದಾಗಿದೆ:

ಶೃಂಗೇರಿ-ಕಾವಡಿ-ಬಿಲಗದ್ದೆ-ಶಾನುವಳ್ಳಿ-ಬೇಗಾರು-ಉಡುಪಿ(ಲಘು ವಾಹನಗಳು)

ಶೃಂಗೇರಿ-ಕೆಲ್ಲಾರ್(ಕಿಗ್ಗಾ)-ಮೀಗಾ-ನಲ್ಲೂರು-ಬೇಗಾರು-ಆಗುಂಬೆ-ಉಡುಪಿ(ಲಘು ವಾಹನಗಳು)

ಶೃಂಗೇರಿ-ಹರಿಹರಪುರ-ಬೇಗಾರು-ಆಗುಂಬೆ-ಉಡುಪಿ(ಲಘು ಹಾಗೂ ಭಾರೀ ವಾಹನಗಳು)

ಶೃಂಗೇರಿ-ನೆಮ್ಮಾರು-ಕಾರ್ಕಳ-ಉಡುಪಿ(ಲಘು ಹಾಗೂ ಭಾರೀ ವಾಹನಗಳು)

ದುರ್ಗಾದೇವಸ್ಥಾನದ ಸಮೀಪ ನಿಯಂತ್ರಣ ತಪ್ಪಿ ಉರುಳಿದ ಕಾರು : 

ಶೃಂಗೇರಿ ಹೊರವಲಯದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊರವಲಯವಾದ ದುರ್ಗಾದೇವಸ್ಥಾನದ ಬಳಿಯಲ್ಲಿ ಈ ಘಟನೆ ಸಂಭವಿಸಿದ್ದು ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಧರೆಗೆ ಗುದ್ದಿದೆ. ಅದೃಷ್ಟವಶಾತ್ ಎಂಬಂತೆ ಕಾರಿನಲ್ಲಿದ್ದವರು ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ. ಓರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾತ್ರಿ ಒಂದು ಗಂಟೆಯ ಆಸುಪಾಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಕಾರಿನಲ್ಲಿದ್ದವರು ಕೊಗ್ರೆ ಮೂಲದವರು ಎನ್ನಲಾಗಿದೆ.


ಭಾರೀ ಮಳೆ ಹಿನ್ನೆಲೆ ರಜೆ ಘೋಷಣೆ :

ಶೃಂಗೇರಿ, ಮೂಡಿಗೆರೆ, ಕೊಪ್ಪ : ಧಾರಾಕಾರ ಮಳೆ ಹಿನ್ನೆಲೆ ಮೂರೂ ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ದಿನಾಂಕ 15.07.2022ರಂದು ರಜೆ ಘೋಷಣೆ ಮಾಡಲಾಗಿದೆ.

ಮಕ್ಕಳ ಸುರಕ್ಷತಾ ದೃಷ್ಟಿಯಿಂದ ತಾಲೂಕಿನ ಎಲ್ಲಾ ಸರ್ಕಾರಿ , ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ ದಿನಾಂಕ 15.07.2022 ರಂದು ರಜೆ ಘೋಷಣೆ ಮಾಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. 


ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ದಿನಾಂಕ 15.07.2022 ರಂದು ರಜೆ ಘೋಷಣೆ ಮಾಡಲಾಗಿದೆ.


ಮುಸ್ಲಿಂ ಮಹಿಳೆಯಿದ್ದ ಮನೆಗೆ ಹೋದ ವ್ಯಕ್ತಿಗೆ ಹಲ್ಲೆ : 

ಚಿಕ್ಕಮಗಳೂರು : ಮುಸ್ಲಿಂ ಮಹಿಳೆಯೋರ್ವರ ಮನೆಯಲ್ಲಿ ಅನ್ಯಕೋಮಿನ ಪುರುಷನೊಬ್ಬ ಇದ್ದ ಎಂಬ ಕಾರಣಕ್ಕೆ ರಾತ್ರಿ ವೇಳೆಯಲ್ಲಿ ಮನೆಗೆ ತೆರಳಿ ಪುರುಷನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ರಾತ್ರಿಯ ವೇಳೆಯಲ್ಲಿ ಮುಸ್ಲಿಂ ಮಹಿಳೆಯಿದ್ದ ಮನೆಗೆ ತೆರಳಿದ್ದ ಕಾರಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆಗೈದು ಅದನ್ನು ವೀಡಿಯೋ ಮಾಡಲಾಗಿದೆ, ವಿಡಿಯೋ ದಲ್ಲಿ ಎರಡು ಲಕ್ಷ ಹಣ ನೀಡುವಂತೆ ಒತ್ತಾಯಿಸಿರುವುದು ಸಹ ಕೇಳುತ್ತದೆ, ಅನೈತಿಕ ಪೊಲೀಸ್ ಗಿರಿ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರಿನ ಉಪ್ಪಳ್ಳಿಯ ರೌಡಿ ಶೀಟರ್ ಅಜೀಜ್ ಎಂಬಾತನು ಸಹ ಸಹಚರರೊಂದಿಗೆ ತೆರಳಿ ಹಲ್ಲೆಗೈದು ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರಿನ ದಂಟರಮಕ್ಕಿಯಲ್ಲಿ ವಾಸಿಸುವ, ಬೇಲೂರು ಮೂಲದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದ್ದು, ಮುಸ್ಲಿಂ ಮಹಿಳೆಯ ಜೊತೆಗೆ ಏಕಿದ್ದೆ ಎಂದು ನಿಂದಿಸಿ ಬಟ್ಟೆ ಬಿಚ್ಚಿಸಿ ಹೊಡೆದು ಅದನ್ನು ವೀಡಿಯೋ ಸಹ ಮಾಡಲಾಗಿದೆ. ವೀಡಿಯೋದಲ್ಲಿ ಈ ವಿಡಿಯೋ ಅನ್ನು ನಿನ್ನ ಹೆಂಡತಿಗೆ ಕಳಿಸಬೇಕಾ ಎಂದು ಬ್ಲ್ಯಾಕ್ ಮೇಲ್ ಮಾಡಿರುವುದು, ಹಾಗೆಯೇ ವೀಡಿಯೊ ಕೊನೆಯಲ್ಲಿ ಎಷ್ಟು ಕೊಡುತ್ತೀಯ ಎಂದು ಕೇಳಿರುವುದು ಸಹ ರೆಕಾರ್ಡ್ ಆಗಿದ್ದು. ಈ ತಂಡ ಪುರುಷನನ್ನು ಹನಿಟ್ರ್ಯಾಪ್ ಗೆ ಸಿಲುಕಿಸಿದೆಯಾ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ. ಪೊಲೀಸ್ ಇಲಾಖೆ ಈ ಕುರಿತು ಗಮನಹರಿಸಿ ಹಲ್ಲೆ ನಡಿಸಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.


ಶಿವಮೊಗ್ಗ 

ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಶವವಾಗಿ ಪತ್ತೆ :


ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಚೋರಡಿಯಿಂದ ನದಿಯ ತಟದಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ಮನೆಯಲ್ಲಿ ಹೇಳಿ ಬಂದಿದ್ದ 64 ವರ್ಷದ ನಾಗರತ್ನ ಎಂಬ ವೃದ್ಧೆ, ಕುಮಧ್ವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮೂರುದಿನದ ನಂತರ ಆಕೆಯ ಮೃತದೇಹ ಪತ್ತೆಯಾಗಿದೆ. ಈಕೆ ಆತ್ಮಹತ್ಯೆಗಾಗಿ ನದಿಗೆ ಹಾರಿರುವುದಾ ಅಥವಾ ಪೂಜೆಗೆಂದು ನದಿಗೆ ಇಳಿದ ಪರಿಣಾಮ ನೀರುಪಾಲಾಗಿರುವುದಾ ಎಂಬುದರ ಕುರಿತಾಗಿ ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ. ಘಟನಾ ಸಂಬಂಧ ಕುಂಸಿ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಸಂಬಂಧ ಆಕೆಯನ್ನು ಪತ್ತೆ ಹಚ್ಚುವ ಕೆಲಸವನ್ನು ಆರಂಭಿಸಿದ್ದರು. ಆಕೆಯ ಹುಡುಕಾಟಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿಗಳು ಸತತ ಕಾರ್ಯಾಚರಣೆ ನೆಡಿಸಿದ್ದು ಸೇತುವೆಯ ಕಟ್ಟೆಯ ಮೇಲೆ ಪೂಜಾ ಬುಟ್ಟಿ ಹಾಗೂ ಬಟ್ಟೆಯೊಂದು ಇಟ್ಟು ನಾಗರತ್ನಮ್ಮ ಮಿಸ್ಸಿಂಗ್ ಆಗಿದ್ದರು.ಈ ಸುಳಿವಿನ ಮೇರೆಗೆ ಕಾರ್ಯಾಚರಣೆ ಇಳಿದ ಸಿಬ್ಬಂದಿಗಳು, ನಾಗರತ್ನ ಅವರ ಶವವನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರ ನಾಗರತ್ನ ಅವರದ್ದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂಬುದರ ಕುರಿತಾಗಿ ಸಂಪೂರ್ಣ ಮಾಹಿತಿ ಲಭ್ಯವಾಗಬೇಕಿದೆ.


ನಡು ರಸ್ತೆಯಲ್ಲಿ ಬರ್ಬರ ಹತ್ಯೆ :

ಶಿವಮೊಗ್ಗದಲ್ಲಿ ಹಾಡಹಗಲೇ ಮತ್ತೆ ಮಾರಕಾಸ್ತ್ರಗಳನ್ನು ಜಳಪಿಸಿ ಓರ್ವನ ಬರ್ಬರ ಹತ್ಯೆಯಾಗಿದೆ. ಭೂಗತ ಪಾತಕಿ ಹೆಬ್ಬೆಟ್ಟು ಮಂಜನ ಸಹವರ್ತಿಯೂ ಆಗಿದ್ದ ಹಂದಿಅಣ್ಣಿ ನಾಲ್ಕು ಕೊಲೆ ಪ್ರಕರಣಗಳಲ್ಲಿ ಆರೋಪಿತನಾಗಿದ್ದನು. ಇಂದು ಬೆಳಗ್ಗೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ಎದುರುಭಾಗದಲ್ಲಿ ಆತನನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಈ ರೀತಿಯ ಘಟನೆಗಳು ನಡೆಯುತ್ತಿದ್ದು ಸ್ಥಳೀಯರು ಪ್ರತಿನಿತ್ಯವೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ನಡೆದ ಈ ಗಂಭೀರ ಹಲ್ಲೆಯಿಂದ ಹಂದಿಅಣ್ಣಿಯ ತಲೆ ಒಡೆದುಹೋಗಿದ್ದು ರೌಡಿಶೀಟರ್ ಹಂದಿಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.



ಕೊಡಗು : 

ರಣಮಳೆ ಭಾರೀ ಗಾಳಿಗೆ ಧರೆಗುರುಳಿದ ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬ 

ಕಳೆದ 24 ಗಂಟೆಗಳಿಂದ ಕೊಡಗು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನೇಕ ಅವಘಡಗಳು ಸಂಭವಿಸುತ್ತಿದೆ. ಗಾಳಿ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಉದುರುತ್ತಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಹಾಗೂ ಮನೆಗಳು ಹಾನಿಗೊಂಡಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮುಖ್ಯ ರಸ್ತೆಗಳಿಗೆ ಬೃಹತ್ ಗಾತ್ರದ ಮರಗಳು ಉರುಳಿಬಿದ್ದಿದೆ. ಅರಣ್ಯ ಇಲಾಖೆ, ಎನ್‌ಡಿಆರ್‌ಎಫ್, ಗ್ರಾಪಂ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಭಾಗದ ಬಹುತೇಕ ರಸ್ತೆಗಳಲ್ಲೂ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗಾಳಿಬೀಡು ರಸ್ತೆ ಜಂಕ್ಷನ್ ಬಳಿ ಬೃಹತ್ ಗಾತ್ರದ ಮರಗಳು ಉರುಳಿಬಿದ್ದಿವೆ. ಮಡಿಕೇರಿ- ಸೋಮವಾರಪೇಟೆ ರಸ್ತೆ ಹಾಗೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಎರಡು ಮರಗಳು, ಭಾಗಮಂಡಲ, ತಲಕಾವೇರಿ ರಸ್ತೆಯಲ್ಲೂ ಮರಗಳು ಧರೆಗುರುಳಿವೆ. ಮರಗಳು ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಗಾಳಿಬೀಡು ಗ್ರಾಮ, ಮಡಿಕೇರಿಯ ಗದ್ದಿಗೆ, ಕನ್ನಂಡ ಬಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ಪೆರಾಜೆ ಗ್ರಾಮದ ಕುಂದಲ್ಪಾಡಿ ಪ್ರದೇಶದಲ್ಲಿ ಬರೇ ಕುಸಿದು ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದ್ದು, ಬೇರೆ ಮಾರ್ಗದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನ ಮುಂದುವರಿದಿದೆ. ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ನದಿ ತೀರ ಹಾಗೂ ಬೆಟ್ಟ ಗುಡ್ಡಗಳ ವ್ಯಾಪ್ತಿಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚಿಸಲಾಗಿದೆ. ಈ ಮಧ್ಯೆ ಬಿಟ್ಟೂಬಿಡದೆ ಗಾಳಿ ಸಹಿತ ಮಳೆಸುರಿಯುತ್ತಿದ್ದು ಮಳೆಯ ಅವಾಂತರದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಹಾನಿಗೊಳಗಾದ ಭಾಗದ ಮನೆಗಳ ಜನರು ಸೂಕ್ತವಾದ ಆಶ್ರಯವನ್ನು ಕಲ್ಪಿಸುವಂತೆ ಹಾಗೂ ಪರಿಹಾರವನ್ನು ಒದಗಿಸುವಂತೆ ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಕೋರಿದ್ದಾರೆ.