ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸೇವಾ ಪ್ರತಿಷ್ಠಾನ ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಬೇಗಾರ್ ನಲ್ಲಿ ಉಚಿತ ಹೊಲಿಗೆ ತರಬೇತಿ ಕಾರ್ಯಗಾರ ಉದ್ಘಾಟನೆಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರ್ ಕೈಮರ ವ್ಯಾಪ್ತಿಯ ಗ್ರಾಮಸ್ಥರಿಗೆ ಉದ್ಯೋಗ ದೃಷ್ಟಿಯಿಂದ ಅನುಕೂಲಕರವಾಗುವಂತೆ, ಹಾಗೂ ಸ್ವಾವಲಂಬನೆಯುತ ಜೀವನ ನಡೆಸುವ ನಿಟ್ಟಿನಲ್ಲಿ ಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನ ಕರ್ನಾಟಕ ಸಂಚಾಲಿತ ಇವರ ವತಿಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಗಾರವು ಉದ್ಘಾಟನೆಗೊಂಡಿತು. ಈ ಕಾರ್ಯಗಾರವನ್ನು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ್ ಜಿ ಇವರು ಉದ್ಘಾಟಿಸಿದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ : https://forms.gle/APPtk8M3ZDk2oMka6
ಈ ಕುರಿತು ಮಾತನಾಡಿದ ಅವರು ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಹಿಂದೂ ಸೇವಾ ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಾ ಸಾಗಿದೆ, ಮಹಿಳಾ ಸ್ವಾವಲಂಬನೆ ಹಾಗೂ ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕಾಗಿ ಪ್ರತಿಷ್ಠಾನವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಯೋಜಕರಾದ ನಟರಾಜ ರಾನಡೆ, ತಾಲೂಕು ಸಂಯೋಜಕರಾದ ನೂತನ್ ಸೂರ್ಯ, ಕಿರಣ್ ಹುಕ್ಳಿ, ಉಮೇಶ್ ಮೀಗಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ ಮಾರ್ಗಮಧ್ಯೆ ಭೂಕುಸಿತ :
ಶೃಂಗೇರಿ ಹಾಗೂ ಹೊರನಾಡನ್ನು ಸಂಪರ್ಕಿಸುವ ಮಾರ್ಗಮಧ್ಯೆ ಭೂಕುಸಿತ ಸಂಭವಿಸಿದೆ. ರಸ್ಥೆಯ ಪಕ್ಕದಲ್ಲಿನ ಮಣ್ಣು ಕುಸಿದಿದ್ದು, ಬೃಹದಾಕಾರದ ಮರಗಳು ಉರುಳಿದ್ದು ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಹ ಸ್ಥಿತಿ ಎದುರಾಗಿದೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಅತ್ತಿಗುಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಿಕಲ್ಲು ಬಳಿಯಲ್ಲಿ ಅಂದಾಜು 120 ಅಡಿಗಳಷ್ಟು ಆಳಕ್ಕೆ ಭೂಕುಸಿತ ಉಂಟಾಗಿದೆ. ಶೃಂಗೇರಿ, ಹೊರನಾಡು ಹಾಗೂ ಕಳಸ ಭಾಗದಲ್ಲಿ ಭಾರೀ ಮಳೆಯಾಗಿದ್ದು ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ ಎನ್ನಲಾಗಿದೆ.
ಮುಖ್ಯ ಸಂಪರ್ಕ ಮಾರ್ಗವಾದ ಅಬ್ಬಿಕಲ್ಲು ಬಳಿಯಲ್ಲಿ ಭೂಕುಸಿತ ಸಂಭವಿಸಿರುವ ಪರಿಣಾಮ ಆತಂಕದಲ್ಲಿ ವಾಹನ ಸವಾರರು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ರಸ್ಥೆಯ ಸಮೀಪದಲ್ಲೇ ಹಳ್ಳವೊಂದು ಹರಿದಿದ್ದು ಮಳೆಯ ತೀವ್ರತೆಗೆ ಹಳ್ಳದ ನೀರು ಗದ್ದೆಗಳಿಗೆ ಹರಿದು ರೈತರಿಗೂ ಮಳೆಯಿಂದಾಗಿ ಸಮಸ್ಯೆಗಳಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಕೊಂಚ ಮಟ್ಟಿಗೆ ಅಸ್ತವ್ಯಸ್ತವಾಗಿದ್ದು, ಎದುರಾಗಬಹುದಾದ ಅಪಾಯದ ಕುರಿತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಗಮನವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಕೋರಿದ್ದಾರೆ.
ಶಾಲಾ ಕಾಲೆಜುಗಳ ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಸಂಚಾರ ಮಾಡುವುದರಿಂದ ಅತೀ ಶೀಘ್ರವಾಗಿ ಅಧಿಕಾರಿಗಳು ಈ ಸಂಬಂದ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.


.jpeg)



0 Comments