ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ)  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂವೆ ಗ್ರಾಮದ ಬೀರ್ಗೂರು ದಿವಾಕರ ಹಾಗೂ ಶಾಲಿನಿ ದಂಪತಿಗಳ ಪುತ್ರ ರಿತ್ವಿಕ್ ಎಂಬ ವಿದ್ಯಾರ್ಥಿಗೆ ಕಳೆದ ಎರಡೂವರೆ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ದೈಹಿಕವಾಗಿ ಯಾವುದೇ ಚಟುವಟಿಕೆಯಲ್ಲಿ ತೊಡಗದೆ ನಿರಾಸಕ್ತಿಯೊಂದಿಗೆ ಬಳಲಿ ಕೊನೆಗೆ ಊಟವನ್ನು ಮಾಡಲು ನಿರಾಕರಿಸುವ ಸ್ಥಿತಿ ಎದುರಾಗಿತ್ತು.

ಶೃಂಗೇರಿ: ವಿವಾಹಿತೆ ಆತ್ಮಹತ್ಯೆ ಪ್ರಕರಣ ; ಹುಡುಗಿ ಮಾವ, ಗಂಡ ಅಂದರ್ !

ಬಾಲಕನ ಈ ವರ್ತನೆಯನ್ನು ಕಂಡ ಪೋಷಕರು ಮಂಗಳೂರಿನ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ಆತನಿಗೆ ಥಲೇಸ್ಸಿಮಿಯ ಖಾಯಿಲೆ ಇರುವುದನ್ನು ವೈದ್ಯರು ಧೃಢಪಡಿಸಿದ್ದರು. ಈ ಖಾಯಿಲೆಯಿಂದ ಗುಣಮುಖವಾಗಲು ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆಯಿದ್ದು ಬಾಲಕನ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ. 

ಜಾತ್ಯತೀತ ಜನತಾದಳ ಪಕ್ಷದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ, ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್ ಲಕ್ಷ್ಮಣಗೌಡ, ಸೇರಿದಂತೆ ಪ್ರಮುಖರು ಹಾಜರಿದ್ದರು. 

ರುತ್ವಿಕ್ ನ ಪೋಷಕರು ಮಗನ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಈಗಾಗಲೇ ವ್ಯಯಿಸಿದ್ದು, ಮಧ್ಯಮ ವರ್ಗದ ಕೃಷಿ ಕುಟುಂಬಸ್ಥರಾದ ಈ ಕುಟುಂಬಕ್ಕೆ ಸಹಾಯ ಒದಗಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಂಬಸ್ಥರಿಗೆ ಧೈರ್ಯತುಂಬಿ ಸಹಾಯದ ಭರವಸೆ ನೀಡಿದ್ದಾರೆ. 

ನಲವತ್ತು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ರಿತ್ವಿಕ್ ನ ಉಳಿವಿಗಾಗಿ ಅಗತ್ಯವಿದ್ದು, ಆತನ ಬದುಕನ್ನು  ಹಸನು ಮಾಡಲು ಮಾನವೀಯ ಹೃದಯಗಳ ಸಹಾಯವನ್ನು ಯಾಚಿಸುತ್ತಿದೆ ಆತನ ಕುಟುಂಬ. 

ಚಿಕಿತ್ಸೆಗಾಗಿ ಹಣ ಸಂಗ್ರಹ : 

ಬಾಲಕ ರುತ್ವಿಕ್ ನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಲುವಾಗಿ ಮೂಡಿಗೆರೆಯ ನಿಡುವಾಳೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸಚಿನ್ ಮರ್ಕಲ್ ನೇತೃತ್ವದ ತಂಡವು ಬಸ್ ನಿಲ್ದಾಣಗಳಲ್ಲಿ ನಿಧಿ ಸಂಗ್ರಹ ನಡೆಸಿತು. ಈ ದೊಡ್ಡ ಮೊತ್ತದ ಹಣವನ್ನು ಒಬ್ಬರೇ ಭರಿಸಲು ಸಾಧ್ಯವಿಲ್ಲದ ಕಾರಣ ಬಾಲಕನ ಚಿಕಿತ್ಸೆಗೆ ನೆರವಾಗುವ ಸಲುವಾಗಿ ಕೈಲಾದ ಸೇವೆಯನ್ನು ನಡೆಸುತ್ತಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 


ಥಲೇಸ್ಸಿಮಿಯ ಖಾಯಿಲೆ ಕುರಿತು : 

ತಿಂಗಳಾಂತ್ಯಕ್ಕೆ ಈತನಿಗೆ ರಕ್ತ ಕೊಡಿಸದಿದ್ದಲ್ಲಿ ರುತ್ವಿಕ್ ನ ಮುಖ ಬಿಳಿಚಿಕೊಳ್ಳುತ್ತದೆ, ಜ್ವರ ಬಂದರೆ ಕಡಿಮೆಯಾಗುವುದೇ ಇಲ್ಲ, ಬಿಳಿ ರಕ್ತ ಕಣ ಉತ್ಪತ್ತಿಯಾಗದೇ ಇರುವ ಖಾಯಿಲೆ ಥಲೆಸ್ಸೀಮಿಯ.  ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇರುವುದು ಬಿಳಿ ರಕ್ತಕಣಗಳಿಗೆ ಮಾತ್ರ, ಈ ಬಿಳಿ ರಕ್ತಕಣಗಳು ಉತ್ಪತ್ತಿಯಾಗದೇ ಇದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಯಾವುದಾದರೂ ಖಾಯಿಲೆ ಬಂದರೆ ಅದು ಕಡಿಮೆಯಾಗುವುದಿಲ್ಲ. ರಿತ್ವಿಕ್ ದೇಹದಲ್ಲಿ ಬಿಳಿ ರಕ್ತಕಣಗಳ ಉತ್ಪತಿ ನಿಂತು ಹೋಗಿದೆ. ಸಾಮಾನ್ಯ ಜ್ವರ ಬಂದರೂ ಕೂಡ ಮೆದುಳಿಗೆ ಹತ್ತಿಕೊಳ್ಳುತ್ತದೆ. ಇದೀಗ ತಿಂಗಳಿಗೆ ಎರಡು ಬಾರಿ ರಕ್ತ ಕೊಡಿಸಲು ಮಂಗಳೂರಿಗೆ ಹೋಗಿಬರುತ್ತಿದ್ದು, ಇತನಿಗೆ ಅಂಟಿದ ಕಾಯಿಲೆ ದೂರವಾಗಬೇಕಾದರೆ ಮೂಳೆ ಮಜ್ಜೆಯ ಕಸಿ ಶಸ್ತ್ರ ಚಿಕಿತ್ಸೆ ( ಬೋನ್ ಮ್ಯಾರೋ ಟ್ರಾನ್ಸ್ ಪ್ಲೇಟೇಶನ್) ಯಿಂದ ಸಾಧ್ಯ ಎಂದಿದ್ದಾರೆ ಬೆಂಗಳೂರಿನ ವೈದ್ಯರು ಆದರೆ ಇದಕ್ಕೆ 40 ಲಕ್ಷಗಳಷ್ಟು ಖರ್ಚು ಇದೆ ಎಂದಿದ್ದಾರೆ.

ಸಹಾಯ ಮಾಡುವವರು ರಿತ್ವಿಕ್ ರವರ ತಂದೆ ದಿವಾಕರ ಅವರ ಹೆಸರಿಲ್ಲಿರುವ ಕೆನರಾ ಬ್ಯಾಂಕ್ ಬನ್ನೂರು ಶಾಖೆಯ ಖಾತೆ ಸಂಖ್ಯೆ 5391101001255 ಕ್ಕೆ ಅಥವಾ 6363924671 ಮೊಬೈಲ್ ಸಂಖ್ಯೆಗೆ ಪೋನ್ ಪೇ / ಗೂಗಲ್ ಪೇ ಮೂಲಕ ಸಹಾಯ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ 6363924671 ಈ ನಂಬರ್ ನ್ನು  ಸಂಪರ್ಕಿಸಬಹುದಾಗಿದೆ.