ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್ ಶೆಟ್ಟಿ ಅವರ ಸಮ್ಮುಖದಲ್ಲಿ ಇಂದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಸೇರ್ಪಡೆಗೊಂಡರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರ ಸಮ್ಮುಖದಲ್ಲಿ ಇಂದು ಬಾಳೇಹೊನ್ನೂರಿನಲ್ಲಿ ನಡೆದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ್ ಎಸ್ ಶೆಟ್ಟಿ ಅವರು ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಹಾಗೂ ಅಭಿವೃದ್ದಿಗೆ ಪೂರಕವಾಗಿರುವ ನಿಟ್ಟಿನಲ್ಲಿ ಚುನಾವಣೆಯನ್ನು ಎದುರಿಸಬೇಕು, ಚುನಾವಣೆಗಳಾಗಬೇಕು, ಧರ್ಮ ಹಾಗೂ ಜಾತಿ ಸಂಘರ್ಷಗಳ ಚುನಾವಣೆಯಿಂದ ಎಂದಿಗೂ ರಾಜ್ಯ ಹಾಗೂ ಕ್ಷೇತ್ರದ ಅಭಿವೃದ್ದಿ ಸಾಧ್ಯವಿಲ್ಲ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ 46000 ಜನ ಯುವಕರಿದ್ದು ಅವರಿಗೆಲ್ಲ ಸೂಕ್ತವಾದ ಉದ್ಯೋಗ ದೊರಕಬೇಕಿದೆ, ಇನ್ನೂ ನಿರುದ್ಯೋಗದ ಸಮಸ್ಯೆ ಕಾಡುತ್ತಿರುವುದು ವಿಪರ್ಯಾಸ 70 ವರ್ಷಗಳು ಕಳೆದರೂ ಈ ಭಾಗದಲ್ಲಿ ಉದ್ಯಮಗಳು ಬಾರದೇ ಇರುವುದು ಅತ್ಯಂತ ದುರಾದೃಷ್ಟಕರ ಸಂಗತಿ ಎಂದರು.
ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಈ ಭಾಗದಲ್ಲಿ ಅಧಿಕಾರಕ್ಕೆ ಬಂದರೆ ಕೊಪ್ಪ, ಶೃಂಗೇರಿ, ಎನ್. ಆರ್.ಪುರ ಭಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸಲಾಗುವುದು ಎಂಬುದಾಗಿ ತಿಳಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಗಾರ್ಮೆಂಟ್ಸ್ :
ಈ ಭಾಗದ ಮಹಿಳೆಯರ ಸ್ವಾವಲಂಬಿ ಹಾಗೂ ಸಬಲೀಕರಣದ ದೃಷ್ಟಿಯಿಂದ ಮೂರು ತಾಲೂಕುಗಳಲ್ಲಿ ಗಾರ್ಮೆಂಟ್ ಉದ್ಯಮ ಸ್ಥಾಪಿಸಿ ಪ್ರತೀ ಕ್ಷೇತ್ರದಲ್ಲೂ ಕನಿಷ್ಠ 500 ಮಹಿಳೆಯರಿಗೆ ಉದ್ಯೋಗ ದೊರೆಯುವಂತೆ ಮಾಡುವ ಆಶಯ ಹೊಂದಿರುವುದಾಗಿ ತಿಳಿಸಿದರು.
ರಸ್ತೆ, ನೀರು, ವಿದ್ಯುತ್ ಮತ್ತು ಹಕ್ಕುಪತ್ರಗಳ ವಿಚಾರದಲ್ಲಿ ಜಾತಿ ಹಾಗೂ ಪಕ್ಷವನ್ನು ಮೀರಿ ಈ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಉತ್ತಮ ಆಡಳಿತ ನಡೆಸುವುದಾಗಿ ಮತ್ತು ಈ ಕುರಿತಾಗಿ ಶ್ರಮ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನ ಮಾಗುಂಡಿ ಬೂತ್ ಅಧ್ಯಕ್ಷರಾದ ಶ್ರವಣ್, ಮಹಲ್ಗೋಡು ಬೂತ್ ಅಧ್ಯಕ್ಷರಾದ ನಾಗೇಶ್, ಬಾಳೆಹೊನ್ನೂರು ಘಟಕದ ಅಧ್ಯಕ್ಷರಾದ ಗೋವಿಂದೇಗೌಡ, ಜಮಾಲ್ ಸಾಹೇಬ್, ಉದಯ್ ಸುವರ್ಣ, ಆಲಮನೆ ಪ್ರಕಾಶ್, ಕುಕ್ಕುಡಿಗೆ ಅಣ್ಣಪ್ಪ ಗೌಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





0 Comments