ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವಿವಿಧೆಡೆ ಮನೆಗಳು ಕುಸಿತಗೊಂಡಿದೆ.

ಮೂಡಿಗೆರೆ ಕೊಟ್ಟಿಗೆಹಾರಾದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದ ತರುವೆ ಗ್ರಾಮದ ನಾರಾಯಣಮ್ಮ ಎಂಬುವವರ ಮನೆ ಮಳೆಯಿಂದಾಗಿ ಕುಸಿತಗೊಂಡಿದೆ, ಗ್ರಾಮದ ಕೃಷಿಕರಾದ ಟಿ.ಕೆ. ಅರವಿಂದ ಅವರ ತೋಟದಲ್ಲಿ ಮರಗಳು ಗಾಳಿಮಳೆಗೆ ಮುರಿದು ಬಿದ್ದು ಭಾರೀ ಪ್ರಮಾಣದ ಹಾನಿಯಾಗಿದೆ. ತರುವೆ ಅಜಾದ್ ನಗರದ ಯಮುನಾ ಎಂಬವರ ಮಹಿಳೆಯ ಮನೆಯ ಮೇಲ್ಛಾವಣಿಯ ಹೆಂಚುಗಳು ಹಾರಿಹೋಗಿದ್ದು ಮನೆಗೆ ಹಾನಿಯುಂಟಾಗಿದೆ.


ಇಲ್ಲಿನ ರಾಮನಗರದಲ್ಲಿ ದೇವಮ್ಮ ಮಂಜಯ್ಯ ಅವರ ಮನೆ ಮಳೆಗೆ ನೆಲಸಮವಾಗಿದೆ. ಬಣಕಲ್‍ನ ಹೆಬ್ಬರಿಗೆಯ ಮಂಜುನಾಥ್ ಅವರ ಮನೆ ಕುಸಿತವಾಗಿದೆ. ಈ ಗ್ರಾಮದಲ್ಲಿ ಎರಡು ಮನೆಗಳು ಕುಸಿತಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಬಣಕಲ್ ನ ಕೆಂಬಲ್ ಮಠದಲ್ಲಿ ಬೋಬು ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ, ಬಕ್ಕಿ ಗ್ರಾಮದ ನೇತ್ರ ಅವರಿಗೆ ಸೇರಿದ ಮನೆಯ ಗೋಡೆ ಗಾಳಿಮಳೆಗೆ ಕುಸಿದಿದೆ. ಬಿನ್ನಡಿ ಗ್ರಾಮದ ಅಶೋಕ್ ಎಂಬುವವರ ಶೆಡ್ ಸುರಿದ ಗಾಳಿ ಮಳೆಗೆ ಹಾರಿ ಹೋಗಿದೆ. ಈ ರೀತಿಯ ಅನೇಕ ಅವಾಂತರಗಳು ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿದ್ದು, ಜನರು ಮಳೆಯಿಂದ ತತ್ತರಿಸಿಹೋಗಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು