ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ವರ್ಷಗಳಿಂದ ನಿಂತಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತೆ ಮಲೆನಾಡಿನಲ್ಲಿ ಸಂಚರಿಸುವ ಆಶಾಭಾವನೆ ಕಾರ್ಮಿಕರಲ್ಲಿ ಮೂಡಿದೆ. ಇದಕ್ಕೆ ಪೂರಕವಾದಂತೆ ಸಹಕಾರ ಸಾರಿಗೆ ಸಂಸ್ಥೆಗೆ ಮುಂದಿನ 5 ವರ್ಷಗಳ ಅವಧಿಗೆ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ರಸ್ತೆಯಲ್ಲಿ ಹೊಡೆದಾಟಕ್ಕೆ ಕಾರಣವಾದ ಸಾಮಾಜಿಕ ಜಾಲತಾಣದಲ್ಲಿನ ಕಿರಿಕ್
ದೇಶಕ್ಕೆ ವ್ಯಾಪಿಸಿದ್ದ ಮಹಾಮಾರಿ ಕೊರೋನ ವೈರಸ್ ನ ಸಂದರ್ಭದಲ್ಲಿ ಆರ್ಥಿಕವಾಗಿ ಸಂಸ್ಥೆ ನಷ್ಟದಲ್ಲಿದೆ ಎಂಬ ಕಾರಣವನ್ನು ನೀಡಿ ಬಸ್ಸುಗಳ ಸಂಚಾರವನ್ನು ನಿಲ್ಲಿಸಿದ್ದ ಸಂಸ್ಥೆ ಈ ವರೆಗೆ ಮುಚ್ಚಿದೆ. ಸಂಸ್ಥೆ ಆರಂಭದಿಂದ ಈ ವರೆಗೆ ನಿರಂತರವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದ ಕಾರ್ಮಿಕರು ತಮ್ಮ ಪಿಎಫ್ ಹಣವನ್ನು ಮರಳಿ ನೀಡುವಂತೆ ಹಾಗೂ ಸಂಸ್ಥೆಯನ್ನು ಪುನರಾರಂಭಮಾಡುವಂತೆ ಆಗ್ರಹಿಸಿ ಪ್ರತಿಭಟನೆ, ಧರಣಿ ಸತ್ಯಾಗ್ರಹವನ್ನು ನಡೆಸಿದ್ದರು.
ಅದೆಲ್ಲದರ ಫಲ ಎಂಬಂತೆ ಪ್ರಸ್ತುತ ಸಂಸ್ಥೆಗೆ 12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಒಟ್ಟು 13 ಸ್ಥಾನಗಳಿಗೆ ಜುಲೈ 17 ಕ್ಕೆ ಚುನಾವಣೆ ನಿಗದಿಯಾಗಿತ್ತು. ನಾಮನಿರ್ದೇಶನ ಪತ್ರಗಳನ್ನು ಜುಲೈ 9 ರ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. 11ನೇ ತಾರೀಕಿನಂದು ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಒಟ್ಟು ಸ್ಥಾನಗಳ ಪೈಕಿ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ಜುಲೈ 22 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಪ್ಪ ತಾಲ್ಲೂಕಿನ ನಾಗಲಾಪುರದ ಎನ್.ಎಂ.ನಾಗೇಶ್, ಕಡೂರು ತಾಲ್ಲೂಕು ಮಾದಾಪುರದ ಎಂ.ಸಿ.ಕುಮಾರ, ಎನ್.ಆರ್.ಪುರ ಭದ್ರಾ ಕಾಲೋನಿಯ ಅಬ್ದುಲ್ ಅಜೀಜ್, ಕೊಪ್ಪ ತಾಲ್ಲೂಕು ಕೊಳೆಹಲಸು ಕೆ.ಬಿ.ಸುಬ್ರಹ್ಮಣ್ಯ, ಕೊಪ್ಪ ಕೌರಿಗುಡ್ಡದ ಕೆ.ಎ.ಕೇಶವಮೂರ್ತಿ, ಚಿಕ್ಕಮಗಳೂರು ತಾಲ್ಲೂಕು ಕೋಡುವಳ್ಳಿ ಕೆ.ಡಿ.ಚೇತನ್, ಪಟ್ನ ಎಂ.ಹರೀಶ್, ಕೊಪ್ಪ ಸಿಗದಾಳುವಿನ ಎ.ಬಿ.ಸುಮಾ, ಎ.ಜಿ.ಜಾನಕಿ, ಕೊಪ್ಪ ಹಚ್ಚರಡಿ ಎಸ್.ಸಂದೀಪ, ಎನ್.ಆರ್.ಪುರ ಭಂಡಿಹೊಳೆಯ ಎಸ್.ರಾಘವೇಂದ್ರ, ತೀರ್ಥಹಳ್ಳಿ ತಾಲ್ಲೂಕು ಅಗ್ರಹಾರ ರಸ್ತೆಯ ಎಚ್.ಎಸ್.ಜೈಪ್ರಕಾಶ್ ನಿರ್ದೇಶಕರ ಆಯ್ಕೆಯಾಗಿದ್ದಾರೆ.
ಸಹಕಾರ ಸಾರಿಗೆ ಪುನಾರಾರಂಭಕ್ಕೆ ನೂತನ ಆಡಳಿತ ಮಂಡಳಿ ರಚನೆ ತುಂಬಾ ಭರವಸೆ ಮೂಡಿಸಿದೆ. ಷೇರುದಾರರ ಹಾಗೂ ನೌಕರರ ಒಗ್ಗಟ್ಟು ಅವಿರೋಧ ಆಯ್ಕೆಗೆ ಕಾರಣವಾಗಿದೆ. ಆಡಳಿತ ಮಂಡಳಿ ರಚನೆಯಿಂದ ಒಂದು ಹೆಜ್ಜೆ ಗೆಲುವನ್ನು ಕಂಡಿದ್ದು ಇದೀಗ ಸಂಸ್ಥೆಗೆ ಶ್ರೀರಾಮ್ ಫೈನಾನ್ಸ್ ನವರು ಹಾಕಿದ ಬೀಗ ತೆರವುಗೊಳ್ಳಬೇಕಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್ ಪೋರ್ಟ್ ಮತ್ತು ಜನರಲ್ ಮಜ್ದೂರ್ ಸಂಘದ ಅಧ್ಯಕ್ಷ ಎಚ್.ಆರ್.ಸಂಜೀವ ಹೇಳಿದ್ದಾರೆ. ಬೀಗ ತೆರವಿಗಾಗಿ ಕಾರ್ಮಿಕರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದು, ಬೀಗ ತೆರವುಗೊಂಡಲ್ಲಿ ನೂತನವಾಗಿ ರಚನೆಯಾದ ಆಡಳಿತ ಮಂಡಳಿ ಮುಂದಿನ ದಿನಗಳಲ್ಲಿ ಸರ್ಕಾರದ ಜತೆ ಮಾತುಕತೆ ನಡೆಸಿ ಸಂಸ್ಥೆಯ ಪುನರಾರಂಭಕ್ಕೆ ಸರ್ವ ಪ್ರಯತ್ನ ನಡೆಸಲಾಗುವುದು ಎಂದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ :
https://forms.gle/APPtk8M3ZDk2oMka6
ಮಲೆನಾಡು ಭಾಗದ ಜನರ ಸಂಚಾರಕ್ಕೆ ಅತ್ಯಂತ ಅವಶ್ಯಕವಾಗಿ ದೊರೆಯುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ಸುಗಳು ಶಾಲಾ ಕಾಲೇಜುಗಳು ಆರಂಭವಾಗುವ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ತಲುಪಿಸುತ್ತಿತ್ತು. ಹೊಸ ಆಡಳಿತ ಮಂಡಳಿ ರಚನೆಯಿಂದಾಗಿ ಸಂಸ್ಥೆಯ ಕಾರ್ಮಿಕರಲ್ಲಿ ಬಸ್ ಆರಂಭವಾಗುವ ವಿಶ್ವಾಸಕಂಡಿದ್ದು, ಅತೀ ಶೀಘ್ರವಾಗಿ ಬಸ್ಸುಗಳ ಸಂಚಾರ ಪುನರಾರಂಭವಾಗಲಿ ಎಂದು ಸಾರ್ವಜನಿಕರು ಕೂಡ ಹಾರೈಸಿದ್ದಾರೆ.


.jpeg)



0 Comments