ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ನಿವಾಸಿಗರನ್ನು ಕಾರ್ಯಾಚರಣೆಯ ಮೂಲಕ ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಠಾಣೆಯ ಪಿಎಸೈ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ನರಸಿಂಹರಾಜಪುರ ಠಾಣಾ ವ್ಯಾಪ್ತಿಯ ಸಿಂಸೆ ಬೋವಿ ಕಾಲೋನಿಯ ಒಂದು ಮನೆಯಲ್ಲಿ ನಾಲ್ವರು ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ವಾಸಮಾಡುತ್ತಿದ್ದುದ್ದನ್ನು ಪತ್ತೆ ಮಾಡಿರುವ ಪೊಲೀಸರು ಕ್ರಮಕ್ಕಾಗಿ ಮುಂದುವರೆದಿದ್ದಾರೆ.


ಬಂಧಿತ ಆರೋಪಿಗಳನ್ನು ಎಂ.ಡಿ ಖೈರುಲ್, ಇಸ್ಲಾಂ ಬಿನ್ ಅಬ್ದುಲ್ ಹನ್ನಾನ್ 30 ವರ್ಷ, ಎಂ.ಡಿ ರುಹುಲ್ ಅಮೀನ್ ಬಿನ್ ಎಂ.ಡಿ ಅಬ್ದುಲ್ ಹುನ್ನಾನ್ 40 ವರ್ಷ, 

ಮೋಮೀನ್ ಅಲಿ ಎಸ್.ಕೆ ಬಿನ್ ಮೊಹಮ್ಮದ್ ಶಫಿಕಲ್, 20 ವರ್ಷ, ಮುರ್ ಸಲೀಂ ಬಿನ್ ಮಹಮದ್ ರಹೀಮ್ 24 ವರ್ಷ ಎನ್ನಲಾಗಿದ್ದು ಈ ನಾಲ್ವರೂ ಕೂಡ ಬಾಂಗ್ಲಾದೇಶದರಾಗಿದ್ದಾರೆ.

ಭಾರತಕ್ಕೆ ಬರಲು ಕಾರಣ ಕೇಳಿದಾಗ ಕೆಲಸವನ್ನು ಅರಸಿಕೊಂಡು ಬಂದಿದ್ದಾಗಿ ತಿಳಿಸಿದ್ದು ಈ ಆರೋಪಿಗಳಿಂದ ಜನ್ಮ ದಿನಾಂಕ ದೃಢೀಕರಣ ಪತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ ವಶಕ್ಕೆ ಪಡೆದ ದಾಖಲಾತಿಗಳಲ್ಲಿ ಆರೋಪಿಗಳು ಬಾಂಗ್ಲಾದೇಶದವರೆಂದು ಧೃಢಪಟ್ಟಿದ್ದು ನಾಲ್ವರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ.


ಮಲೆನಾಡು ಭಾಗದ ತೋಟಗಳ ಕೆಲಸಗಳಿಗೆ ಇಂತಹ ಅಕ್ರಮ ವಲಸಿಗರು ಆಗಮಿಸುತ್ತಿರುವ ಕುರಿತಾಗಿ ಈ ಹಿಂದೆಯೂ ಅನೇಕ ಕಡೆಗಳಲ್ಲಿ ಕೇಳಿ ಬಂದಿತ್ತು. ಪೊಲೀಸ್ ಇಲಾಖೆ ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಈ ರೀತಿಯ ವಲಸಿಗರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರೂ ಆಗ್ರಹ ವ್ಯಕ್ತಪಡಿಸಿದ್ದಾರೆ.