ಚಿಕ್ಕಮಗಳೂರು :
ಬೆಳೆಹಾನಿಗೆ ಪರಿಹಾರ ಪಡೆಯಲು ಉಚಿತ ಅರ್ಜಿ ವಿತರಣೆ :
ಶೃಂಗೇರಿ : ಮಳೆಯಿಂದಾಗಿ ಬೆಳೆ ಹಾನಿಗೊಳಗಾದವರು ಸರ್ಕಾರದಿಂದ ಪರಿಹಾರವನ್ನು ಪಡೆದುಕೊಳ್ಳಲು ಸಲ್ಲಿಸಲು ಬೇಕಾಗುವ ಅರ್ಜಿಯನ್ನು ಉಚಿತವಾಗಿ ಶೃಂಗೇರಿಯ ಜಾತ್ಯತೀತ ಜನತಾದಳದ ಕಚೇರಿಯಲ್ಲಿ ವಿತರಿಸಲಾಗುತ್ತಿದೆ ಅರ್ಹರು ಕಚೇರಿಯಲ್ಲಿ ಅರ್ಜಿಯನ್ನು ಪಡೆದುಕೊಂಡು ಸಲ್ಲಿಸಬಹುದು ಎಂದು ಜಾತ್ಯತೀತ ಜನತಾದಳದ ಶೃಂಗೇರಿ ತಾಲೂಕು ಅಧ್ಯಕ್ಷರಾದ ಟಿಟಿ ಕಳಸಪ್ಪನವರು ತಿಳಿಸಿದ್ದಾರೆ.
ಪರ್ಯಾಯ ರಸ್ತೆಯಲ್ಲಿ ಓಡಾಡಲು ಅನುಮತಿ ನೀಡುವಂತೆ ಸ್ಥಳೀಯರ ಆಗ್ರಹ :
ಕೆಲ ದಿನಗಳ ಹಿಂದಷ್ಟೇ ಆಗುಂಬೆ, ತೀರ್ಥಹಳ್ಳಿ, ಉಡುಪಿಯನ್ನು ಸಂಪರ್ಕಿಸುವ ಮುಖ್ಯ ರಸ್ತೆ ಶೃಂಗೇರಿ ನೇರಳೆಕುಡಿಗೆ ಬಳಿ ಭಾರೀ ಪ್ರಮಾಣದಲ್ಲಿ ಕುಸಿದಿತ್ತು, ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ನಿಗದಿತ ದಿನಾಂಕದವರೆಗೆ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದರು. ಪ್ರಸ್ತುತ ಸುತ್ತಮುತ್ತಲಿನ ಸ್ಥಳೀಯರು ತುರ್ತು ಸಮಯಗಳಲ್ಲಿ ಹಾಗೂ ಶಾಲಾ ಮಕ್ಕಳು ಶಾಲಾ ಕಾಲೇಜುಗಳಿಗೆ ಓಡಾಡುವ ಸಮಯದಲ್ಲಿ ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳಿಗೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳನ್ನು ಕೋರಿದರು. ಈ ಕುರಿತಾಗಿ ಸ್ಪಂದಿಸಿದ ಅಧಿಕಾರಿಗಳು ದ್ವಿಚಕ್ರವಾಹನ ಹಾಗೂ ಆಟೋಗಳಿಗೆ ನಿಗದಿತ ಸಮಯದಲ್ಲಿ ಮಾತ್ರ ಓಡಾಡಲು ಅವಕಾಶ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಸಕರ ಜನ್ಮದಿನದ ಸಲುವಾಗಿ ಕಾರ್ಯಕರ್ತರಿಂದ ಸೇವಾ ಚಟುವಟಿಕೆ :
ಚಿಕ್ಕಮಗಳೂರು ಶಾಸಕರಾದ ಸಿ.ಟಿ ರವಿ ಅವರ ಜನ್ಮದಿನದ ಸಲುವಾಗಿ ಬಿಜೆಪಿಯ ಮುಖಂಡರು ಹಾಗೂ ಸಿ.ಟಿ ರವಿ ಅವರ ಬೆಂಬಲಿಗರು ಇಂದು ಚಿಕ್ಕಮಗಳೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಚಟುವಟಿಕೆ, ಸಿಹಿ ವಿತರಣೆ, ಸ್ವಚ್ಛತಾ ಕಾರ್ಯಕ್ರಮ, ವೃದ್ಧಾಶ್ರಮಗಳಲ್ಲಿರುವ ವಯಸ್ಸಾದವರೊಂದಿಗೆ ಊಟ ಉಪಚಾರ ಅವರ ಕುಂದು ಕೊರತೆಗಳನ್ನು ಆಲಿಸುವುದರ ಮೂಲಕ ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು ಆಚರಿಸಿದರು.
ಹಳ್ಳ ಉಕ್ಕಿ ಹರಿದು ಜನರಿಗೆ ಸಂಕಷ್ಟ ; ಸಂಪರ್ಕ ಕಡಿತ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತ್ಯಾಗದಭಾಗಿ ತಾಂಡ್ಯ ಹಾಗೂ ಸಿದ್ದಾಪುರ ಗ್ರಾಮಗಳ ನಡುವಿನ ಸಂಪರ್ಕವು ಧಾರಾಕಾರ ಮಳೆಯಿಂದ ಉಕ್ಕಿ ಹರಿಯುವ ಹಳ್ಳದ ನೀರು ಸೇತುವೆ ಮೇಲೆ ಹರಿದ ಕಾರಣಕ್ಕೆ ಸ್ಥಗಿತಗೊಂಡಿದೆ. ಕಳೆದ ಮೂರು ದಿನಗಳಿಂದ ಈ ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲಾರದೆ ಪರದಾಡುವ ಸ್ಥಿತಿ ಎದುರಾಗಿದೆ. ಕುರಿತಾಗಿ ಸಮರ್ಪಕವಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳೀಯರು ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.
ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಬಿರುಕು :
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಬಿರುಕು ಮೂಡಿದೆ. ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಈ ಅವಘಡ ಸಂಭವಿಸಿದ್ದು, ಅಧಿಕಾರಿಗಳು ಬಾರಿಗಳನ್ನು ಅಳವಡಿಸಿ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೊಗ್ರೆ ಸೇತುವೆ ಕುಸಿತ :
ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಈ ಕೊಗ್ರೆ ಸೇತುವೆ ಕುಸಿತಗೊಂಡಿದ್ದು ವಾಹನ ಸವಾರರು ಹಾಗೂ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸೇತುವೆಯು ಕುಸಿದ ಪರಿಣಾಮ ಲಘು ವಾಹನಗಳ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಬಾರಿ ಸುರಿದ ಮಹಾಮಳೆಯಿಂದಾಗಿ ಸೇತುವೆಯು ಪುನಃ ಕುಸಿತಗೊಂಡಿದ್ದು ಸ್ಥಳೀಯರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡನ್ನು ಈ ಸೇತುವೆ ಸಂಪರ್ಕ ಕಲ್ಪಿಸುತ್ತಿತ್ತು, ಪ್ರಸ್ತುತ ಸೇತುವೆ ಬಿರುಕು ಬಿಟ್ಟು ಕುಸಿದಿರುವ ಪರಿಣಾಮ ಸ್ಥಳೀಯರಿಗೆ ಹಾಗೂ ಈ ಮಾರ್ಗದ ಮುಖಾಂತರ ಸಂಚರಿಸುವ ಪ್ರವಾಸಿಗರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಆದಷ್ಟು ಶೀಘ್ರವಾಗಿ ಸೇತುವೆಯನ್ನು ದುರಸ್ಥಿಗೊಳಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಾಸನ :
ಪರ್ಯಾಯ ಮಾರ್ಗದ ಮುಖೇನ ಸಂಚಾರಕ್ಕೆ ಸೂಚನೆ :
ಹಾಸನ : ಭಾರೀ ಪ್ರಮಾಣದ ಮಳೆಯಾದ ಹಿನ್ನೆಲೆ ಹಾಗೂ ಭೂಕುಸಿತ ಉಂಟಾದ ಹಿನ್ನೆಲೆ ವಾಹನ ಸಂಚಾರಕ್ಕೆ ಶಿರಾಡಿ ಘಾಟಿಯಲ್ಲಿ ನಿರ್ಬಂಧ ಹೇರಲಾಗಿತ್ತು, ಪ್ರಸ್ತುತ ಲಘು ವಾಹನಗಳಿಗೆ ಸಂಚಾರ ನಡೆಸಲು ಅವಕಾಶ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಬೆಂಗಳೂರು ಹಾಗೂ ಮಂಗಳೂರಿನೆಡೆಗೆ ಪ್ರಯಾಣ ಬೆಳೆಸುವ ಪ್ರವಾಸಿಗರು ಹೆಚ್ಚಾಗಿ ಶಿರಾಡಿ ಘಾಟ್ ನ ಮೂಲಕವೇ ಪ್ರಯಾಣ ನಡೆಸುತ್ತಾರೆ. ಭಾರೀ ಮಳೆಯ ಹಿನ್ನೆಲೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಜಿಲ್ಲಾಡಳಿತ ಶಿರಾಡಿ ಘಾಟ್ ನ ಪರ್ಯಾಯ ಮಾರ್ಗದ ಮುಖೇನ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಕಾರುಗಳು, ಜೀಪ್, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಹಾಗೂ ಆಂಬುಲೆನ್ಸ್ ಗಳು ಮಾತ್ರ ಪರ್ಯಾಯ ಮಾರ್ಗದಲ್ಲಿ ಓಡಾಡಲು ಅನುಮತಿ ಸೂಚಿಸಲಾಗಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ತಲುಪಲು ಸಕಲೇಶಪುರ - ಆನೆಮಹಲ್- ಕ್ಯಾನಹಳ್ಳಿ- ಚಿನ್ನಳ್ಳಿ- ಕಡಗರವಳ್ಳಿ- ಮಾರನಹಳ್ಳಿ ಮಾರ್ಗದ ಮೂಲಕ ಮಂಗಳೂರು ತಲುಪಬಹುದು ಅಂತೆಯೇ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವವರು ಮಾರನಹಳ್ಳಿ - ಕಾಡುಮನೆ - ಹಾರ್ಲೆ - ಕೂಡಿಗೆ - ಆನೆಮಹಲ್ - ಸಕಲೇಶಪುರ ಮಾರ್ಗದ ಮೂಲಕ ಮಂಗಳೂರು ತಲುಪುವುದು ಹಾಗೂ ಈ ಭಾಗದಲ್ಲಿ ಸಂಚಾರ ನಡೆಸುವವರು ವೇಗದ ಮಿತಿ 30 ಕಿ.ಮಿ / ಪ್ರತಿ ಗಂಟೆಗೆ ಎಂದು ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಸಿಂಗಲ್ ಲೇನ್ ಸಂಚಾರಕ್ಕೆ (ಏಕಮುಖ ಸಂಚಾರ) ಮಾತ್ರ ಅವಕಾಶ ನೀಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿಗಳಾದ ಆರ್ ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ :
ತೋಟದ ಕೆಲಸಕ್ಕೆ ತೆರಳಿದ್ದ ಮಹಿಳೆ ಸಾವು :
ತೀರ್ಥಹಳ್ಳಿ : ತೋಟದ ಕೆಲಸಕ್ಕೆಂದು ಹೋಗಿದ್ದ ಮಹಿಳೆಯೋರ್ವರು ಹಳ್ಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಗ್ರಾಮದಲ್ಲಿ ನಡೆದಿದ್ದು, ಮೃತ ಮಹಿಳೆಯನ್ನು ಭವಾನಿ ಶಂಕರ್ ಎಂದು ಗುರುತಿಸಲಾಗಿದೆ. ಎಂದಿನಂತೆ ಮಹಿಳೆಯು ತೋಟದ ಕೆಲಸಕ್ಕೆಂದು ತೆರಳಿದ್ದು ಸಂಜೆಯಾದರೂ ಮನೆಗೆ ಬಾರದ್ದನ್ನು ಕಂಡು ಕುಟುಂಬಸ್ಥರು ಆತಂಕದಿಂದ ಮಹಿಳೆಯನ್ನು ಹುಡುಕಾಡಿದ್ದರೆ. ಸುಮಾರು ರಾತ್ರಿ ಹನ್ನೊಂದು ಗಂಟೆಯ ವೇಳೆಗೆ ಮಹಿಳೆಯ ಶವ ಬಾಳೆಹಿತ್ತಲು ಹಳ್ಳದಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆಯು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕಳೆದುಕೊಂಡಿರುವ ಕುಟುಂಬವರ್ಗ ಹಾಗೂ ಸ್ಥಳೀಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.



0 Comments