ರೈತರಿಗೆ ಪೂರಕವಾಗುವ ಹಾಗೂ ಹೆಚ್ಚು ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಪಂಪ್ ಸೆಟ್ ಗಳ ಮೇಲಿನ ವಿದ್ಯುತ್ ಶುಲ್ಕವನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆ ಮಾಡಬೇಕೆಂದು ಶಾಸಕ ಕೆ.ಜಿ ಬೋಪಯ್ಯ ಸೇರಿದಂತೆ ಮಲೆನಾಡಿನ ಹಲವು ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದ್ದರು.
ಈ ಕೋರಿಕೆಗೆ ಪೂರಕವಾಗಿ ಸ್ಪಂದಿಸಿರುವ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ಹತ್ತು ಹೆಚ್.ಪಿ ಮೋಟಾರ್ ಪಂಪ್ ಸೆಟ್ಟುಗಳ ವಿದ್ಯುತ್ ಶುಲ್ಕವನ್ನು ಅದರ ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆ ಮಾಡಲು ಅನುಮೋದಿಸಿದೆ.
ಈ ಕುರಿತಾಗಿ ಸಂತಸ ವ್ಯಕ್ತಪಡಿಸಿರುವ ಶಾಸಕ ಕೆ.ಜಿ ಬೋಪಯ್ಯ ಅವರು, ನಿರಂತರವಾಗಿ ಶ್ರಮವಹಿಸಿದ ಕೃಷಿಕರ ಸೇವೆ ದೇಶಕ್ಕೆ ಅಗ್ರಮಾನ್ಯವಾದದ್ದು ಸರ್ಕಾರದ ವತಿಯಿಂದ ಇಂತಹ ಅತ್ಯಗತ್ಯವಾದ ಹಾಗೂ ಅಮೂಲಾಗ್ರವಾದ ಸೇವೆಯನ್ನು ರೈತಾಪಿ ವರ್ಗಕ್ಕೆ ಒದಗಿಸಿ ತನ್ಮೂಲಕ ಅವರ ಹಿತಕ್ಕಾಗಿ ನಾವೂ ಸಣ್ಣ ಸಣ್ಣ ಕೊಡುಗೆಗಳನ್ನು ನೀಡುವುದು ಮನಸ್ಸಿಗೆ ಹೆಚ್ಚಿನ ಸಂತೋಷ ನೀಡುತ್ತದೆ ಎಂದರು. ಹಾಗೂ ಮುಖ್ಯಮಂತ್ರಿಗಳ ಈ ಅನುಮೋದನೆಗೆ ಹರ್ಷವನ್ನು ವ್ಯಕ್ತಪಡಿಸಿದರು.
ಬೆಳೆಗಾರರನ್ನು ನೆನೆದು ಭಾವುಕರಾದ ಬೋಪಯ್ಯ :
ಕಾಂಗ್ರೆಸ್ ಬಲಿಷ್ಟವಾಗಿದ್ದ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಯಾಗಿ ಕಟ್ಟಿ ಬೆಳೆಸಲು ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಆರ್ಥಿಕವಾಗಿ ಸಹಕಾರ ಹಾಗೂ ಎಲ್ಲದಕ್ಕೂ ಬೆನ್ನೆಲುಬಾಗಿ ನಿಂತು ನೇರವಾದ ಕಾಫಿ ಬೆಳೆಗಾರರನ್ನು ನೆನೆದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಒಂದುಕ್ಷಣ ಭಾವುಕರಾದರು.
ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳಲ್ಲಿ ಕಾಫಿ ಬೆಳೆಗಾರರು ತೋರಿದ ನೈತಿಕ ಸ್ಥೈರ್ಯ ಹಾಗೂ ಹೋರಾಟಕ್ಕೆ ಅಣಿಯಾದ ಆ ಕ್ಷಣಗಳು ಸದಾ ಸ್ಮರಿಸುವಂತದ್ದು. ಅವರ ಧ್ವನಿಯಾಗಿ ಪ್ರತಿನಿಧಿಸಿ ಇಂತಹ ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುವುದು ಜೀವನದ ಅವಿಸ್ಮರಣೀಯ ಹಾಗೂ ಉತ್ತಮ ಕ್ಷಣವಾಗಿದೆ ಇದರಲ್ಲಿ ಅತ್ಯಂತ ಹೆಚ್ಚಿನ ಆತ್ಮತೃಪ್ತಿ ಇದೆ ಎಂಬುದಾಗಿ ತಿಳಿಸಿದರು.


.jpeg)



0 Comments