ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ಶಾಸಕ ಕೆ.ಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಕೆ.ಎಸ್ ಈಶ್ವರಪ್ಪ ಬಿ.ರಿಪೋರ್ಟ್ ಪಡೆದಿದ್ದಾರೆ.

ಗುತ್ತಿಗೆದಾರನಾಗಿದ್ದ ಸಂತೋಷ್ ಏಪ್ರಿಲ್ 12 ರಂದು ಉಡುಪಿಯ ಹೋಟೆಲೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಆತ್ಮಹತ್ಯೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು 40 ಪರ್ಸೆಂಟ್ ಕಮಿಷನ್ ಪಡೆದಿರುವುದು ಕಾರಣ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು. ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬಳಿಕದಲ್ಲಿ ರಾಜ್ಯಾದ್ಯಂತ ಈಶ್ವರಪ್ಪ ವಿರುದ್ಧ ಅವರ ರಾಜೀನಾಮೆಗೆ ಆಗ್ರಹಿಸಿ ಭಾರೀ ಪ್ರತಿಭಟನೆಗಳು ನಡೆದಿದ್ದವು.


ಘಟನೆಯ ಹಿನ್ನೆಲೆ : 

ಏಪ್ರಿಲ್ ತಿಂಗಳ ಹನ್ನೆರಡನೆಯ ತಾರೀಕಿನಂದು ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮೊದಲು ಸಂತೋಷ್ ಸ್ನೇಹಿತರಿಗೆ ಸಂದೇಶ ಕಳಿಸಿದ್ದು, ನನ್ನ ಸಾವಿಗೆ ಸಚಿವ ಕೆ.ಎಸ್ ಈಶ್ವರಪ್ಪ ಕಾರಣ ಎಂದು ಸಂದೇಶ ಕಳುಹಿಸಿದ್ದರು. ಸಂದೇಶದಲ್ಲಿ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್‌ ಆರೋಪ ಮಾಡಲಾಗಿತ್ತು.

ಪ್ರಸ್ತುತ ಪ್ರಕರಣದ ಸಂಬಂಧ ಉಡುಪಿ ಟೌನ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಕೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೋರ್ಟ್‌ಗೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಆತ್ಮಹತ್ಯೆಗೆ ಕಾರಣವಾಗಿರುವುದರ ಬಗ್ಗೆ ಸಾಕ್ಷ್ಯಾಧಾರಗಳೇ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಇನ್ನೂ ಕೋರ್ಟ್‌ ಪೊಲೀಸರ ಬಿ-ರಿಪೋರ್ಟ್‌ ಅಂಗೀಕರಿಸಿಲ್ಲ ಎನ್ನಲಾಗುತ್ತಿದೆ.


ಹರ್ಷ ವ್ಯಕ್ತಪಡಿಸಿದ ಈಶ್ವರಪ್ಪ : 

ಪ್ರಕರಣದ ಸಂಬಂಧ ಪೊಲೀಸರು ಬಿ ರಿಪೋರ್ಟ್‌ ಹಾಕಿರುವ ಸುದ್ದಿ ತಿಳಿದು ಅತಿಯಾದ ಸಂತಸವಾಗಿದೆ. ನಾನು ತಪ್ಪು ಮಾಡಿಲ್ಲವೆಂದು ಮನೆದೇವರು ಚೌಡೇಶ್ವರಿ ಅಮ್ಮನ ಮೇಲೆ ಆಣೆ ಮಾಡಿದ್ದೆ. ದೇವಿಯ ಅನುಗ್ರಹ ಹಾಗೂ ಆಶೀರ್ವಾದದಿಂದ ಪ್ರಕರಣದಲ್ಲಿ ಖುಲಾಸೆ ಆಗಿರುವೆ. ಆರೋಪದಿಂದ ಮುಕ್ತನಾಗುವ ವಿಶ್ವಾಸ ನನಗೆ ಇತ್ತು ಎಂದು ಅಂದೂ ಹೇಳಿದ್ದೆ ಇಂದು ಆರೋಪ ಮುಕ್ತನಾಗಿದ್ದೇನೆ ಎಂದು ಕೆ.ಎಸ್‌.ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.