ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಬಳಿಕ ಸರ್ಕಾರದ ವಿರುದ್ಧ ಆಕ್ರೋಷಗೊಂಡ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದು ನಮ್ಮ ಹುಡುಗರಿಗೆ ಮೆಚ್ಯುರಿಟಿ ಕಡಿಮೆ ಆದಕಾರಣ ಹಿರಿಯರ ಬಗ್ಗೆ ಮಾತನಾಡುತ್ತಾರೆ. ನಾವು ಅವರಿಗೆ ಸಮಾಧಾನ ಮಾಡುತ್ತೇವೆ. ಹಿರಿಯರಾಗಿ ಅವರು ನಮಗೆ ಬೈದರು ಎಂದು ನಾವು ಅವರಿಗೆ ವಾಪಸ್ ಬೈಯುವುದೇ ಎಂದು ಹೇಳಿಕೆ ನೀಡಿದ್ದಾರೆ. ಹಾಗೆಯೇ ನಮ್ಮ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ಎಂದಿದ್ದಾರೆ.

ಹಿರಿಯರಾದ ಶ್ಯಾಮಪ್ರಸಾದ್ ಮುಖರ್ಜಿಗೆ ಅಂದು ಸಾಯುತ್ತೇನೆ ಎಂದು ಗೊತ್ತಿದ್ದರು ಸಹ ಏಕೆ ಸಾಯಲು ಹೋದರು?.  ನಾನು ರಾಜೀನಾಮೆ ನೀಡಿ ಹೋಗುತ್ತೇನೆ ಎಂದಿದ್ದರಾ ಅವರು?.. ಪಂಡಿತ್ ದೀನದಯಾಳು ಉಪಾಧ್ಯಾಯ ಅವರನ್ನು ರೈಲಿನಲ್ಲಿ ಕೊಂದರು. ಅವರು ನನಗೆ ಪಕ್ಷ ಬೇಡ ಎಂದು ಹೋರಹೋಗಿದ್ದರೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಕಂಗ್ರಾಟ್ಸ್ ಹೇಳಲು ಹೋದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ವಿರುದ್ಧ ಸಿ ಎಂ ಬೊಮ್ಮಾಯಿ ಗರಂ



ರಾಜೀನಾಮೆ ನೀಡಿದರೆ ಹಿಂದುತ್ವದ ಸಿದ್ದಾಂತಕ್ಕೆ ಅಪಮಾನ ಮಾಡಿದಂತೆ. ಕಳೆದ ಅನೇಕ ವರ್ಷಗಳಿಂದ ಸಂಘಟನೆ ಕಟ್ಟಿಕೊಂಡು ಬಂದಿರುವ ನಾಯಕರಿಗೆ ಅದು ಅವಮಾನ ಮಾಡಿದಂತೆ. ರಾಜೀನಾಮೆ ನೀಡುವುದು ಅದಕ್ಕೆ ಉತ್ತರ ಅಲ್ಲ. ಎಲ್ಲರೂ ರಾಜೀನಾಮೆ ವಾಪಸ್ ಪಡೆಯಬೇಕು ಎಂದರು.

ಅಕಸ್ಮಾತ್ ರಾಜೀನಾಮೆಗೆ ರಾಜ್ಯಾಧ್ಯಕ್ಷರು ಒಪ್ಪಿಕೊಂಡರೆ ಅವರ ಸ್ಥಾನಕ್ಕೆ ಹೊಸಬರು ಬರುತ್ತಾರೆ. ಈಗ ಬಿಜೆಪಿಗೆ ಕಾರ್ಯಕರ್ತರು ಸಿಗುವುದಿಲ್ಲವೇ?  ಈಗ ಆಕ್ರೋಶ ಮತ್ತು ಸಿಟ್ಟಿನಿಂದ ಮಾತ್ರ ಅವರು ರಾಜೀನಾಮೆ ನೀಡಿದ್ದಾರೆ. ಅವರು ಪ್ರಾಣ ಹೋದರೂ ಬಿಜೆಪಿ ಪಕ್ಷ ಹಾಗೂ ಹಿಂದುತ್ವ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ.

ಈಶ್ವರಪ್ಪ ಹೇಳಿಕೆಗೆ ಕಾರ್ಯಕರ್ತರು ಕಿಡಿ :

ಈಶ್ವರಪ್ಪ ಹೇಳಿಕೆಗೆ ಕಾರ್ಯಕರ್ತರು ಕಿಡಿಕಾರಿದ್ದು, ಅಧಿಕಾರದ ಆಸೆಗೆ ಹಿಂದೂ ಕಾರ್ಯಕರ್ತರ ಹೆಣದ ಮೇಲೆ ಕುರ್ಚಿ ಹಾಕಿಕೊಂಡು ಕೂರುವಷ್ಟು, ಕಮೀಷನ್ ಪಡೆಯುವಷ್ಟು ಮೆಚ್ಯುರಿಟಿ ನಮಗೆ ಇಲ್ಲ. ನಾವು ಹಿಂದುತ್ವಕ್ಕಾಗಿ ರಾಜಕೀಯಕ್ಕೆ ಬಂದಿರುವುದು ರಾಜಕೀಯಕ್ಕಾಗಿ ಹಿಂದುತ್ವ ಪಾಲನೆ ಮಾಡುತ್ತಿರುವವರಲ್ಲ. ನಾವೇನು ಹೆದರಿ ರಾಜೀನಾಮೆ ನೀಡಿ ಹೋಗಿಲ್ಲ, ನಾವು ತೊರೆದಿರುವುದು ಪಕ್ಷದ ಜವಾಬ್ದಾರಿಯೇ ಹೊರತು ಸಿದ್ಧಾಂತ, ಪಕ್ಷವನ್ನಲ್ಲ. ನಡು ಬಲವಿಲ್ಲದ ನಾಯಕರ ಅಡಿಯಲ್ಲಿ ಜವಾಬ್ದಾರಿ ನಿರ್ವಹಿಸುವುದಕ್ಕಿಂದ ಸಂಘಟನೆ ಮೂಲಕ ಸಮಾಜಕ್ಕಾಗಿ ದುಡಿಯುತ್ತೇವೆ. ಹಿಂದುತ್ವಕ್ಕೆ ಅಪಮಾನ ಮಾಡುವ ಕೆಲಸವನ್ನು ನಾವು ಎಂದೂ ಮಾಡಿಲ್ಲ, ಹಿಂದುತ್ವಕ್ಕಿಂತ ಹುದ್ದೆ, ಜವಾಬ್ದಾರಿ ನಮಗೆ ಮುಖ್ಯವಲ್ಲ ಎಂದು ತೋರಿಸಿದ್ದೇವೆ.

ಹಿಂದುತ್ವದ ಹೆಸರು ಹೇಳಿಕೊಂಡು ಗೆದ್ದು ಬಂದು ನಂತರ ಕದ್ದುಮುಚ್ಚಿ ಬಕ್ರೀದ್ ಗೆ ಹೋಗಿ ಬಿರಿಯಾನಿ ತಿಂದವರಿಂದ, ಕಮೀಷನ್ ಏಜೆಂಟರಂತೆ ಭ್ರಷ್ಟಾಚಾರ ಮಾಡುವವರಿಂದ ಹಿಂದುತ್ವಕ್ಕೆ ಅಪಮಾನವೇ ಹೊರತು ನಮ್ಮಿಂದಲ್ಲ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ.